ಉರಿ ಬಿಸಿಲಿನ ವಾತಾವರಣದಿಂದ ಕೂಡಿದ್ದ ಕೊಡಗು ಜಿಲ್ಲೆಯಲ್ಲಿ ಗುರುವಾರ ಗುಡುಗು ಸಹಿತ ಭಾರಿ ಮಳೆಯಾಗಿದ್ದು, ಕೆಲವು ಕಡೆಗಳಲ್ಲಿ ಮಳೆಯಿಂದ ಹಾನಿಯಾಗಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಉರಿ ಬಿಸಿಲಿನ ವಾತಾವರಣದಿಂದ ಕೂಡಿದ್ದ ಕೊಡಗು ಜಿಲ್ಲೆಯಲ್ಲಿ ಗುರುವಾರ ಗುಡುಗು ಸಹಿತ ಭಾರಿ ಮಳೆಯಾಗಿದ್ದು, ಕೆಲವು ಕಡೆಗಳಲ್ಲಿ ಮಳೆಯಿಂದ ಹಾನಿಯಾಗಿದೆ.

ಕೂಡುಮಂಗಳೂರು ದೊಡ್ಡಮ್ಮತಾಯಿ ದೇವಾಲಯದ ಬಳಿ ರಸ್ತೆ ಬದಿಯ ಮರವೊಂದು ಪಿಕಪ್ ವಾಹನದ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಚಾಲಕ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮುಂಜಾನೆ ಸುರಿದ ಬಿರುಗಾಳಿ ಸಹಿತ ಭಾರೀ ಗಾಳಿ ಮಳೆಗೆ ಕುಶಾಲನಗರ ತಾಲ್ಲೂಕಿನಲ್ಲಿ ಅವಾಂತರಗಳ ಸರಮಾಲೆಯೇ ಸೃಷ್ಟಿಯಾಗಿದೆ. ಬಿರುಗಾಳಿಯ ರಭಸಕ್ಕೆ ಗೊಂದಿಬಸವನಹಳ್ಳಿಯ ಚಂದ್ರಣ್ಣ ಅವರ ಮನೆ ಸೇರಿದಂತೆ ಹಲವು ಮನೆಗಳ ಮೇಲ್ಛಾವಣಿ, ಸೀಟುಗಳು ಹಾರಿ ಹೋಗಿದ್ದು, ಅಪಾರ ಹಾನಿಯಾಗಿದೆ.

ನಿಸರ್ಗಧಾಮದ ಮುಂದೆ ಬೈಚನಹಳ್ಳಿಯಲ್ಲಿ ಒಣಗಿದ ಬೃಹತ್ ಮರದ ಟೊಂಗೆ ವಿದ್ಯುತ್ ತಂತಿಯ ಮೇಲೆ ಬಿದ್ದು ನೇತಾಡುತ್ತಿದೆ. ಯಾವುದೇ ಕ್ಷಣದಲ್ಲಿ ತಂತಿ ತುಂಡಾಗಿ ಹಾನಿ ಸಂಭವಿಸಿದೆ.

ಹಾರಂಗಿ ಅಗ್ನಿಶಾಮಕ ಠಾಣೆಯ ಆವರಣದೊಳಗೆ ಬೃಹತ್ ಮರ ಧರೆಗುರುಳಿ ವಿದ್ಯುತ್ ಕಂಬಕ್ಕೆ ಹಾನಿಯಾಗಿದೆ. ಕೂಡಲೇ ಅಗ್ನಿಶಾಮಕ ಸಿಬ್ಬಂದಿಯೇ ಮರ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ನಂತರ ಸ್ಥಳಕ್ಕೆ ಆಗಮಿಸಿದ ಚೆಸ್ಕಾಂ ಅಧಿಕಾರಿಗಳು ಹಾನಿಗೊಳಗಾದ ವಿದ್ಯುತ್ ಕಂಬಗಳನ್ನು ಸರಿಪಡಿಸುವ ಕಾರ್ಯ ಮಾಡಿದರು.

ಸುರಿದ ಬಾರಿ ಗಾಳಿ ಮಳೆಗೆ ಕುಶಾಲನಗರದ ಮಾದಾಪಟ್ಟಣ ವಿಜಯ ಕವನ ಅವರ ಮನೆ ಸಂಪೂರ್ಣ ಗೋಡೆ ಬಿರುಕು ಬಿಟ್ಟಿವೆ. ಗಾಳಿ ಮಳೆಯ ರಭಸಕ್ಕೆ ಮನೆಯ ಗೋಡೆ ಸಂಪೂರ್ಣ ಬಿರುಕು ಬಿಟ್ಟಿದೆ. ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಗುಡ್ಡೆಹೊಸೂರಿನ ನಿವಾಸಿ ಪಂಜಿಪಳ್ಳ ಯತೀಶ್ ಅವರ ಕಾರ್ ಶೆಡ್ ಮೇಲೆ ವಿದ್ಯುತ್ ಕಂಬ ಬಿದ್ದು ಹಾನಿಯಾಗಿದೆ. ಯತೀಶ್ ಅವರ ಜಮೀನಿನಲ್ಲಿದ್ದ ಮೂರು ವಿದ್ಯುತ್ ಕಂಬಗಳು ನೆಲಕುರುಳಿವೆ. ಇದೇ ರೀತಿ ಗುಡ್ಡೆ, ಹೊಸೂರು, ಬಳ್ಳೂರು, ಬೆಟ್ಟಗೇರಿ ಗ್ರಾಮಗಳಲ್ಲಿ ಹಲವು ಮರಗಳು ನೆಲಕುರಳಿವೆ. ಯತೀಶ್ ಅವರ ಜಮೀನಿನಲ್ಲಿ ವಿದ್ಯುತ್ ತಂತಿಯ ಮೇಲೆ ಮರ ಬಿದ್ದು ಅನಾಹುತ ಸಂಭವಿಸಿದೆ.