ಭಾರಿ ಮಳೆ: ಕಾರ್ಕಳ, ಹೆಬ್ರಿಯಲ್ಲಿ ಉಕ್ಕಿ ಹರಿದ ನದಿಗಳು

| Published : May 26 2025, 12:04 AM IST

ಭಾರಿ ಮಳೆ: ಕಾರ್ಕಳ, ಹೆಬ್ರಿಯಲ್ಲಿ ಉಕ್ಕಿ ಹರಿದ ನದಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಕಳ ತಾಲೂಕಿನ ಪ್ರಮುಖ ನದಿಯಾದ ಸ್ವರ್ಣ ನದಿಯ ಉಪನದಿಗಳಾದ ಮಂಜಲ್ತಾರ್, ಸೂರಂಟೆ ನದಿ, ನಡುಹಳ್ಳ, ಹಪ್ಪನಡ್ಕ, ಹೆಗ್ಡೆಬೆಟ್ಟು ಚೌಕಿ ನದಿಗಳಲ್ಲೂ ನೀರಿನ‌ಮಟ್ಟ ಏರಿಕೆಯಾಗಿದೆ. ಮಾಳದ ಕಡಾರಿ, ಕೆರುವಾಶೆ, ಮುಂಡ್ಲಿ ಡ್ಯಾಂ ಹಾಗೂ ಏತನೀರಾವರಿ ಯೋಜನೆಯ ಅಣೆಕಟ್ಟಿನ ಮೂರು ಗೇಟುಗಳನ್ನು ತೆರೆಯಲಾಗಿದ್ದು, ನದಿಯಲ್ಲಿ ನೀರಿನ ಹರಿವು ಹೆಚ್ಚಿದೆ.

ಕನ್ನಡಪ್ರಭ ವಾರ್ತೆ ಕಾರ್ಕಳ

ಕಾರ್ಕಳ ಹಾಗೂ ಹೆಬ್ರಿ ತಾಲೂಕು ವ್ಯಾಪ್ತಿಗಳಲ್ಲಿ ವರ್ಷಾಧಾರೆ ಭಾನುವಾರ ಮುಂದವರಿದಿದೆ.

ಹೆಬ್ರಿ ಭಾಗದಲ್ಲಿ ಹರಿಯುವ ಸೀತಾನದಿ ಹಾಗೂ ಕಾರ್ಕಳ ತಾಲೂಕಿನಲ್ಲಿ ಹರಿಯುವ ಸ್ವರ್ಣಾ ನದಿಗಳಲ್ಲಿ ನೀರಿನ‌ ಮಟ್ಟ ಏರಿಕೆಯಾಗಿದೆ. ಸೀತಾನದಿಯ ಉಪನದಿಯಾದ ಶಿವಪುರ ನದಿ ಉಕ್ಕಿ ಹರಿಯುತ್ತಿದೆ.

ಕಾರ್ಕಳ ತಾಲೂಕಿನ ಪ್ರಮುಖ ನದಿಯಾದ ಸ್ವರ್ಣ ನದಿಯ ಉಪನದಿಗಳಾದ ಮಂಜಲ್ತಾರ್, ಸೂರಂಟೆ ನದಿ, ನಡುಹಳ್ಳ, ಹಪ್ಪನಡ್ಕ, ಹೆಗ್ಡೆಬೆಟ್ಟು ಚೌಕಿ ನದಿಗಳಲ್ಲೂ ನೀರಿನ‌ಮಟ್ಟ ಏರಿಕೆಯಾಗಿದೆ. ಮಾಳದ ಕಡಾರಿ, ಕೆರುವಾಶೆ, ಮುಂಡ್ಲಿ ಡ್ಯಾಂ ಹಾಗೂ ಏತನೀರಾವರಿ ಯೋಜನೆಯ ಅಣೆಕಟ್ಟಿನ ಮೂರು ಗೇಟುಗಳನ್ನು ತೆರೆಯಲಾಗಿದ್ದು, ನದಿಯಲ್ಲಿ ನೀರಿನ ಹರಿವು ಹೆಚ್ಚಿದೆ.

ಮಾಳದ ಎಡಪಾಡಿ ರಸ್ತೆಯಲ್ಲಿ ಘನ ವಾಹನಗಳಿಗೆ ಸಂಚಾರ ನಿರ್ಬಂಧ ವಿಧಿಸಲಾಗಿದೆ. ಕಲ್ಯಾದಲ್ಲಿ ಭಾರಿ ಗಾತ್ರದ ಮರವೊಂದು ರಸ್ತೆಗೆ ಬಿದ್ದ ಪರಿಣಾಮ‌ ವಿದ್ಯುತ್ ತಂತಿಗಳು ಮುರಿದು ಬಿದ್ದಿವೆ.

ಕಾರ್ಕಳ ತಾಲೂಕಿನ ಮುಡಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಯಾಣಪುರ-ಮುಡಾರು ರಾಜ್ಯ ಹೆದ್ದಾರಿ ನಡುವಿನ ರಾಮೆರಾಗುತ್ತು ಬಳಿ ನೂತನ ಸೇತುವೆ ನಿರ್ಮಾಣವಾಗುತ್ತಿದ್ದು, ನೀರಿನ ಮಟ್ಟ ಹೆಚ್ಚಿರುವುದರಿಂದ ಬದಲಿ ರಸ್ತೆಯನ್ನು ಮುಚ್ಚಲಾಗಿದೆ. ಕೆರ್ವಾಶೆಯಿಂದ ಬಜಗೋಳಿ ಕಡೆಗೆ ತೆರಳುವವರ ಮತ್ತು ಬಜಗೋಳಿಯಿಂದ ಕೆರ್ವಾಶೆ ಕಡೆಗೆ ತೆರಳುವವರು ಹಡ್ಯಾಲು ಕ್ರಾಸ್ ಮೂಲಕ ತೆರಳುವಂತೆ ಸಂಬಂಧಿಸಿದ ಅಧಿಕಾರಿಗಳು ತಿಳಿಸಿದ್ದಾರೆ.

ಕೃಷಿ ಚಟುವಟಿಕೆ ಚುರುಕು:

ಉತ್ತಮ ಮಳೆಯಾಗುತ್ತಿರುವ ಕಾರಣ ಕೃಷಿಕರು ಗದ್ದೆಗಳತ್ತ ಮುಖ ಮಾಡುತ್ತಿದ್ದಾರೆ. ಕೆಲವೆಡೆಗಳಲ್ಲಿ ಟ್ರಾಕ್ಟರ್‌ಗಳ ಮೂಲಕ ಗದ್ದೆ ಹದ ಮಾಡಲು ಆರಂಭಿಸಲಾಗಿದೆ.

ಈ ಬಾರಿ ಉಡುಪಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ೩೫,೦೦೦ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ. ಬಿತ್ತನೆ ಬೀಜಗಳ ಕೊರತೆಯಾಗದಂತೆ ಕೃಷಿ ಇಲಾಖೆ ನೋಡಿಕೊಳ್ಳುತ್ತಿದೆ. ಕೃಷಿ ಇಲಾಖೆಯಿಂದ ರೈತರಿಗೆ ಅವಶ್ಯವಿರುವ ಎಂ.ಓ-೪ ತಳಿಯ ಬಿತ್ತನೆ ಬೀಜವನ್ನು ಜಿಲ್ಲೆಯ ೯ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನೀಕರಿಸಲಾಗಿದ್ದು, ಸಹಾಯಧನದಲ್ಲಿ ರೈತರು ಪಡೆದುಕೊಳ್ಳಬಹುದಾಗಿದೆ.

ಜಿಲ್ಲೆಗೆ ಮುಂಗಾರು ಹಂಗಾಮಿಗೆ ಅಂದಾಜು ೨,೫೦೦ ಕ್ವಿಂಟಾಲ್‌ನಷ್ಟು ಬಿತ್ತನೆ ಬೀಜದ ಅವಶ್ಯಕತೆಯಿದ್ದು, ಈಗಾಗಲೇ ೨,೮೦೦ ಕ್ವಿಂಟಾಲ್ ಎಂ.ಓ-೪ ಬಿತ್ತನೆ ಬೀಜ ಸರಬರಾಜಿಗೆ ಕರ್ನಾಟಕ ರಾಜ್ಯ ಬೀಜ ನಿಗಮಕ್ಕೆ ಬೇಡಿಕೆ ಸಲ್ಲಿಸಲಾಗಿದ್ದು, ೧,೬೯೬ ಕ್ವಿಂಟಾಲ್ ಎಂ.ಓ-೪ ಬಿತ್ತನೆ ಬೀಜವನ್ನು ರೈತ ಸಂರ್ಪಕ ಕೇಂದ್ರಗಳಲ್ಲಿ ದಾಸ್ತಾನೀಕರಿಸಲಾಗಿದೆ. ಬಿತ್ತನೆ ಬೀಜವನ್ನು ಸಾಮಾನ್ಯ ವರ್ಗದ ರೈತರಿಗೆ ಪ್ರತಿ ಕೆ.ಜಿಗೆ ೮ ರು. ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಪ್ರತಿ ಕೆ.ಜಿಗೆ ೧೨ ರು. ಸಹಾಯಧನದಲ್ಲಿ ಒದಗಿಸಲಾಗುತ್ತಿದೆ. ಪ್ರಸ್ತುತ ೧೦೫೮ ಮಂದಿ ರೈತರಿಗೆ ೪೭೫ ಕ್ವಿಂಟಾಲ್ ಬಿತ್ತನೆ ಬೀಜವನ್ನು ವಿತರಿಸಲಾಗಿದ್ದು, ಅವಶ್ಯಕತೆಗೆ ಅನುಗುಣವಾಗಿ ಹಂತಹAತವಾಗಿ ಬಿತ್ತನೆ ಬೀಜವನ್ನು ದಾಸ್ತಾನೀಕರಿಸಿ ಪೂರೈಸಲಾಗುವುದು. ಪ್ರಸಕ್ತ ಸಾಲಿಗೆ ಕರ್ನಾಟಕ ರಾಜ್ಯ ಬೀಜ ನಿಗಮದಲ್ಲಿ ೫೭೫೦ ಕ್ವಿಂಟಾಲ್‌ನಷ್ಟು ಎಂ.ಓ-೪ ಬಿತ್ತನೆ ಬೀಜ ದಾಸ್ತಾನಿದ್ದು, ಯಾವುದೇ ರೀತಿಯ ಕೊರತೆ ಇರುವುದಿಲ್ಲ. ರೈತರು ಸ್ಥಳೀಯ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ, ಪ್ರತಿ ಎಕರೆಗೆ ೨೫ ಕೆ.ಜಿಯಂತೆ ಗರಿಷ್ಟ ೫ ಎಕರೆಗೆ ಅಥವಾ ವಾಸ್ತವಿಕ ಹಿಡುವಳಿಗೆ ಅನುಗುಣವಾಗಿ ಸಹಾಯಧನದಲ್ಲಿ ಬಿತ್ತನೆ ಬೀಜವನ್ನು ಪಡೆದುಕೊಳ್ಳಬಹುದು.