ಭಾರಿ ಮಳೆ: ಉಪ್ಪಿನಂಗಡಿಯಲ್ಲಿ ಕೃತಕ ನೆರೆ

| Published : Jun 04 2024, 12:31 AM IST

ಸಾರಾಂಶ

ದಕ್ಷಿಣ ಕನ್ನಡದ ಉಪ್ಪಿನಂಗಡಿಯಲ್ಲಿ ಸೋಮವಾರ ಸಂಜೆ ಸುರಿದ ಭಾರಿ ಮಳೆಗೆ ಚರಂಡಿಗಳಲ್ಲಿ ನೀರು ಹರಿಯಲಾಗದೆ ರಸ್ತೆಯಲ್ಲಿ ಕೃತಕ ಪ್ರವಾಹ ಸೃಷ್ಟಿಯಾಯಿತು. ಧಾರಾಕಾರ ಮಳೆ ಸುರಿದ ಕಾರಣ ಚರಂಡಿಯ ಸಾಮರ್ಥ್ಯಕ್ಕಿಂತ ಹೆಚ್ಚು ನೀರು ಹರಿದು ಬಂದ ಕಾರಣ ರಸ್ತೆ ತುಂಬಾ ನೀರು ಸಂಗ್ರಹಣೆಗೊಂಡಿತು. ಹಲವೆಡೆ ತಗ್ಗು ಪ್ರದೇಶದಲ್ಲಿನ ಅಂಗಡಿಗಳಿಗೆ ಮಳೆ ನೀರು ರಭಸವಾಗಿ ನುಗ್ಗಿತು.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಉಪ್ಪಿನಂಗಡಿಯಲ್ಲಿ ಸೋಮವಾರ ಸಂಜೆ ಸುರಿದ ಭಾರಿ ಮಳೆಗೆ ಚರಂಡಿಗಳಲ್ಲಿ ನೀರು ಹರಿಯಲಾಗದೆ ರಸ್ತೆಯಲ್ಲಿ ಕೃತಕ ಪ್ರವಾಹ ಸೃಷ್ಟಿಯಾಯಿತು.

ಧಾರಾಕಾರ ಮಳೆ ಸುರಿದ ಕಾರಣ ಚರಂಡಿಯ ಸಾಮರ್ಥ್ಯಕ್ಕಿಂತ ಹೆಚ್ಚು ನೀರು ಹರಿದು ಬಂದ ಕಾರಣ ರಸ್ತೆ ತುಂಬಾ ನೀರು ಸಂಗ್ರಹಣೆಗೊಂಡಿತು. ಹಲವೆಡೆ ತಗ್ಗು ಪ್ರದೇಶದಲ್ಲಿನ ಅಂಗಡಿಗಳಿಗೆ ಮಳೆ ನೀರು ರಭಸವಾಗಿ ನುಗ್ಗಿತು.

ಕೆರೆಯಂತಾದ ಸೇತುವೆ:

ಇಲ್ಲಿನ ಕುಮಾರಧಾರ ಸೇತುವೆಯ ಮೇಲೆ ಇಕ್ಕೆಲಗಳಲ್ಲಿ ಮಳೆ ನೀರು ಹರಿದು ಹೋಗಲು ಮಾಡಿರುವ ರಂಧ್ರಗಳು ಮಣ್ಣು ತುಂಬಿ ಮುಚ್ಚಿ ಹೋಗಿದ್ದು, ಇದರಿಂದ ವಾಹನಗಳು ಸೇತುವೆಯ ಮೇಲೆ ತೆರಳುವಾಗ ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರ ಮೇಲೆ ಕೆಸರ ನೀರಿನ ಪ್ರೋಕ್ಷಣೆಯಾಗುವಂತಾಗಿದೆ.

ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಸೇತುವೆಯಲ್ಲಿನ ಹೂಳು ತೆರವುಗೊಳಿಸಿ ಸುಸ್ಥಿತಿಯಲ್ಲಿಡಬೇಕಾದ ಹೆದ್ದಾರಿ ಇಲಾಖೆ ಇಲ್ಲಿ ಇನ್ನೂ ಜಾಗೃತಗೊಳ್ಳದ ಕಾರಣಕ್ಕೆ ಈ ಸಮಸ್ಯೆ ಮೂಡಿದೆ. ಹೆದ್ದಾರಿಯಲ್ಲಿ ಹೆಚ್ಚಿನ ವೇಗದೊಂದಿಗೆ ಸಂಚರಿಸುವ ವಾಹನಗಳು ಈ ಸೇತುವೆಯಲ್ಲಿ ಸಂಚರಿಸುವಾಗ ಕಂಬಳ ಕರೆಯಲ್ಲಿನ ಕನೆ ಹಲಗೆ ಸ್ಪರ್ಧೆಯಲ್ಲಿ ನೀರು ಚಿಮ್ಮಿದಂತೆ ಇಲ್ಲಿಯೂ ನೀರು ಚಿಮ್ಮುತ್ತಿರುತ್ತದೆ. ಇದರಿಂದಾಗಿ ಪಾದಚಾರಿಗಳು ಮತ್ತು ದ್ವಿ ಚಕ್ರ ವಾಹನ ಸವಾರರು ತೀರಾ ಸಮಸ್ಯೆಗೆ ತುತ್ತಾಗುತ್ತಿದ್ದಾರೆ.

ನೇತ್ರಾವತಿ ಹರಿವು ಹೆಚ್ಚಳ:

ಉಪ್ಪಿನಂಗಡಿ ಪರಿಸರದಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಸೋಮವಾರ ಸಂಜೆಯಿಂದ ನೇತ್ರಾವತಿ ನದಿಯಲ್ಲಿ ದಿಢೀರ್‌ ನೀರಿನ ಹರಿವು ಏರಿಕೆಯಾಗಿದೆ. ಮಣ್ಣು ಮಿಶ್ರಿತ ನೀರಿನ ಪ್ರಮಾಣ ನೋಡ ನೋಡುತ್ತಿದ್ದಂತೆಯೇ ಹೆಚ್ಚುತ್ತಿರುವುದು ಕಂಡು ಬಂತು.