ಮಹಾಮಳೆ: ಹೆಸ್ಕಾಂಗೆ ₹47.71 ಕೋಟಿ ಹಾನಿ!

| Published : Oct 27 2024, 02:27 AM IST / Updated: Oct 27 2024, 02:28 AM IST

ಸಾರಾಂಶ

ಪ್ರತಿವರ್ಷ ಮಳೆಗಾಲದಲ್ಲಿ ಹೆಸ್ಕಾಂಗೆ ಹಾನಿಯಾಗುವುದು ಮಾಮೂಲು. ಆದರೆ, ಈ ವರ್ಷ ಕೊಂಚ ಜಾಸ್ತಿಯೇ ಹಾನಿಯುಂಟಾಗಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ: ಈ ವರ್ಷ ಸುರಿದ ಮಳೆಯಿಂದ ಹೆಸ್ಕಾಂಗೆ ₹47.71 ಕೋಟಿ ಹಾನಿಯಾಗಿದೆ. 23 ಸಾವಿರಕ್ಕೂ ಅಧಿಕ ವಿದ್ಯುತ್‌ ಕಂಬ ಧರಾಶಾಹಿಯಾಗಿದ್ದರೆ, 2200 ಅಧಿಕ ವಿದ್ಯುತ್‌ ಪರಿವರ್ತಕ ಹಾನಿಗೊಳಗಾಗಿವೆ. ಎಷ್ಟೋ ಹಳ್ಳಿಗಳು ಹತ್ತು ಹಲವು ದಿನಗಳ ಕಾಲ ಕತ್ತಲಲ್ಲೇ ಕಳೆದಿರುವುದುಂಟು.

ಇದು ಏಪ್ರಿಲ್‌ನಿಂದ ಅಕ್ಟೋಬರ್‌ ವರೆಗೆ ಮುಂಗಾರು ಹಾಗೂ ಹಿಂಗಾರು ಮಳೆಯಿಂದಾಗಿ ಹೆಸ್ಕಾಂನಲ್ಲಿ ಹಾನಿಯ ಪ್ರಮಾಣದ ಒಂದು ಝಲಕ್‌.

ಪ್ರತಿವರ್ಷ ಮಳೆಗಾಲದಲ್ಲಿ ಹೆಸ್ಕಾಂಗೆ ಹಾನಿಯಾಗುವುದು ಮಾಮೂಲು. ಆದರೆ, ಈ ವರ್ಷ ಕೊಂಚ ಜಾಸ್ತಿಯೇ ಹಾನಿಯುಂಟಾಗಿದೆ. ಜತೆಗೆ ಪ್ರತಿವರ್ಷ ಹಾನಿ ಏನಿದ್ದರೂ ಸೆಪ್ಟೆಂಬರ್‌ನಲ್ಲೇ ಮುಗಿದು ಹೋಗುತ್ತಿತ್ತು. ಹಿಂಗಾರಿನಲ್ಲಿ ಮಳೆಯೂ ಜಾಸ್ತಿಯಾಗುತ್ತಿರಲಿಲ್ಲ. ಹೀಗಾಗಿ ಹಾನಿಯೂ ಆಗುತ್ತಿರಲಿಲ್ಲ. ಆದರೆ ಈ ವರ್ಷ ಏಪ್ರಿಲ್‌ನಿಂದ ಹಿಡಿದು ಅಕ್ಟೋಬರ್‌ 21- 22ರ ವರೆಗೆ ಮಳೆ ಆಗುತ್ತಲೇ ಇತ್ತು. ಮುಂಗಾರಿನ ಜತೆ ಜತೆಗೆ ಹಿಂಗಾರಿನಲ್ಲೂ ಹೆಸ್ಕಾಂ ಹಾನಿ ಅನುಭವಿಸಬೇಕಾಗಿ ಬಂದಿತು ಎಂಬುದು ಹೆಸ್ಕಾಂ ಅಧಿಕಾರಿ ವರ್ಗದ ಮಾತು.

ಎಷ್ಟಾಗಿದೆ ಹಾನಿ?:

ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ, ಬೆಳಗಾವಿ, ವಿಜಯಪುರ, ಬಾಗಲಕೋಟೆ ಹೀಗೆ ಏಳು ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವುದು ಹೆಸ್ಕಾಂ. ಈ ಏಳು ಜಿಲ್ಲೆಗಳ ಪೈಕಿ ಅತಿ ಹೆಚ್ಚು ಹಾನಿ ಅನುಭವಿಸಿರುವುದು ಉತ್ತರ ಕನ್ನಡ ಜಿಲ್ಲೆ. ಇಲ್ಲಿ 11880 ವಿದ್ಯುತ್‌ ಕಂಬಗಳು ನೆಲಕ್ಕುರಳಿದ್ದರೆ, 1023 ಟ್ರಾನ್ಸ್‌ಫಾರ್ಮರ್‌ ಹಾನಿಯಾಗಿದೆ. 530 ಕಿಮೀಗೂ ಅಧಿಕ ವಿದ್ಯುತ್‌ ತಂತಿಗೆ ಧಕ್ಕೆಯುಂಟಾಗಿದೆ. ಇದರಿಂದ ಉತ್ತರ ಕನ್ನಡ ಜಿಲ್ಲೆಯಲ್ಲೇ ₹23.29 ಕೋಟಿಯಷ್ಟು ಹಾನಿಯಾಗಿದೆ. ಇನ್ನು ಅತಿ ಕಡಿಮೆ ಹಾನಿಯಾಗಿರುವುದು ಧಾರವಾಡ ಜಿಲ್ಲೆಯಲ್ಲಿ. 752 ವಿದ್ಯುತ್‌ ಕಂಬ ಧರಾಶಾಹಿಯಾಗಿದ್ದರೆ, 58 ಟ್ರಾನ್ಸ್‌ಫಾರ್ಮರ್‌, 1.70 ಕಿಮೀ ವಿದ್ಯುತ್‌ ತಂತಿ ಹಾನಿಯಾಗಿ ₹51 ಲಕ್ಷ ನಷ್ಟವಾಗಿದೆ.

ಇನ್ನುಳಿದಂತೆ ಗದಗದಲ್ಲಿ ₹1.94 ಕೋಟಿ, ಹಾವೇರಿ- ₹3.34 ಕೋಟಿ, ಬೆಳಗಾವಿ- ₹6.37 ಕೋಟಿ, ವಿಜಯಪುರ ₹1.94 ಕೋಟಿ, ಬಾಗಲಕೋಟೆ- ₹10.29 ಕೋಟಿಯಷ್ಟು ಹಾನಿಯಾಗಿದೆ. ಎಲ್ಲೆಡೆಯೂ ದುರಸ್ತಿಯನ್ನು ಸಿಬ್ಬಂದಿ ಅಲ್ಲಲ್ಲೇ ಪೂರ್ಣಗೊಳಿಸಿದೆ.

ಮಳೆಗಾಲದಲ್ಲಿ ಹೆಸ್ಕಾಂ ತೆರೆದಿರುವ ಸಹಾಯವಾಣಿಗೆ ಕನಿಷ್ಠವೆಂದರೂ 2500ಕ್ಕೂ ಹೆಚ್ಚು ಕರೆಗಳು ಬರುತ್ತಿದ್ದವು. ಮೊದಲಿಗೆ 1500 ಕರೆಗಳು ಬರುತ್ತಿದ್ದವಂತೆ. ಮಳೆಗಾಲದಲ್ಲಿ ಮಾತ್ರ ಇವುಗಳ ಸಂಖ್ಯೆ 2500ಕ್ಕೆ ಏರಿಕೆಯಾಗಿದೆ. ಇನ್ನು ಮಳೆಗಾಲದಲ್ಲಿ ಹೆಸ್ಕಾಂ ಸಿಬ್ಬಂದಿ ಕೂಡ ಹಗಲಿರುಳು ಶ್ರಮಿಸಿ ಸಾರ್ವಜನಿಕರಿಗೆ ನೆರವು ನೀಡಿದೆ. ಅದರಲ್ಲೂ ಉತ್ತರ ಕನ್ನಡದಲ್ಲಿ ಸಿಬ್ಬಂದಿಯೇ ಎಷ್ಟೋ ದಿನ ಮನೆ ಮುಖ ಕೂಡ ನೋಡಲು ಆಗಿಲ್ಲವಂತೆ. ಮಳೆಗಾಲದಲ್ಲಿ ಕೆಲಸ ಮಾಡಲು ಪ್ರತ್ಯೇಕ ಟೀಂ ಕೂಡ ಹೆಸ್ಕಾಂ ರಚಿಸಿತ್ತು. ಇದೀಗ ಮಳೆ ಸ್ವಲ್ಪ ಕಡಿಮೆಯಾಗಿದೆ. ಹೀಗಾಗಿ ಸಿಬ್ಬಂದಿ ನೆಮ್ಮದಿಯ ನಿಟ್ಟಿಸಿರು ಬಿಡುತ್ತಿದ್ದಾರೆ.

ಒಟ್ಟಿನಲ್ಲಿ ಮಳೆಯಿಂದ ಹೆಸ್ಕಾಂಗೆ ₹47.71 ಕೋಟಿಗೂ ಅಧಿಕ ಹಾನಿಯುಂಟಾಗಿ ಸಾರ್ವಜನಿಕರು ತೊಂದರೆಯನ್ನುಭವಿಸಿದರೆ, ಅವುಗಳ ದುರಸ್ತಿ ಮಾಡಿ ಮತ್ತೆ ಸರಿಪಡಿಸಲು ಸಿಬ್ಬಂದಿ ಕೂಡ ಪಡಿಪಾಟಿಲು ಪಟ್ಟಿರುವುದಂತೂ ಸತ್ಯ.

ಜಿಲ್ಲಾವಾರು ಹಾನ

ಜಿಲ್ಲೆ ವಿದ್ಯುತ್‌ ಕಂಬಟ್ರಾನ್ಸ್‌ಫಾರ್ಮರ್‌ ವಿದ್ಯುತ್‌ ತಂತಿ (ಕಿಮೀ) ಹಾನಿ ಪ್ರಮಾಣ

ಧಾರವಾಡ 752 58 1.70 0.51 ಕೋ

ಗದಗ 698 2 00 1.94 ಕೋ

ಹಾವೇರಿ 1933 52 2.17 3.34 ಕೋ

ಉತ್ತರ ಕನ್ನಡ118801023 530.35 23.29 ಕೋ

ಬೆಳಗಾವಿ 3592538 127.43 6.37 ಕೋ

ವಿಜಯಪು2126 140 5.02 1.94 ಕೋ

ಬಾಗಲಕೋಟೆ2695439 71.89 10.29 ಕೋ

ಒಟ್ಟು 236762252 738.56 47.71 ಕೋಟಿ