ಸಿಡಿಲು ಗುಡುಗು ಸಹಿತ ಭಾರಿ ಮಳೆ

| Published : May 20 2024, 01:31 AM IST

ಸಾರಾಂಶ

ತಾಲೂಕಿನ ದೋಟಿಹಾಳ ಹಾಗೂ ತಾವರಗೇರಾ ಸೇರಿದಂತೆ ಅನೇಕ ಕಡೆಗಳಲ್ಲಿ ಸಿಡಿಲು ಗುಡುಗು, ಗಾಳಿ ಸಮೇತ ಭಾರಿ ಮಳೆಯಾಗಿದ್ದು, ಕೆಲವು ಕಡೆ ಮರಗಳು ಧರೆಗೆ ಉರುಳಿವೆ.

ಕನ್ನಡಪ್ರಭ ವಾರ್ತೆ ಕುಷ್ಟಗಿ

ತಾಲೂಕಿನ ದೋಟಿಹಾಳ ಹಾಗೂ ತಾವರಗೇರಾ ಸೇರಿದಂತೆ ಅನೇಕ ಕಡೆಗಳಲ್ಲಿ ಸಿಡಿಲು ಗುಡುಗು, ಗಾಳಿ ಸಮೇತ ಭಾರಿ ಮಳೆಯಾಗಿದ್ದು, ಕೆಲವು ಕಡೆ ಮರಗಳು ಧರೆಗೆ ಉರುಳಿವೆ.

ದೋಟಿಹಾಳ ಗ್ರಾಮದಲ್ಲಿ ಭಾನುವಾರ ಸಾಯಂಕಾಲ ಏಕಾಏಕಿಯಾಗಿ ಗಾಳಿ ಸಮೇತ ಭಾರಿ ಮಳೆಯಾಗಿದ್ದು, ಗ್ರಾಮದಲ್ಲಿನ ದೊಡ್ಡ ಮರದ ಕೊಂಬೆಗಳು ಮುರಿದು ಬಿದ್ದಿವೆ. ಗ್ರಾಮಗಳಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆಯ ನೀರು ರಸ್ತೆಯ ಮೇಲೆ ಹರಿದಿದ್ದರಿಂದ ಸಾರ್ವಜನಿಕರು, ವಾಹನ ಸವಾರರು ಪರದಾಡಬೇಕಾಯಿತು.

ಬಿತ್ತನೆ ಮಾಡಲು ಹೋಗಿದ್ದ ಅನೇಕ ರೈತರು ಮಳೆಯಿಂದಾಗಿ ವಾಪಸ್‌ ಮನೆಯತ್ತ ಬಂದರು. ಬಿಸಿಲಿನಿಂದ ಬರಿದಾಗಿದ್ದ ಹಳ್ಳಗಳಲ್ಲಿ ರಭಸವಾಗಿ ನೀರು ಹರಿಯುತ್ತಿರುವುದು ಕಂಡು ಬಂತು. ಈ ವಾರದಲ್ಲಿ ಆಗುತ್ತಿರುವ ಮಳೆಯಲ್ಲಿ ಇದೇ ದೊಡ್ಡ ಮಳೆಯಾಗಿದೆ.

ಸಿಡಿಲಿಗೆ ಓರ್ವ ವ್ಯಕ್ತಿ ಬಲಿ:

ಕುಷ್ಟಗಿ ತಾಲೂಕಿನ ತಾವರಗೇರಾ ವ್ಯಾಪ್ತಿಯ ಬಚನಾಳ ಗ್ರಾಮದಲ್ಲಿ ಸಿಡಿಲು ಬಡಿದು ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಭಾನುವಾರ ಸಂಜೆ ಜರುಗಿದೆ.ಸಿಡಿಲು ಬಡಿದು ಮೃತಪಟ್ಟ ವ್ಯಕ್ತಿಯನ್ನು ಬಚನಾಳ ಗ್ರಾಮದ ರೈತ ಈಶಪ್ಪ ಕರಡಪ್ಪ ಕಳಮಳ್ಳಿ (36) ಎಂದು ಗುರುತಿಸಲಾಗಿದೆ. ಅವರು ಜಮೀನಿನಲ್ಲಿ ಕೃಷಿ ಚಟುವಟಿಕೆ‌‌ ಮಾಡುವಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.ಈ ಕುರಿತು ತಾವರಗೇರಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪರಿಹಾರ ವಿತರಣೆ:

ಕನ್ನಡಪ್ರಭ ವಾರ್ತೆ ಕುಷ್ಟಗಿತಾಲೂಕಿನ ತಾವರಗೇರಾ ವ್ಯಾಪ್ತಿಯ ಬಚನಾಳ ಗ್ರಾಮದಲ್ಲಿ ಸಿಡಿಲಿಗೆ ಮೃತಪಟ್ಟ ರೈತ ಈಶಪ್ಪ ಕರಡಪ್ಪ ಕಳಮಳ್ಳಿ ಕುಟುಂಬಕ್ಕೆ ತಾಲೂಕು ಆಡಳಿತದಿಂದ ₹5 ಲಕ್ಷ ಪರಿಹಾರ ಧನದ ಚೆಕ್ ವಿತರಿಸಲಾಯಿತು.ತಹಸೀಲ್ದಾರ್ ರವಿ ಅಂಗಡಿ ಗ್ರಾಮಕ್ಕೆ ಭೇಟಿ ನೀಡಿ ಮೃತ ರೈತನ ಕುಟುಂಬಕ್ಕೆ ಸಾಂತ್ವನ ಹೇಳಿದರು. ನಂತರ ಪರಿಹಾರ ಧನದ ₹5 ಲಕ್ಷ ಮೊತ್ತದ ಚೆಕ್ಕನ್ನು ವಿತರಿಸಿದರು. ಈ ಸಂದರ್ಭ ಗ್ರೇಡ್-2 ತಹಶೀಲ್ದಾರ್ ಮುರುಳಿಧರ್, ಉಪತಹಸೀಲ್ದಾರ್ ಪ್ರಕಾಶ್ ನಾಯಕ್, ಕಂದಾಯ ನಿರೀಕ್ಷಕ ಶರಣಪ್ಪ ದಾಸರ ಸೇರಿದಂತೆ ಕಂದಾಯ ಇಲಾಖೆ ಸಿಬ್ಬಂದಿ ಪೊಲೀಸರು ಗ್ರಾಮದ ನಿವಾಸಿಗಳು ಇದ್ದರು.