ಸಾರಾಂಶ
ನರಸಿಂಹರಾಜಪುರ: ಗುರುವಾರ ಬೆಳಿಗ್ಗೆಯಿಂದ ಕಡಿಮೆ ಇದ್ದ ಮಳೆ ಮಧ್ಯಾಹ್ನದ ನಂತರ ತೀವ್ರಗೊಂಡು ಸಂಜೆಯವರೆಗೂ ಭಾರೀ ಮಳೆ ಸುರಿದಿದೆ.
ತಾಲೂಕಿನ ಬಡಗಬೈಲು ಗ್ರಾಮದ ದ್ವಾರಮಕ್ಕಿಯ ಸುಜಯ ಎಂಬುವರ ಮನೆ ಗೋಡೆ ಕುಸಿದು ಬಿದ್ದಿದೆ. ಗಾಂಧಿ ಗ್ರಾಮದ ಸಿದ್ದೇಶ್ವರ ಕೆರೆ ದಂಡೆ ಒಡೆದು ಸಮೀಪದ ಜನಾರ್ದನ ಎಂಬುವರ ತೋಟಕ್ಕೆ ನೀರು ನುಗ್ಗಿ ಹಾನಿ ಸಂಭವಿಸಿದೆ. ಕಸಬಾ ಹೋಬಳಿ ಮಡಬೂರು ಗ್ರಾಮದ ಲಿಂಗಪ್ಪಗೌಡ ಅವರ ಅಡಕೆ ತೋಟಕ್ಕೆ ಹಾನಿಯಾಗಿದೆ. ಪಟ್ಟಣ ಬಾವಿ ಹಟ್ಟಿಯ ಗಣೇಶ ಎಂಬುವರ ವಾಸದ ಮನೆ ಗೋಡೆ ಉರುಳಿದೆ. ಮುತ್ತಿನಕೊಪ್ಪದ ಬಸವರಾಜ ಅವರ ಮನೆ ಗೋಡೆ ಗುರುವಾರ ಬೆಳಿಗ್ಗೆ ಬಿದ್ದಿದೆ.
ಮುತ್ತಿನಕೊಪ್ಪ ಗ್ರಾಮದ ತಾವರಘಟ್ಟ ಕೆರೆ ಕೋಡಿ ಬಿದ್ದು ಕೆಳಗಿನ ಭಾಗದ ಜಮೀನುಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಸಿಂಸೆ ಗ್ರಾಮದ ಬಾಗೋಳಿಯ ವಸಂತ ಅವರ ಮನೆಯ ಪಕ್ಕದ ಅಡಿಗೆ ಮನೆ ಕುಸಿದಿದೆ. ಭಾರೀ ಮಳೆಯಿಂದ ಕಡಹಿನಬೈಲು ಗ್ರಾಮದ ಶೆಟ್ಟಿಕೊಪ್ಪ- ಜನತಾ ಕಾಲೋನಿ- ಭೀಮನರಿ ಸಂಪರ್ಕ ರಸ್ತೆ ಚನ್ನಮಣೆ ಸೇತುವೆಗೆ ಹಾನಿಯಾಗಿದೆ.
ಕಳೆದ 3 ದಿನಗಳಿಂದ ಸುರಿಯುತ್ತಿರುವ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ. ಹಳ್ಳಗಳು ದೊಡ್ಡದಾಗಿ ಹರಿಯುತ್ತಿದೆ. ತೋಟಗಳಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ.ಇದರಿಂದ ಕೂಲಿ ಕಾರ್ಮಿಕರು ಮನೆಯಲ್ಲೇ ಕೂರುವಂತಾಗಿದೆ. ವಿದ್ಯುತ್ ಸಮಸ್ಯೆ ಯಥಾ ಪ್ರಕಾರ ಮುಂದುವರಿದಿದ್ದು. ಆಗಾಗ್ಗೆ ಬಂದು ಹೋಗುತ್ತಿದೆ.