ತುರುವೇಕೆರೆ ತಾಲೂಕಿನಾದ್ಯಂತ ಭರ್ಜರಿ ಮಳೆ

| Published : Jun 04 2024, 12:31 AM IST

ಸಾರಾಂಶ

ಸಂಪಿಗೆ, ಯಲದಬಾಗಿ, ತಳವಾರನಹಳ್ಳಿ, ದ್ಯಾಮಸಂದ್ರ, ಮಾಸ್ತಿಗೊಂಡನಹಳ್ಳಿ ಸೇರಿ ಸಂಪಿಗೆ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ೫ ಸೆಂಮೀ. ಮಳೆಯಾಗಿದೆ. ಪಟ್ಟಣದ ಸುತ್ತಮುತ್ತಲಿನ ಹಾವಾಳ, ತಾವರೇಕೆರೆ, ಮುನಿಯೂರು, ಬಾಣಸಂದ್ರ, ಬೊಮ್ಮೇನಹಳ್ಳಿ ಎ.ಹೊಸಹಳ್ಳಿ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಕಳೆದೆರೆಡು ದಿನಗಳಿಂದ ತಾಲೂಕಿನಲ್ಲಿ ಮಳೆ ಆಗುತ್ತಿದ್ದು, ಹಲವು ಕೆರೆ- ಕಟ್ಟೆಗಳಲ್ಲಿ ನೀರು ಸಂಗ್ರಹವಾಗುತ್ತಿದೆ. ಅಲ್ಲಲ್ಲಿ ಕೆಲವು ಮನೆಗಳ ಗೋಡೆಗಳು ಕುಸಿದಿರುವ ಬಗ್ಗೆಯೂ ವರದಿಯಾಗಿದೆ.

ತಾಲೂಕಿನಾದ್ಯಂತ ಭಾನುವಾರ ರಾತ್ರಿ ಸುರಿದ ರೋಹಿಣಿ ಮಳೆಯಿಂದಾಗಿ ಪೂರ್ವ ಮುಂಗಾರು ಬಿತ್ತನೆ ಮಾಡಿದ ರೈತರಲ್ಲಿ ಸಂತಸ ಮೂಡಿದೆ.

ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ರಾತ್ರಿ ಸುಮಾರು ಒಂದು ಗಂಟೆಗಳ ಕಾಲ ಗುಡುಗು, ಮಿಂಚಿನೊಂದಿಗೆ ಮಳೆಯಾದರೆ, ಕೆಲವೆಡೆ ಜಿಟಿಜಿಟಿ ಮಳೆ ಸುರಿದಿದೆ.

ಸಂಪಿಗೆ, ಯಲದಬಾಗಿ, ತಳವಾರನಹಳ್ಳಿ, ದ್ಯಾಮಸಂದ್ರ, ಮಾಸ್ತಿಗೊಂಡನಹಳ್ಳಿ ಸೇರಿ ಸಂಪಿಗೆ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ೫ ಸೆಂಮೀ. ಮಳೆಯಾಗಿದೆ. ಪಟ್ಟಣದ ಸುತ್ತಮುತ್ತಲಿನ ಹಾವಾಳ, ತಾವರೇಕೆರೆ, ಮುನಿಯೂರು, ಬಾಣಸಂದ್ರ, ಬೊಮ್ಮೇನಹಳ್ಳಿ ಎ.ಹೊಸಹಳ್ಳಿ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ.

ದಂಡಿನಶಿವರ ಹೋಬಳಿ ವ್ಯಾಪ್ತಿಯ ಹುಲ್ಲೇಕೆರೆ, ಅಮ್ಮಸಂದ್ರ, ದಂಡಿನಶಿವರ, ದುಂಡಾ, ಬೀಚನಹಳ್ಳಿ, ದೊಂಬರನಹಳ್ಳಿ, ಅಕ್ಕಳಸಂದ್ರ ಗೊಲ್ಲರಹಟ್ಟಿಯಲ್ಲಿ ಸಾಧಾರಣ ಮಳೆಯಾಗಿದೆ. ಮಾಯಸಂದ್ರ ಹೋಬಳಿ ಮತ್ತು ದಬ್ಬೇಘಟ್ಟ ಹೋಬಳಿಯ ಕೆಲ ಗ್ರಾಮಗಳಲ್ಲಿ ಜಿಟಿಜಿಟಿ ಮಳೆಯಾಗಿದೆ.

ತಾಲೂಕಿನಾದ್ಯಂತ ಎರಡು ದಿನಗಳಿಂದ ಮಳೆ ಸುರಿಯುತ್ತಿರುವ ಕಾರಣ ತೋಟದ ಸಾಲು, ಅಡಿಕೆ ಸಾಲು, ಬಾಳೆ ಮತ್ತು ಹೊಲಗಳಲ್ಲಿ ಅಲ್ಲಲ್ಲಿ ಮಳೆ ನೀರು ಸಂಗ್ರಹವಾಗಿದೆ. ಕೆಲವೆಡೆ ಚೆಕ್‌ಡ್ಯಾಮ್‌ಗಳು, ಕೃಷಿ ಹೊಂಡಗಳಲ್ಲಿ ಹೆಚ್ಚಿನ ನೀರು ಸಂಗ್ರಹವಾಗಿದೆ. ಇದರಿಂದ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಪರದಾಡುವುದು ತಪ್ಪಿದಂತಾಗಿದೆ.

ಈ ಮಳೆಯಿಂದ ತೆಂಗು, ಅಡಿಕೆ ಮತ್ತು ಬಾಳೆಗಿಡಗಳು ಸೊಂಪಾಗಿ ಬೆಳೆಯಲು ಸಹಕಾರಿಯಾಗಿದೆ. ಕೆಲವೆಡೆ ಹೆಸರು, ಅಲಸಂದೆ ಬಿತ್ತನೆ ಮಾಡಿರುವ ಹೊಲಗಳಲ್ಲಿ ನೀರು ನಿಂತು ಹೆಸರು ಗಿಡಗಳು ಹಾಳಾಗುವ ಭೀತಿ ರೈತರನ್ನು ಕಾಡಿದೆ.

ತಾಲೂಕಿನ ದಂಡಿನಶಿವರ ಹೋಬಳಿಯ ಹಡವನಹಳ್ಳಿ ಜನತಾ ಹೌಸ್ ನ ನಾಗರಾಜು ಅವರ ವಾಸದ ಮನೆಯ ಗೋಡೆ ಕುಸಿದು ಬಿದ್ದಿದೆ.