ಗಾಳಿ, ಗುಡುಗು ಸಹಿತ ಸುರಿದ ಭಾರಿ ಮಳೆ

| Published : May 16 2024, 12:47 AM IST

ಸಾರಾಂಶ

ಸಿಡಿಲು ಗುಡುಗು ಸಹಿತ ಮಳೆ ಅಬ್ಬರಿಸಲು ಆರಂಭಗೊಂಡಿತು. ಆದರೆ, ತುಸು ಹೊತ್ತಲ್ಲೇ ಗಾಳಿಯೂ ಸಹ ಬೀಸಲು ಆರಂಭಿಸಿತು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ನಿಪ್ಪಾಣಿ ನಗರ ಹಾಗೂ ಸುತ್ತ-ಮುತ್ತಲಿನ ಪರಿಸರದಲ್ಲಿ ಸುರಿದ ಗಾಳಿ ಹಾಗೂ ಗುಡುಗು ಸಹಿತ ಭಾರಿ ಪ್ರಮಾಣದ ಮಳೆಯಲ್ಲಿ ಅಪಾರ ಆಸ್ತಿ ಹಾನಿಗೊಳಗಾಗಿದೆ. ಆದರೆ, ಯಾವುದೇ ರೀತಿಯ ಜೀವಹಾನಿಯಾದ ಬಗ್ಗೆ ವರದಿಯಾಗಿಲ್ಲ. ಓರ್ವ ವ್ಯಕ್ತಿಗೆ ಶೆಡ್‌ನ ಪತ್ರಾಸ್‌ ಕಾಲಿಗೆ ಅಪ್ಪಳಿಸಿದ ಪರಿಣಾಮ ಗಾಯಗಳಾಗಿದ್ದು, ಎಮ್ಮೆಯೊಂದು ಗಂಭೀರವಾಗಿ ಗಾಯಗೊಂಡಿದೆ.

ಕಳೆದ ರಾತ್ರಿ ಆಕಸ್ಮಿಕವಾಗಿ ಸಿಡಿಲು ಗುಡುಗು ಸಹಿತ ಮಳೆ ಅಬ್ಬರಿಸಲು ಆರಂಭಗೊಂಡಿತು. ಆದರೆ, ತುಸು ಹೊತ್ತಲ್ಲೇ ಗಾಳಿಯೂ ಸಹ ಬೀಸಲು ಆರಂಭಿಸಿತು. ನೋಡನೋಡುತ್ತಲೇ ನಗರ ಹಾಗೂ ಸುತ್ತ-ಮುತ್ತಲಿನ ಗ್ರಾಮಗಳಲ್ಲಿ ಮರಗಳು, ವಿದ್ಯುತ್ ಕಂಬಗಳು, ಟಿಸಿಗಳು ಧರೆಗುರುಳಿದವು. ಮನೆ ಮೇಲಿನ ಪತ್ರಾಸ್‌ಗಳು, ಶೆಡ್‌ನ ಪತ್ರಾಸ್‌ಗಳು ಹಾರಿ ಪಕ್ಕದ ಮನೆ ಮೇಲೆ ಅಪ್ಪಳಿಸಿವೆ. ಬೆಳಗ್ಗೆಯಿಂದ ರಸ್ತೆಗುರುಳಿದ ಮರಗಳನ್ನು ತೆಗೆಯುವ ಕಾರ್ಯ ಭರದಿಂದ ಸಾಗಿತ್ತು. ವಿದ್ಯುತ್ ಕಂಬಗಳ ದುರುಸ್ತಿ ಕಾರ್ಯವನ್ನೂ ಸಹ ಹೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿಯಿಂದ ತ್ವರಿತಗತಿಯಲ್ಲಿ ಕಾರ್ಯಾಚರಣೆ ನಡೆಯಿತು.

ಶಾಲೆ, ಮನೆಗಳಿಗೆ ಭಾರಿ ಆಘಾತ:

ಇಲ್ಲಿನ ವಿದ್ಯಾಮಂದಿರ ಪ್ರೌಢಶಾಲೆಯ ಮೇಲಿನ ಬೃಹತ್ ಆಕಾರದ ಶೆಡ್ ಸುಮಾರು ನೂರು ಅಡಿ ಹಾರಿ ಪಕ್ಕದ ಮನೆಗಳು ಹಾಗೂ ವಾಹನಗಳ ಮೇಲೆ ಅಪ್ಪಳಿಸಿದ ಪರಿಣಾಮ ಮನೆಗಳು ಭಾರಿ ಪ್ರಮಾಣದಲ್ಲಿ ಹಾನಿಗೊಳಗಾಗಿವೆ. ವಾಹನಗಳು ಜಖಂಗೊಂಡಿವೆ. ಶೆಡ್ ರಭಸಕ್ಕೆ ವಿದ್ಯುತ್ ಕಂಬವೂ ಸಹ ನೆಲಕ್ಕುರುಳಿತು. ಸ್ಥಳೀಯ ಸಿಟಿ ಮುನಿಸಿಪಲ್ ಕೌನ್ಸೆಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿಯೂ ಚಾವಣಿಯ ಪತ್ರಾಸ್‌ಗಳು ಹಾರಿ ನೆಲಕ್ಕುರುಳಿವೆ. ಅಮಲಝರಿ ಗ್ರಾಮದಲ್ಲಿಯೂ ಸಹ ಅಪಾರ ಹಾನಿಯಾಗಿದ್ದು ಶೆಡ್ ಹಾರಿ ಎಮ್ಮೆಯೊಂದು ಗಂಭೀರವಾಗಿ ಗಾಯಗೊಂಡಿದೆ.

ತಹಸೀಲ್ದಾರ್‌ ಎಂ.ಎನ್.ಬಳಿಗಾರ, ನಗರಸಭೆ ಪೌರಾಯುಕ್ತ ಜಗದೀಶ ಹುಲಗೆಜ್ಜಿ, ತಾಲೂಕು ಪಂಚಾಯತಿ ಇಒ ಸುನೀಲ ಮದ್ದಿನ್, ಹೆಸ್ಕಾಂ ಎಂಜಿನೀಯರ್ ಅಕ್ಷಯ ಚೌಗುಲೆ, ನಗರಸಭೆ ಮಾಜಿ ಅಧ್ಯಕ್ಷ ಜಯವಂತ ಭಾಟಲೆ, ವಿಲಾಸ ಗಾಡಿವಡ್ಡರ, ಮಾಜಿ ಉಪಾಧ್ಯಕ್ಷ ಸುನೀಲ ಪಾಟೀಲ, ನಗರಸಭೆ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದರು.