ಭಾರೀ ಮಳೆ, ಸಂಚಾರ ಅಸ್ತವ್ಯಸ್ತ, ಮನೆಯ ಮರ ಬಿದ್ದು ಹಾನಿ

| Published : May 21 2025, 12:20 AM IST

ಸಾರಾಂಶ

ರಸ್ತೆಯ ಮೇಲೆ ತುಂಬಿದ ಮಳೆ ನೀರು ಹೋಗಲು ಜಾಗವಿಲ್ಲದೇ ರಸ್ತೆಯ ಕೆಳಸಾಲಿನ ಜನವಸತಿಗೆ ನುಗ್ಗುತ್ತಿದ್ದು ಕೃಷಿ ಪ್ರದೇಶದ ಹಾನಿಗೂ ಕಾರಣವಾಗುತ್ತಿದೆ

ಕುಮಟಾ: ತಾಲೂಕಿನಾದ್ಯಂತ ಮಂಗಳವಾರ ಬೆಳಗ್ಗೆಯಿಂದ ಸುರಿದ ಭಾರೀ ಗಾಳಿ ಮಳೆಗೆ ಹಲವೆಡೆ ಮರ ಬಿದ್ದು ಹಾನಿಯಾಗಿದ್ದರೆ ಕೆಲವೆಡೆ ರಸ್ತೆಯ ಮೇಲೆ ಮಳೆ ನೀರು ಹರಿದು ಜನಜೀವನ ಅಸ್ತವ್ಯವಸ್ತಗೊಂಡಿದೆ.

ಮುಖ್ಯವಾಗಿ ಕುಮಟಾ-ಸಿದ್ದಾಪುರ ರಾಜ್ಯ ಹೆದ್ದಾರಿಯ ವಾಲಗಳ್ಳಿಯ ಹಾರೋಡಿ ಕ್ರಾಸ್ ಬಳಿ ಮಳೆ ನೀರು ರಸ್ತೆಯ ಮೇಲೆ ಕಟ್ಟಿಕೊಂಡು ಜನ, ವಾಹನ ಸಂಚಾರಕ್ಕೆ ತೀವ್ರ ಸಮಸ್ಯೆ ಉಂಟಾಯಿತು. ಇನ್ನೊಂದೆಡೆ ಕುಮಟಾ-ಸಿದ್ದಾಪುರ ಮಾರ್ಗದಲ್ಲಿ ಸಂಚರಿಸುವ ವಾಹನಗಳು ತಾಸುಗಟ್ಟಲೆ ಕಾಯುವಂತಾಗಿದ್ದು ಪ್ರಯಾಣಿಕರು ಪರದಾಡುವಂತಾಗಿದೆ.

ಕಳೆದ ೫ ವರ್ಷಗಳಿಂದ ಬಗೆಹರಿಯದ ಸಮಸ್ಯೆಯಾಗಿರುವ ಇಲ್ಲಿನ ಗುಡ್ಡದಿಂದ ಹರಿದು ಬರುವ ಮಳೆ ನೀರಿಗೆ ಸರಾಗವಾಗಿ ಹರಿದು ಹೋಗಲು ಸ್ಥಳಾವಕಾಶ ಕಲ್ಪಿಸಲಾಗದ ಆಡಳಿತ ವ್ಯವಸ್ಥೆ ಮಳೆ ಜೋರಾದಾಗಲೆಲ್ಲ ಸಾರ್ವಜನಿಕರ ಹಿಡಿಶಾಪ ಕೇಳುವಂತಾಗಿದೆ. ರಸ್ತೆಯ ಮೇಲೆ ತುಂಬಿದ ಮಳೆ ನೀರು ಹೋಗಲು ಜಾಗವಿಲ್ಲದೇ ರಸ್ತೆಯ ಕೆಳಸಾಲಿನ ಜನವಸತಿಗೆ ನುಗ್ಗುತ್ತಿದ್ದು ಕೃಷಿ ಪ್ರದೇಶದ ಹಾನಿಗೂ ಕಾರಣವಾಗುತ್ತಿದೆ. ಈ ಹಿಂದೆಲ್ಲ ಸಮಸ್ಯೆ ಬಗೆಹರಿಸಲು ಸ್ಥಳೀಯ ಪಂಚಾಯಿತಿ, ತಾಲೂಕಾಡಳಿತ, ಶಾಸಕ ದಿನಕರ ಶೆಟ್ಟಿ ಸಾಕಷ್ಟು ಸಭೆ ನಡೆಸಿ ಕ್ರಮಕೈಗೊಂಡರೂ ಸಮಸ್ಯೆ ಮಾತ್ರ ಪ್ರತಿ ವರ್ಷ ಮಳೆಗಾಲದಲ್ಲಿ ಉದ್ಭವವಾಗುತ್ತಲೇ ಇದೆ. ಇನ್ನಾದರೂ ಶಾಶ್ವತ ಕ್ರಮಕೈಗೊಂಡು ಸರಿಪಡಿಸಿ ಎಂದು ಆಗ್ರಹಿಸಿದ್ದಾರೆ.

ಬೆಳಗ್ಗೆ ೯ಗಂಟೆ ಸುಮಾರಿಗೆ ಮಳೆ ಸುರಿಯುವಾಗ ಗೋಕರ್ಣ ಸನಿಹದ ಬಾವಿಕೊಡ್ಲದಲ್ಲಿ ಭಾರತಿ ಆನಂದು ಗೌಡ ಎಂಬವರ ವಾಸ್ತವ್ಯದ ಮನೆಗೆ ಸಿಡಿಲು ಹೊಡೆದು ಮನೆಯ ಹೊರಭಾಗದ ಕಂಬ ಹಾಗೂ ಗೋಡೆಗೆ ಹಾನಿಯಾಗಿದೆ. ಮನೆಯಲ್ಲಿದ್ದ ಕಲಾವತಿ ಮಂಕಾಳಿ ಗೌಡ ಎಂಬವರಿಗೆ ಸಿಡಿಲಿನಿಂದ ಅಲ್ಪಮಟ್ಟಿನ ಆಘಾತಕ್ಕೆ ಒಳಗಾಗಿದ್ದು ಗೋಕರ್ಣದ ಧನ್ವಂತರಿ ಕ್ಲಿನಿಕ್‌ನಲ್ಲಿ ಚಿಕಿತ್ಸೆ ನೀಡಲಾಗಿದೆ.

ಮಧ್ಯಾಹ್ನ ಸುರಿದ ಗಾಳಿಮಳೆಗೆ ಹಿರೇಗುತ್ತಿ ಗ್ರಾಮದ ಶ್ರೀಧರ ದೇವಣ್ಣ ನಾಯಕ ಅವರ ವಾಸ್ತವ್ಯದ ಮನೆಯ ಮೇಲೆ ತೆಂಗಿನ ಮರವೊಂದು ಬಿದ್ದು ಭಾಗಶಃ ಹಾನಿಯಾಗಿದೆ. ಘಟನೆಯಲ್ಲಿ ಯಾರಿಗೂ ಪೆಟ್ಟಾಗಿಲ್ಲ. ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಂದಾಜು ಹಾನಿ ₹೪೦೦೦೦ ಎಂದು ದಾಖಲಿಸಿದ್ದಾರೆ.

ಪಟ್ಟಣದ ಮುಖ್ಯ ಬಸ್ ನಿಲ್ದಾಣದ ಎದುರು ರಾಷ್ಟ್ರೀಯ ಹೆದ್ದಾರಿ ೬೬ ರಲ್ಲಿ ಮಳೆ ನೀರು ಕಟ್ಟಿಕೊಂಡು ಅಂಗಡಿಗಳಿಗೆ ನುಗ್ಗಿದೆ. ರಸ್ತೆಯಂಚಿನ ಗಟಾರ ಕಾಣದೇ ಕೆಲವರು ಬಿದ್ದು ಚಿಕ್ಕಪುಟ್ಟ ಗಾಯ ಮಾಡಿಕೊಂಡ ಮಾಹಿತಿ ಇದೆ. ಎಲ್‌ಐಸಿ ಕಚೇರಿ ಬಳಿಯೂ ಗಟಾರವಿಲ್ಲದೇ ಹೆದ್ದಾರಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಮಳೆ ನೀರು ಹರಿಯುತ್ತಿತ್ತು. ಸನಿಹದ ಮಾಸ್ತಿಕಟ್ಟೆ ವೃತ್ತದಲ್ಲಿಯೂ ರಸ್ತೆಯ ಮೇಲೆ ಜಲಾವೃತಗೊಂಡು ಜನ ವಾಹನ ಸಂಚಾರಕ್ಕೆ ಸಮಸ್ಯೆ ಸೃಷ್ಟಿಯಾಯಿತು.

ಪಟ್ಟಣ ವ್ಯಾಪ್ತಿಯಲ್ಲಿ ಪುರಸಭೆಯಿಂದ ಗಟಾರ ಸ್ವಚ್ಛತೆ ಕಾಮಗಾರಿ ಪ್ರಗತಿಯಲ್ಲಿದ್ದು, ಪೇಟೆ ಪ್ರದೇಶದಲ್ಲಿ ಬಹುತೇಕ ಪೂರ್ಣಗೊಂಡಿದೆ. ಆದರೆ ಕೆಲವು ವಾರ್ಡ್‌ಗಳಲ್ಲಿ ಮತ್ತು ರಾ. ಹೆದ್ದಾರಿ ಭಾಗದಲ್ಲಿ ಗಟಾರ ಸ್ವಚ್ಛತೆ ಬಾಕಿಯಿದ್ದು ಕೆಲಸ ನಡೆಸಲಾಗಿದೆ. ಒಟ್ಟಾರೆ ತಾಲೂಕಿನಾದ್ಯಂತ ವ್ಯಾಪಕವಾಗಿ ಮಳೆ ಸುರಿದಿದ್ದು ವಿಶೇಷ ಹಾನಿಯಾಗಿಲ್ಲ ಎಂದು ವರದಿಯಾಗಿದೆ.

ಎಲ್ಲೆಡೆ ಮಳೆ ಜೋರಾಗಿದ್ದರಿಂದ ಶಾಸಕ ದಿನಕರ ಶೆಟ್ಟಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಅಪಾಯ ಸಂಭವನೀಯ ಪ್ರದೇಶಗಳಲ್ಲಿ ತಿರುಗಾಡಿ ಪರಿಸ್ಥಿತಿ ಪರಿಶೀಲಿಸಿದರು.

ರಾಷ್ಟ್ರೀಯ ಹೆದ್ದಾರಿಗೆ ೬೬ ಕ್ಕೆ ಸಂಬಂಧಿಸಿದಂತೆ ಹಲವೆಡೆ ಸಂಭವನೀಯ ಗುಡ್ಡ ಕುಸಿತ ಪ್ರದೇಶಗಳಲ್ಲಿ ಎನ್‌ಎಚ್‌ಎಐ ಎಂಡಿ ಶಿವಕುಮಾರ ಹಾಗೂ ಐಆರ್‌ಬಿ ಅಧಿಕಾರಿಗಳೊಂದಿಗೆ ತೆರಳಿ ಸ್ಥಳಕ್ಕೆ ಭೇಟಿ ಮಳೆಗಾಲ ಎದುರಿಸಲು ತೆಗೆದುಕೊಂಡ ಮುಂಜಾಗೃತಾ ಕ್ರಮಗಳ ಬಗ್ಗೆ ತಿಳಿದುಕೊಂಡರು. ಹಾಗೆಯೇ ಕುಮಟಾ ಮುಖ್ಯ ಬಸ್ ನಿಲ್ದಾಣದ ಎದುರು ಮಾಸ್ತಿಕಟ್ಟೆ ವೃತ್ತ ಹಾಗೂ ಹೆದ್ದಾರಿಯುದ್ದಕ್ಕೂ ರಸ್ತೆಯಲ್ಲಿ ನೀರುತುಂಬಿಕೊಳ್ಳುವ ಪ್ರದೇಶ ತೋರಿಸಿದರು. ಕೂಡಲೇ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.