ಸಾರಾಂಶ
ಹೊಸಪೇಟೆ: ವಿಜಯನಗರ ಜಿಲ್ಲಾದ್ಯಂತ ಭಾನುವಾರ ರಾತ್ರಿ ಮಳೆ ಸಮೃದ್ಧವಾಗಿ ಸುರಿದಿದ್ದು, ಕಾದು ಕೆಂಡವಾಗಿದ್ದ ಇಳೆಗೆ ವರುಣ ತಂಪೆರೆದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದಾನೆ.
ಅದೇ ಕಾಲಕ್ಕೆ ರಭಸದಿಂದ ಸುರಿದ ಮಳೆಗೆ ಒಂಬತ್ತು ಮನೆಗಳು ಕುಸಿದು ಬಿದ್ದಿವೆ. ಸಿಡಿಲಿಗೆ ಆಕಳೊಂದು ಸತ್ತಿದೆ. ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿಯಲ್ಲಿ ಸಿಡಿಲಿಗೆ ತೆಂಗಿನಮರ ಹೊತ್ತಿ ಉರಿದಿದೆ.ನಗರದ ಹೊರವಲಯದ ರಾಯರಕೆರೆ ಪ್ರದೇಶದಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ನೀರು ನುಗ್ಗಿದೆ. ಕಾರಿಗನೂರು ಪ್ರದೇಶದಲ್ಲಿ ಹಳ್ಳ ತುಂಬಿ ಹರಿದಿದ್ದರಿಂದ ಬಿತ್ತನೆ ಹದ ಮಾಡಿದ ಜಮೀನು ಕೊಚ್ಚಿಕೊಂಡು ಹೋಗಿದೆ. ಹಂಪಿಯಲ್ಲೂ ರಸ್ತೆಯಲ್ಲಿ ಮಳೆ ನೀರು ನಿಂತಿದೆ.
ಮಳೆ ಹೊಡೆತಕ್ಕೆ ಹೊಸಪೇಟೆ ತಾಲೂಕಿನಲ್ಲಿ ಎರಡು ಮನೆ, ಕೂಡ್ಲಿಗಿ ತಾಲೂಕಿನಲ್ಲಿ ನಾಲ್ಕು ಮನೆ ಮತ್ತು ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಮೂರು ಮನೆಗಳು ಕುಸಿದು ಬಿದ್ದಿವೆ. ಕೂಡ್ಲಿಗಿಯ 13ನೇ ವಾರ್ಡ್ ನಿವಾಸಿ ಬಿ.ನಾಗರಾಜ ಎಂಬವರಿಗೆ ಸೇರಿದ ಆಕಳು ಸಿಡಿಲು ಬಡಿದು ಮೃತಪಟ್ಟಿದೆ.ಬೆಳೆಗಳು ಜಲಾವೃತ: ನಗರದ ಹೊರವಲಯದ ರಾಯರಕೆರೆ ಪ್ರದೇಶದಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿರುವ ಬಾಳೆಬೆಳೆ, ಕಬ್ಬು, ಮೆಕ್ಕೆಜೋಳ ಸೇರಿದಂತೆ ಇತರೆ ಬೆಳೆಗಳಿಗೆ ಮಳೆ ನೀರು ನುಗ್ಗಿದೆ. ಈ ಬೆಳೆಗಳು ಜಲಾವೃತಗೊಂಡಿವೆ. ಬೆಳೆಗಳು ಜಲಾವೃತಗೊಂಡಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ಜಂಟಿ ಸರ್ವೆ ನಡೆಸಿ ಪರಿಹಾರ ದೊರಕಿಸಿಕೊಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ನಗರದ ಕಾರಿಗನೂರು ಪ್ರದೇಶದಲ್ಲಿ ಮಳೆ ಹೊಡೆತಕ್ಕೆ ಹಳ್ಳ ಬಂದಿದೆ. ಹಳ್ಳದ ಪಕ್ಕದಲ್ಲೇ ಬಿತ್ತನೆಗೆ ಹದ ಮಾಡಿದ ಜಮೀನು ಕೊಚ್ಚಿಕೊಂಡು ಹೋಗಿದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಈ ಹಳ್ಳ ಕೊಚ್ಚಿಕೊಂಡು ಹೋಗಲಿದ್ದು, ಮಳೆ ನೀರು ಸರಾಗವಾಗಿ ಹರಿದುಹೋಗಲು ಕ್ರಮ ವಹಿಸಬೇಕು ಎಂದು ಮನವಿ ಮಾಡಿಕೊಂಡರೂ ಸ್ಪಂದನೆ ದೊರೆತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.41.51 ಮಿ.ಮೀ. ಮಳೆ ದಾಖಲು: ಜಿಲ್ಲೆಯಲ್ಲಿ ಭಾನುವಾರ ರಾತ್ರಿ 41.51 ಮಿ.ಮೀ. ಮಳೆ ದಾಖಲಾಗಿದೆ. ಜಿಲ್ಲೆಯ ಹೂವಿನಹಡಗಲಿ ತಾಲೂಕಿನಲ್ಲಿ 38 ಮಿ.ಮೀ. ಮಳೆ ದಾಖಲಾದರೆ, ಹಿರೇಹಡಗಲಿಯಲ್ಲಿ 52.40 ಮಿ.ಮೀ. ಮಳೆಯಾಗಿದೆ. ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ 51.75 ಮಿ.ಮೀ. ಮಳೆಯಾದರೆ ಹಂಪಸಾಗರದಲ್ಲಿ 60.40 ಮಿ.ಮೀ. ಮಳೆ ದಾಖಲಾಗಿದೆ. ಹೊಸಪೇಟೆ ತಾಲೂಕಿನಲ್ಲಿ 58.17 ಮಿ.ಮೀ. ಮಳೆಯಾದರೆ ನಗರದ ಐಬಿ ಪ್ರದೇಶದಲ್ಲಿ 86.40 ಮಿ.ಮೀ. ಮಳೆ ದಾಖಲಾಗಿದೆ. ಕೂಡ್ಲಿಗಿ ತಾಲೂಕಿನಲ್ಲಿ 50.20 ಮಿ.ಮೀ. ಮಳೆಯಾದರೆ, ಕೂಡ್ಲಿಗಿ ಪಟ್ಟಣದಲ್ಲಿ 69 ಮಿ.ಮೀ. ಮಳೆ ದಾಖಲಾಗಿದೆ. ಹರಪನಹಳ್ಳಿ ತಾಲೂಕಿನಲ್ಲಿ 11.47 ಮಿ.ಮೀ. ಮಳೆ ದಾಖಲಾಗಿದೆ. ಕೊಟ್ಟೂರು ತಾಲೂಕಿನಲ್ಲಿ 39.50 ಮಿ.ಮೀ. ಮಳೆಯಾದರೆ, ಕೋಗಳಿಯಲ್ಲಿ 61.40 ಮಿ.ಮೀ. ಮಳೆ ದಾಖಲಾಗಿದೆ.
ಹಂಪಿ ಪ್ರದೇಶದಲ್ಲಿ ಮಳೆಯಿಂದಾಗಿ ಕಚ್ಚಾರಸ್ತೆ ಕೆಸರುಮಯವಾಗಿದೆ. ನೆಲಸ್ತರದ ಶಿವದೇವಾಲಯದ ಬಳಿ ಮಳೆ ನೀರು ನಿಂತಿದೆ. ಜಿಲ್ಲೆಯಲ್ಲಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.;Resize=(128,128))
;Resize=(128,128))
;Resize=(128,128))
;Resize=(128,128))