ಸಾರಾಂಶ
ಔರಾದ್ ತಾಲೂಕಿನ ಗ್ರಾಮವೊಂದರಲ್ಲಿ ಭಾನುವಾರ ಸಂಜೆ ಸುರಿದ ಮಳೆಗೆ ವಿದ್ಯುತ್ ಕಂಬ ನೆಲಕ್ಕುರುಳಿದೆ. ವೇಗವಾಗಿ ಬಿಸಿದ ಗಾಳಿಯೊಂದಿಗೆ ಗುಡುಗು ಮಿಂಚಿನ ಮಧ್ಯೆ ಮಳೆ ಬಿದ್ದಿದ್ದರಿಂದ ಅನೇಕ ಮನೆಗಳ ಮೇಲಿನ ತಗಡಗಳು ಹಾರಿ ಹೋಗಿವೆ.
ಬೀದರ್: ಮಾರ್ಚ್ ತಿಂಗಳ ಮೊದಲನೆ ವಾರದಿಂದಲೆ ಬೀದರ್ ಜಿಲ್ಲೆಯ ಜನರು ಬಿಸಿಲಿನ ಝಳದ ಸಮಸ್ಯೆ ಎದುರಿಸುತ್ತಿದ್ದರು. ಅದಕ್ಕೆ ಭಾನುವಾರ ಸಂಜೆ 5ರ ಸುಮಾರಿಗೆ ಗಾಳಿ, ಗುಡುಗಿನೊಂದಿಗೆ ಒಂದು ಗಂಟೆಯವರೆಗೆ ಬಿದ್ದ ಮಳೆರಾಯ ತಂಪೆರೆದಿದ್ದಾನೆ.
ವೇಗವಾಗಿ ಬಿಸಿದ ಗಾಳಿಯೊಂದಿಗೆ ಗುಡುಗು ಮಿಂಚಿನ ಮಧ್ಯೆ ಮಳೆ ಬಿದ್ದಿದ್ದರಿಂದ ಅನೇಕ ಮನೆಗಳ ಮೇಲಿನ ತಗಡಗಳು ಹಾರಿ ಹೋಗಿವೆ. ಔರಾದ್ ತಾಲೂಕಿನ ಅನೇಕ ಕಡೆಗಳಲ್ಲಿ ವಿದ್ಯುತ್ ಕಂಬಗಳು ಕೂಡ ನೆಲಕ್ಕುರುಳಿದ ಮಾಹಿತಿ ಇದೆ.
ಬೀದರ್ ನಗರದ ಅನೇಕ ರಸ್ತೆಗಳ ಮೇಲೆ ಚರಂಡಿ ತುಂಬಿ ರಸ್ತೆಯ ಮೇಲೆ ಕಲುಷಿತ ನೀರು ಹರಿದಿವೆ.ಬೀದರ್ ನಗರ ಸೇರಿದಂತೆ ಜಿಲ್ಲೆಯ ಔರಾದ್ ಹಾಗೂ ಭಾಲ್ಕಿ ತಾಲೂಕಿನ ಕೆಲ ಗ್ರಾಮಗಳಲ್ಲಿ ಕೂಡ ಮಧ್ಯಾಹ್ನ 4ರ ಸುಮಾರಿಗೆ ಮಳೆ ಬಿದ್ದಿದೆ ಎಂದು ಹೇಳಲಾಗಿದೆ.
ಏನೆ ಆಗಲಿ ಜಿಲ್ಲೆಯಲ್ಲಿ ಬೇಸಿಗೆಯ ಬಿಸಿಲಿನಿಂದ ಹೈರಾಣ ಆಗಿದ್ದ ಜನರಿಗೆ ಭಾನುವಾರ ಬಿದ್ದ ಮಳೆಯಿಂದ ಮುಂದಿನ 3-4 ದಿನಗಳಿಗಾದರು ತಂಪಿನ ವಾತಾವರಣ ಇರಲಿದೆ ಎಂದು ಹೇಳಬಹುದು.