ಭಾರೀ ಮಳೆ: 2 ಗ್ರಾಮಗಳು ಜಲಾವೃತ

| Published : Sep 02 2024, 02:08 AM IST

ಸಾರಾಂಶ

ಶನಿವಾರ ರಾತ್ರಿಯೇ ಕಾಗಿಣಾ ನದಿಗೆ ಮಹಾಪೂರ ಬಂದಿದ್ದು ಬಟಗೇರಾ ಬಳಿಯ ಸೇತುವೆ ಮುಳುಗಿದೆ. ಇದರಿಂದಾಗಿ ಕಲಬುರಗಿ- ಸೇಡಂ, ಹಾದ್ರಾಬಾದ್‌ ಮಾರ್ಗ ಸಂಚಾರಕ್ಕೆ ಬಂದ್‌ ಆಗಿದೆ. ಚಿತ್ತಾಪುರ ತಾಲೂಕಿನ ದಂಡೋತಿ ಬಳಿ ಕಾಗಿಣಾ ನದಿ ನೀರು ಸೇತುವೆ ಮುಳುಗಿದ್ದರಿಂದ ಹಳ್ಳಿಗಾಡಿನ ಸಂಪರ್ಕ ಕಡಿತವಾಗಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಜಿಲ್ಲೆಯಲ್ಲಿ ಹುಬ್ಬ ಮಳೆ ಭಾನುವಾರ ಕೂಡಾ ಮುಂದುವರಿದಿದೆ. ಇಡೀ ರಾತ್ರಿ ಬಿರುಸಿನಿಂದ ಸುರಿದ ಮಳೆಯಿಂದಾಗಿ ಕಾಗಿಣಾ, ಕಮಲಾವತಿ, ಬೆಣ್ಣೆತೊರಾ, ಮುಲ್ಲಾಮಾರಿ, ಅಮರ್ಜಾ ನದಿಗಳು ತುಂಬಿ ಹರಿಯುತ್ತಿವೆ. ಈ ನದಿಗಳ ಹಿನ್ನೀರು ಹಲವು ಸೇತುವಗಳನ್ನು ಆಪೋಷನ ಪಡೆದಿದ್ದು ಗ್ರಾಮೀಣ ಸಂಪರ್ಕ ರಸ್ತೆಗಳು ಮುಳುಗಿ ಹೋಗಿವೆ.

ಗಂಡೋರಿ ನಾಳಾ, ಬೊಣ್ಣೆತೊರಾ ನದಿಗಳಿಗೂ ಮಹಾಪೂರ ಬಂದಿದ್ದು ಈ ನದಿಗಳ ನೀರು ಹಲವು ಗ್ರಾಮಗಳಿಗೆ ನುಗ್ಗಿದ್ದರಿಂದ ಆ ಗ್ರಾಮಗಳು ಜಲಾವೃತಗೊಂಡಿದ್ದು ಹಳ್ಳಿ ಜನ ಫಜೀತಿಗೆ ಸಿಲುಕಿದ್ದಾರೆ. ಚಿತ್ತಾಪುರ ತಲೂಕಿನ ದಿಗ್ಗಾಂವ್‌, ಸೇಡಂ ತಾಲೂಕಿನ ಬೆನಕನಹಳ್ಳಿ ಗ್ರಾಮಗಳಲ್ಲಿ ಹಳ್ಳದ ನೀರು ಮನೆಗಳಿಗೆ ನುಗ್ಗಿದೆ. ಇದಲ್ಲದೆ ಈ ಗ್ರಾಮಗಳ ಸಂಪರ್ಕ ರಸ್ತೆಗಳು ಮುಳುಗಿ ಹೋಗಿದ್ದು ಗ್ರಾಮಗಳು ಹೊರ ಜಗತ್ತಿನೊಂದಿಗಿನ ಸಂಪರ್ಕ ಕಡಿದುಕೊಂಡಿವೆ.

ಕಲಬುರಗಿ- ಸೇಡಂ- ಹೈದ್ರಾಬಾದ್‌ ಸಂಪರ್ಕ ಕಡಿತ: ಶನಿವಾರ ರಾತ್ರಿಯೇ ಕಾಗಿಣಾ ನದಿಗೆ ಮಹಾಪೂರ ಬಂದಿದ್ದು ಬಟಗೇರಾ ಬಳಿಯ ಸೇತುವೆ ಮುಳುಗಿದೆ. ಇದರಿಂದಾಗಿ ಕಲಬುರಗಿ- ಸೇಡಂ, ಹಾದ್ರಾಬಾದ್‌ ಮಾರ್ಗ ಸಂಚಾರಕ್ಕೆ ಬಂದ್‌ ಆಗಿದೆ. ಚಿತ್ತಾಪುರ ತಾಲೂಕಿನ ದಂಡೋತಿ ಬಳಿ ಕಾಗಿಣಾ ನದಿ ನೀರು ಸೇತುವೆ ಮುಳುಗಿದ್ದರಿಂದ ಹಳ್ಳಿಗಾಡಿನ ಸಂಪರ್ಕ ಕಡಿತವಾಗಿದೆ.

ಮಳಖೇಡ ಬಳಿಯೂ ಕಾಗಿಣಾ ನೀರು ಉಕ್ಕೇರಿದ್ದಿರಂದ ಇಲ್ಲಿನ ಬೆಣ್ಣೆತೊರಾ, ಕಾಗಿಣಾ ಸಂಗಮ ಸ್ಥಳವಾದ ಎಂ ಸಂಗಾವಿ, ಮಳಖೇಡ್‌ ಹಿಂಭಾಗದಲ್ಲಿನ ಹಳ್ಳಿಗಾಡಿನ ಸಂಪರ್ಕ ಕಡಿತಗೊಂಡಿದೆ. ರಿಬ್ಬನಪಲ್ಲಿ ರಾಜ್ಯ ಹೆದ್ದಾರಿ- 10 ಸಂಪರ್ಕ ಕಡಿತವಾಗಿ್ರಿಂದ್ದರಿಂದ ಕಲಬುರಗಿ- ಸೇಡಂ- ರಿಬ್ಬನಪಲ್ಲಿ ಸಂಚಾರ ಮಾರ್ಗ ಬಂದ್‌ ಆಗಿದೆ. ಆಳಂದ ತಾಲೂಕಿನ ಮಾದನ ಹಿಪ್ಪರಗಾ, ಸಾಲೆಗಾಂವ್‌ ಕೆರೆ, ಭೂಸನೂರ್‌, ಕೋರಳ್ಳಿ ಕೆರಘುಲು, ಹಳ್ಳಕೊಳ್ಳಗಳು ಮಳೆಗೆ ತುಂಬಿ ಹರಿಯುತ್ತಿವೆ.

ಬೆಣ್ಣೆತೊರಾ ಜಲಾಶಯ ಭರ್ತಿ: ಮಹಾರಾಷ್ಟ್ರದಿಂದ ಹರಿದು ಬರುತ್ತಿರುವ ಲಕ್ಷಾಂತರ ಕ್ಯುಸೆಕ್‌ ನೀರಿನಿಂದಾಗಿ ಭೀಮಾನದಿ ಒಳ ಹರಿವು ಹೆಚ್ಚಿದೆ. ಇದು ಬೆಣ್ಣೆತೊರಾ ನದಿ ನೀರಿನ ಮಟ್ಟ ಹೆಚ್ಚುವಂತೆ ಮಾಡಿದೆ. ದಾರಕಾರ ಮಳೆಯಿಂದ ರೌದ್ರಾವತಿ ನದಿಯು ಸಹ ತುಂಬಿ ತಳುಕಾಡುತ್ತಿದೆ.

ಬೆಣ್ಣೆತೊರಾ ಜಲಾಶಯಸಂಪೂರ್ಣ ಭರ್ತಿಯಾಗಿದ್ದು, 9200 ಕ್ಯುಸೆಕ್‌ ನೀರನ್ನ ನದಿಗೆ ಹರಿಬಿಟ್ಟಿದ್ದಾರೆ. ಹೆಬ್ಬಾಳ, ಚಿಂಚೋಳಿ ಎಚ್, ಮಲಘಾಣ, ಜೀವಮಾರಡಗಿ, ಸಾವತಖೇಡ, ಕಮಕನೂರ, ನಿಪ್ಪಾಣಿ, ಹೇರೂರ, ಸೇರಿದಂತೆ ಜಲಾಶಯ ಕೆಳಕಂಡ ಗ್ರಾಮದ ಜಮೀನುಗಳಲ್ಲಿ ನೀರು ಹರಿದು 1 ಸಾವಿರಕ್ಕೂ ಅಧಿಕ ಹೆಕ್ಟೇರ್ ತೊಗರಿ ಬೆಳೆ ಹಾಳಾಗಿ ಜಲಶಯದ ಕೆಳಗಿನ ಗ್ರಾಮಗಳ ರೈತರ ಕಷ್ಟ ಹೆಳತೀರದಾಗಿದೆ. ಕಂದಾಯ ಇಲಾಖೆ, ಹಾಗೂ ಬೆಣ್ಣೆತೊರಾ ಎಇಇ ಕಾಳಗಿ ಅರ್‌ಐ ನೇತ್ರತ್ವದಲ್ಲಿ ಜಲಶಯದ ಎಲ್ಲಾ ಗ್ರಾಮಸ್ಥರು ಜಲಾಶಯದ ದಡದಲ್ಲಿ ಜನ-ಜಾನುವಾರು ಬಿಡಬೇಡಿ ಎಂದು ಮುನ್ಸೂಚನೆ ಹೊರಡಿಸಿ ಡಂಗೂರ ಸಾರಿದ್ದಾರೆ.

ಕಾಳಗಿ ನೀಲಕಂಠ ಕಾಳೇಶ್ವರ ದೇವಸ್ಥಾನ ಜಲಾವೃತ: ಕಾಳಗಿ ಪಟ್ಟಣದಲ್ಲೇ ಹರಿಯುವ ರೌದ್ರಾವತಿ ನದಿಗೆ ನೆರೆ ಬಂದಿದೆ. ಭಾರಿ ಮಳೆಯಿಂದಾಗಿ ನದಿ ಉಕ್ಕೇರಿದ್ದು ಪಕ್ಕದಲ್ಲೇ ಇರುವ ಪುರಾಣ ಪ್ರಸಿದ್ಧ ನೀಲಕಂಠ ಕಾಳೃಶ್ವರ ದೇವಸ್ಥಾನ ಹೊಕ್ಕಿದೆ. ಇದರಿಂದಾಗಿ ಅಲ್ಲಿರುವ ಶಿವಲಿಂಗ ಜಲಾವೃತಗೊಂಡಿದೆ. ಸುರಿಯುವ ಮಳೆಯಲ್ಲಿಯೇ ಜಲಾವೃತ ಗರ್ಭಗುಡಿ ಶಿವಲಿಂಗದ ಪೂಜೆಯನ್ನು ಅರ್ಚಕ ಜಗದೀಶ್ ಜೋಷಿ, ಚಂದ್ರು ಜೋಷಿ ನೆರವೇರಿಸಿದರು.

ಹೆರೂರ್‌ (ಕೆ) 120 ಮಿಮೀ, ಕಲಬುರಗಿ 100 ಮಿಮೀ ಮಳೆ!

ಜಿಲ್ಲೆಯ ಕಾಳಗಿ ತಾಲೂಕಿನ ಹೇರೂರ್‌ (ಕೆ) ಗ್ರಾಮದಲ್ಲಿ ಶನಿವಾರ ಒಂದೇ ರಾತ್ರಿಗೆ 120 ಮಿಮೀ ಮಳೆ ಸುರಿದಿದೆ. ಇನ್ನು ಕಾಳಗಿಯಲ್ಲಿ 93 ಮಿಮೀ, ಕೋಡ್ಲಾದಲ್ಲಿ 62 ಮಿಮೀ ಮಳೆಯಾಗಿದೆ. ಜೇವರ್ಗಿ- 61 ಮಿಮೀ, ನೆಲೋಗಿಯಲ್ಲಿ 55 ಮಿಮೀ, ಜೇರಟಗಿಯಲ್ಲಿ 26 ಮಿಮೀ, ಆಂದೋಲಾದಲ್ಲಿ 20 ಮಿಮೀ, ಆಳಂದ- 56 ಮಿಮೀ, ನಿಂಬರ್ಗಾ- 60 ಮಿಮೀ, ಕೋರಳ್ಳಿ, ಸರಸಂಬಾ, ಮಾದನ ಹಿಪ್ಪರಗಾದಲ್ಲಿ ಸರಾಸರಿ 30 ಮಿಮೀ, ಯಡ್ರಾಮಿ 18, ಇಜೇರಿಯಲ್ಲಿ 45 ಮಿಮೀ ಮಳೆಯಾಗಿದೆ. ಚಿಂಚೋಳಿಯ ಕುಂಚಾವಾರಮ್‌ನಲ್ಲಿ 66 ಮಿಮೀ, ಚಿಂಚೋಳಿಯಲ್ಲಿ 62 ಮಿಮೀ, ನಿಡಗುಂದಾ 77 ಮಿಮೀ, ಚಿಮ್ಮನಚೋಡ- 57 ಮಿಮೀ, ಐನಾಪೂರ, ಸುಲೇಪೇಟ್‌ನಲ್ಲಿ ತಲಾ 50 ಮಿಮೀ , ಅಫಜಲ್ಪುರ 27 ಮಿಮೀ, ಗೊಬ್ಬೂರದಲ್ಲಿ 60 ಮಿಮೀ, ಕರಜಗಿ, ಆತನೂರಲ್ಲಿ ತಲಾ 25 ಮಿಮೀ ಮಳೆಯಾಗಿದೆ. ಸೇಡಂ 93 ಮಿಮೀ, ಕೋಲಕುಂದಾ 85 ಮಿಮೀ, ಆಡ್ಕಿ, ಮುಧೋಳ, ಕೋಡ್ಲಾದಲ್ಲಿ ಸರಾಸರಿ 60 ಮಿಮೀ ಮಳೆಯಾಗಿದೆ, ಕಲಬುರಗಿ ನಗರದಲ್ಲಿ ಸರಾಸರಿ 100 ಮಿಮೀ, ಫರತಬಾದ್‌ 50, ಪಟ್ಟಮ 27, ಅವರಾದ (ಬಿ) 90 ಹಾಗೂ ಸಾವಳಗಿಯಲ್ಲಿ 56 ಮಿಮೀ ಮಳೆ ಸುರಿದಿದೆ.

ಮಳಖೇಡ ಉತ್ತರಾದಿ ಮಠ ಜಲಾವೃತ

ಕಾಗಿಣಾ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದರಿಂದಾಗಿ ಮಳಖೇಡದಲ್ಲಿರುವ ಶ್ರೀ ಜಯತೀರ್ಥರ ಮೂಲ ವೃಂದಾವನ ಸನ್ನಿಧಾನ, ಉತ್ತರಾದಿ ಮಠದ ಅಂಗಳಕ್ಕೆ ನದಿ ನೀರು ನುಗ್ಗಿ ಜಲಾವೃತಗೊಂಡಿದೆ. ಮಳಖೇಡದಲ್ಲಿರುವ ಜಯತೀರ್ಥರು, ಅಕ್ಷೋಭ್ಯತೀರ್ಥರ ವೃಂದಾವನಗಳು ಕಾಗಿಣಾ ನದಿ ನೀರಲ್ಲಿ ಜಲಾವೃತಗೊಂಡಿವೆ. ಇದಲ್ಲದೆ ಸುತ್ತಲಿನ ನೂರಾರು ಎಕರೆಯಲ್ಲಿ ಮಳೆ ನೀರು ಮಡುಗಟ್ಟಿದ್ದು ಭಾರಿ ಅವಾಂತರ ಹುಟ್ಟುಹಾಕಿದೆ.