ಭರ್ಜರಿ ಮಳೆ : ಕಲಬುರಗಿಯ 25 ಹಳ್ಳಿಗೆ ನುಗ್ಗಿದ ನೀರು - 10ಕ್ಕೂ ಹೆಚ್ಚು ಸೇತುವೆಗಳು ಮುಳುಗಡೆ

| Published : Sep 03 2024, 01:38 AM IST / Updated: Sep 03 2024, 09:51 AM IST

ಭರ್ಜರಿ ಮಳೆ : ಕಲಬುರಗಿಯ 25 ಹಳ್ಳಿಗೆ ನುಗ್ಗಿದ ನೀರು - 10ಕ್ಕೂ ಹೆಚ್ಚು ಸೇತುವೆಗಳು ಮುಳುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಕಲಬುರಗಿ ಜಿಲ್ಲಾಧ್ಯಂತ ಭರ್ಜರಿ ಮಳೆಯಾಗಿದ್ದು, ಕಾಗಿಣಾ ನದಿ ನೀರಿನ ಪ್ರಮಾಣ ಹೆಚ್ಚಾಗಿ ಹರಿದು ಗ್ರಾಮಗಳು ಜಲಾವೃತಗೊಂಡಿರುವುದು.

 ಬೆಂಗಳೂರು : ಕಲಬುರಗಿ, ಯಾದಗಿರಿ ಸೇರಿ ರಾಜ್ಯದ ಆರು ಜಿಲ್ಲೆಗಳಲ್ಲಿ ಭಾನುವಾರ ರಾತ್ರಿಯಿಂದೀಚೆಗೆ ಭರ್ಜರಿ ಮಳೆಯಾಗಿದೆ. ಕಲಬುರಗಿಯಲ್ಲಂತು ಭಾರೀ ಮಳೆಗೆ ಕಾಗಿಣಾ ಸೇರಿ ಐದು ನದಿಗಳು ಉಕ್ಕಿ ಹರಿಯುತ್ತಿದ್ದು, 20-25 ಗ್ರಾಮಗಳಿಗೆ ನೀರು ನುಗ್ಗಿದೆ. 10ಕ್ಕೂ ಹೆಚ್ಚು ಸೇತುವೆಗಳು ಮುಳುಗಡೆಯಾಗಿ ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಮಳಖೇಡದಲ್ಲಿ ಜಯತೀರ್ಥರ ಮೂಲ ವೃಂದಾವನ ಹಾಗೂ ಉತ್ತರಾಧಿಮಠದ ಮುಖ್ಯದ್ವಾರದೊಳಗೆ ನೀರು ಹೊಕ್ಕಿದೆ.

ಕಲಬುರಗಿ, ಯಾದಗಿರಿ, ಬೀದರ್‌, ಯಾದಗಿರಿ, ಕೊಡಗು, ಚಿಕ್ಕಮಗಳೂರು, ಬೆಂಗಳೂರಿನಲ್ಲಿ ಕೆಲಕಾಲ ಉತ್ತಮ ಮಳೆಯಾಗಿದೆ. ಕಲಬುರಗಿಯಲ್ಲಿ ಕಳೆದ ಮೂರು ದಿನದಿಂದ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ಮುಲ್ಲಾಮಾರಿ, ಕಾಗಿಣಾ, ಕಮಲಾವತಿ, ಗಂಡೋರಿ, ಬೆಣ್ಣೆತೊರಾ ನದಿಗಳಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ನದಿ ಪಕ್ಕದ 20ಕ್ಕೂ ಹೆಚ್ಚು ಗ್ರಾಮಗಳಿಗೆ ನೀರು ನುಗ್ಗಿದೆ. ಮುಲ್ಲಾಮಾರಿ ನದಿ ನೀರಿನ ಮಟ್ಟ ಏರಿಕೆಯಾಗಿ ಚಿಂಚೋಳಿ ಪಟ್ಟಣವೊಂದರಲ್ಲೇ 10ಕ್ಕೂ ಹೆಚ್ಚು ಗ್ರಾಮಗಳ 30ಕ್ಕೂ ಹೆಚ್ಚು ಮನೆಗಳಿಗೆ ನೀರು ಹೊಕ್ಕಿದೆ.

ಮಳೆಯಬ್ಬರದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಎಲ್ಲಾ ಸರ್ಕಾರಿ, ಖಾಸಗಿ, ಅನುದಾನಿತ, ಅನುದಾನ ರಹಿತ ಶಾಲೆಗಳಿಗೆ ಜಿಲ್ಲಾಡಳಿತ ಸೋಮವಾರ ರಜೆ ಘೋಷಿಸಿತ್ತು. ಇದೇ ವೇಳೆ, ಕಾಗಿಣಾ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ಕುರಕುಂಟಾದ ವ್ಯಕ್ತಿಯೊಬ್ಬ ನೀರು ಪಾಲಾಗಿದ್ದಾನೆ.

ಮನೆ ಮೇಲೆಯೇ ಉರುಳಿ ಬಿದ್ದ ಬಂಡೆಚಿತ್ತಾಪುರ ತಾಲೂಕಿನ ಅಲ್ಲೂರ (ಬಿ) ಗ್ರಾಮದಲ್ಲಿ ಭಾರೀ ಮಳೆಗೆ ಗುಡ್ಡದ ಬಂಡೆಗಲ್ಲು ಜಾರಿ ಬಂದು ಮನೆ ಮೇಲೆ ಬಿದ್ದಿದೆ. ಅದೃಷ್ಟವಶಾತ್‌ ಯಾವುದೇ ಅಪಾಯ ಸಂಭವಿಸಿಲ್ಲ. ಘಟನೆ ವೇಳೆ ಮನೆಯಲ್ಲಿ ಅಡುಗೆ ಮಾಡುತ್ತಿದ್ದಾಗಲೇ ಈ ಘಟನೆ ನಡೆದಿದೆ. ಈ ವೇಳೆ ಮಕ್ಕಳಿಬ್ಬರ ಕಾಲಿಗೆ ಗಾಯವಾಗಿದ್ದು, ಬಿಟ್ಟರೆ ಯಾರಿಗೂ ಗಂಭೀರ ಗಾಯಗಳಾಗಿಲ್ಲ.