ಮಹಾರಾಷ್ಟ್ರದ ಮಳೆಯಿಂದ ಬೆಳಗಾವಿಗೆ ಜಲಕಂಟಕ!

| Published : Jul 25 2024, 01:27 AM IST

ಮಹಾರಾಷ್ಟ್ರದ ಮಳೆಯಿಂದ ಬೆಳಗಾವಿಗೆ ಜಲಕಂಟಕ!
Share this Article
  • FB
  • TW
  • Linkdin
  • Email

ಸಾರಾಂಶ

ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಕೃಷ್ಣಾ ಸೇರಿ ಹಲವು ನದಿಗಳ ನೀರಿನಮಟ್ಟ ನಿತ್ಯ ಏರಿಕೆಯಾಗುತ್ತಲೇ ಇದೆ. ಕೃಷ್ಣಾ ನದಿಯಲ್ಲಿ 2.20 ಲಕ್ಷ ಕ್ಯುಸೆಕ್‌ಗೂ ಹೆಚ್ಚಿನ ಪ್ರಮಾಣದ ನೀರು ಹರಿಯುತ್ತಿದ್ದು ದೂಧ್‌ಗಂಗಾ, ಘಟಪ್ರಭಾ, ಮಲಪ್ರಭಾ, ಮಾರ್ಕಾಂಡೇಯ ನದಿಗಳೂ ಪ್ರವಾಹಮಟ್ಟದಲ್ಲಿ ಹರಿಯುತ್ತಿವೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಕೃಷ್ಣಾ ಸೇರಿ ಹಲವು ನದಿಗಳ ನೀರಿನಮಟ್ಟ ನಿತ್ಯ ಏರಿಕೆಯಾಗುತ್ತಲೇ ಇದೆ. ಕೃಷ್ಣಾ ನದಿಯಲ್ಲಿ 2.20 ಲಕ್ಷ ಕ್ಯುಸೆಕ್‌ಗೂ ಹೆಚ್ಚಿನ ಪ್ರಮಾಣದ ನೀರು ಹರಿಯುತ್ತಿದ್ದು ದೂಧ್‌ಗಂಗಾ, ಘಟಪ್ರಭಾ, ಮಲಪ್ರಭಾ, ಮಾರ್ಕಾಂಡೇಯ ನದಿಗಳೂ ಪ್ರವಾಹಮಟ್ಟದಲ್ಲಿ ಹರಿಯುತ್ತಿವೆ. ಇದರಿಂದ ಬೆಳಗಾವಿಯ 21ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರವಾಹ ಭೀತಿ ಕಾಣಿಸಿಕೊಂಡಿದೆ. ಮಳೆ ಮುಂದುವರಿದರೆ ಮತ್ತಷ್ಟು ಗ್ರಾಮಗಳಿಗೆ ನದಿ ನೀರು ನುಗ್ಗುವ ಆತಂಕದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬೆಳಗಾವಿ ಜಿಲ್ಲೆಯಲ್ಲಿ 427ಕ್ಕೂ ಹೆಚ್ಚು ಕಾಳಜಿ ಕೇಂದ್ರಗಳನ್ನು ತೆರೆಯಲು ಸಿದ್ಧತೆ ನಡೆಸಲಾಗಿದೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ನಡುಗಡ್ಡೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ 50ಕ್ಕೂ ಅಧಿಕ ಕುಟುಂಬಗಳನ್ನು ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ. ಕೃಷ್ಣಾ, ಘಟಪ್ರಭಾ, ಮಲಪ್ರಭಾ, ದೂಧ್‌ಗಂಗಾ ನದಿಗಳು ಪ್ರವಾಹಮಟ್ಟದಲ್ಲಿ ಹರಿಯುತ್ತಿರುವುದರಿಂದ ಈಗಾಗಲೇ ಬೆಳಗಾವಿ ಮತ್ತು ಬಾಗಲಕೋಟೆಯಲ್ಲಿ 33ಕ್ಕೂ ಹೆಚ್ಚು ಸೇತುವೆಗಳು ಮುಳುಗಡೆಯಾಗಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ.

50 ಕುಟುಂಬಗಳ ರಕ್ಷಣೆ:ಕೃಷ್ಣಾ ನದಿಗೆ ಆಲಮಟ್ಟಿ ಡ್ಯಾಂನಿಂದ 2.20 ಲಕ್ಷ ಕ್ಯುಸೆಗೂ ಹೆಚ್ಚು ನೀರು ಬಿಡಲಾಗುತ್ತಿದ್ದು, ಇದರಿಂದ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಹುಲಗಬಾಳಿ ಗ್ರಾಮದ ಮಾಂಗ ಎಂಬಲ್ಲಿ 50ಕ್ಕೂ ಅಧಿಕ ಕುಟುಂಬಗಳು ನಡುಗಡ್ಡೆಯಲ್ಲಿ ಸಿಲುಕಿಕೊಂಡಿವೆ. ಅವರನ್ನು ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ. ಸದ್ಯ ಹುಲಗಬಾಳಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅವರಿಗೆ ತಾತ್ಕಾಲಿಕ ಪುನರ್ವಸತಿ ಕಲ್ಪಿಸಲಾಗಿದೆ.

21 ಗ್ರಾಮಗಳಿಗೆ ಪ್ರವಾಹ ಭೀತಿ: ಇನ್ನು ಹಿಡಕಲ್, ಶಿರೂರು ಜಲಾಶಯ ಹಾಗೂ ಬಳ್ಳಾರಿ ನಾಲಾಗಳಿಂದ 40 ಸಾವಿರ ಕ್ಯುಸೆಕ್‌ಗೂ ಅಧಿಕ ನೀರು ಹಿರಿಬಿಟ್ಟ ಪರಿಣಾಮ, ಘಟಪ್ರಭಾ ಹಾಗೂ ಮಾರ್ಕಂಡೇಯ ನದಿಗಳು ತುಂಬಿ ಹರಿಯುತ್ತಿವೆ. ಹೀಗಾಗಿ ಗೋಕಾಕ ಮತ್ತು ಮೂಡಲಗಿ ತಾಲೂಕಿನ 21 ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ. ನದಿಪಾತ್ರದಿಂದ ದೂರವಿರುವಂತೆ ಈಗಾಗಲೇ ಜಿಲ್ಲಾಡಳಿತ ಜನರಿಗೆ ಸೂಚನೆ ನೀಡಿದೆ.ಇನ್ನು ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ರಾಯಬಾಗ ತಾಲೂಕಿನ ಬಾವನಸೌದತ್ತಿ ಗ್ರಾಮಕ್ಕೆ ಈಗಾಗಲೇ ಕೃಷ್ಣಾ ನದಿ ನೀರು ಪ್ರವೇಶವಾಗಿದೆ. ಗ್ರಾಮದ ಹೊರವಲಯದ ಸುಗಂಧಾದೇವಿ ದೇವಸ್ಥಾನ ಜಲಾವೃತವಾಗಿದೆ. ನಾಲ್ಕಕ್ಕೂ ಅಧಿಕ‌ ಮನೆಗಳಿಗೆ ನದಿ ನೀರು ನುಗ್ಗಿದೆ.

ಕುಂದರಗಿ ಮಠ ಜಲಾವೃತ: ಗೋಕಾಕ ತಾಲೂಕಿನ ಕುಂದರಗಿ ಗ್ರಾಮದ ಶ್ರೀ ಕುಂದರಗಿ ಅಡವಿಸಿದ್ಧೇಶ್ವರ ಮಠ ನೀರಿನಿಂದ ಆವೃತವಾಗಿದ್ದು, ಮಠದಲ್ಲಿ ಶ್ರೀಮಠ ಪೀಠಾಧಿಪತಿ ಶ್ರೀ ಅಮರಸಿದ್ದೇಶ್ವರ ಶ್ರೀಗಳು ಜಾನುವಾರುಗಳ ಸಮೇತ ಸ್ಥಳಾಂತರಗೊಂಡಿದ್ದಾರೆ. ಬಾಗಲಕೋಟೆಯಲ್ಲೂ ಆತಂಕ: ಬಾಗಲಕೋಟೆ ಜಿಲ್ಲೆಯಲ್ಲೂ ಕೃಷ್ಣಾ, ಘಟಪ್ರಭಾ ಮತ್ತು ಮಲಪ್ರಭಾ ನದಿ ಪ್ರವಾಹಮಟ್ಟದಲ್ಲಿ ಹರಿಯುತ್ತಿವೆ. ಜಮಖಂಡಿ ತಾಲೂಕಿನ ಮುತ್ತೂರಿನಲ್ಲಿ ಕೃಷ್ಣಾ ನದಿ ಪ್ರವಾಹ ಸೃಷ್ಟಿಸಿದ್ದು, ಗ್ರಾಮಸ್ಥರನ್ನು ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ. ಸದ್ಯ ಘಟಪ್ರಭಾ ಜಲಾಶಯದಿಂದ ಈಗ 31 ಸಾವಿರ ಕ್ಯುಸೆಕ್‌ ನೀರು ಹೊರಬಿಡಲಾಗುತ್ತಿದೆ. ಒಂದು ವೇಳೆ 45ರಿಂದ 50 ಸಾವಿರ ಕ್ಯುಸೆಕ್‌ಗೆ ನೀರು ಹರಿಸಲು ಆರಂಭಿಸಿದರೆ ಮುಧೋಳ ಸೇರಿ ಬಹುತೇಕ ಕಡೆ ಪ್ರವಾಹದ ಭೀತಿ ಎದುರಾಗಲಿದೆ. ಕೆಆರ್‌ಎಸ್‌ ಭರ್ತಿ, ಟಿಬಿ, ಹೇಮಾವತಿ ಡ್ಯಾಂ ಸ್ವಲ್ಪ ಬಾಕಿಮಂಡ್ಯ/ಮುನಿರಾಬಾದ್‌/ಹಾಸನ: ಕಾವೇರಿ ಕೊಳ್ಳದ ಪ್ರಮುಖ ಜಲಾಶಯಗಳಲ್ಲೊಂದಾದ ಕೃಷ್ಣರಾಜಸಾಗರ ಭರ್ತಿಯಾಗಿದೆ. ಇನ್ನೊಂದು ಪ್ರಮುಖ ಜಲಾಶಯ ಹೇಮಾವತಿ ಡ್ಯಾಂ ಬಹುತೇಕ ಭರ್ತಿಯಾಗಿದೆ. ಉತ್ತರ ಕರ್ನಾಟಕದ ತುಂಗಭದ್ರಾ ಜಲಾಶಯ ಭರ್ತಿಗೆ ಇನ್ನು ಎರಡು ಅಡಿಗಳಷ್ಟೇ ಬಾಕಿ ಇದೆ. ತುಂಗಭದ್ರಾ ಡ್ಯಾಂನಲ್ಲಿ 99 ಟಿಎಂಸಿ ನೀರು ಶೇಖರಣೆಯಾಗಿದ್ದು, ಗುರುವಾರ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದೆ.

ರಾಜ್ಯದಲ್ಲಿ ಮಳೆಗೆ 2 ಬಲಿ: ಕೆಲವೆಡೆ ಶಾಲೆಗಳಿಗೆ ರಜೆ

ಕನ್ನಡಪ್ರಭ ವಾರ್ತೆ ಬೆಂಗಳೂರುಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಬುಧವಾರ ಭಾರೀ ಗಾಳಿ ಸಹಿತ ಸಾಧಾರಣ ಮಳೆಯಾಗಿದೆ. ಮಳೆ ಸಂಬಂಧಿ ಅನಾಹುತಕ್ಕೆ ರಾಜ್ಯದಲ್ಲಿ ಮತ್ತಿಬ್ಬರು ಬಲಿಯಾಗಿದ್ದಾರೆ. ಅದೇ ರೀತಿ ಮುಂದಿನ ಒಂದೆರಡು ದಿನ ಭಾರೀ ಮಳೆಯಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ಉತ್ತರ ಕನ್ನಡದಲ್ಲಿ ಏಳು ತಾಲೂಕುಗಳ ಶಾಲಾ-ಕಾಲೇಜುಗಳಿಗೆ ಹಾಗೂ ಬೆಳಗಾವಿಯಲ್ಲಿ ಐದು ತಾಲೂಕುಗಳ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.ಕಳೆದೊಂದು ವಾರಕ್ಕೆ ಹೋಲಿಸಿದರೆ ಕರಾವಳಿ, ಮಲೆನಾಡಲ್ಲಿ ಮಳೆಯಬ್ಬರ ಕಡಿಮೆಯಾಗಿದ್ದು, ಭಾರೀ ಗಾಳಿಯಿಂದಾಗಿ ಹಲವೆಡೆ ಮರ, ವಿದ್ಯುತ್‌ ಕಂಬಗಳು ಮುರಿದು ಬಿದ್ದು, ಆಸ್ತಿ-ಪಾಸ್ತಿಗೆ ಹಾನಿಯಾಗಿದೆ. ಉತ್ತರ ಕನ್ನಡದ ಘಟ್ಟ ಭಾಗದಲ್ಲಿ ಉತ್ತಮ ಮಳೆಯಾಗಿದ್ದು, ಮರಬಿದ್ದು ಹಲವು ಮನೆಗಳಿಗೆ ಹಾನಿಯಾಗಿದೆ.ಇಬ್ಬರು ಬಲಿ:

ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಹಾಸಣಗಿಯಲ್ಲಿ ಬಿರುಗಾಳಿಗೆ ಮರವೊಂದು ಉರುಳಿ ಚಲಿಸುತ್ತಿದ್ದ ಬೈಕ್‌ ಮೇಲೆ ಬಿದ್ದ ಪರಿಣಾಮ ಬೈಕ್‌ ಸವಾರ ಬಾಚನಹಳ್ಳಿಯ ವಿನಯ ಮಂಜುನಾಥ ಗಾಡಿಗ (೨೬) ಎಂಬಾತ ಮೃತಪಟ್ಟಿದ್ದಾನೆ. ಇನ್ನು ಜಿಲ್ಲೆಯ ಮುಂಡುಗೋಡ ತಾಲೂಕಿನ ಮಳಗಿ ಧರ್ಮಾ ಡ್ಯಾಂ ವೀಕ್ಷಿಸಲು ಹೋಗಿದ್ದ ಯುವಕ ಮುಡಸಾಲಿ ಗ್ರಾಮದ ಶ್ರೀನಾಥ ಸೋಮಶೇಖರ ಹರಿಜನ (20) ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ಈತನ ಜತೆಗಿದ್ದ ಮತ್ತೊಬ್ಬನನ್ನು ಸ್ಥಳೀಯರು ರಕ್ಷಿಸಿದ್ದಾರೆ.