ಶನಿವಾರ ರಾತ್ರಿ ಸುರಿದ ಮಳೆಯಿಂದ ಅಪಾರ ಹಾನಿ

| Published : May 20 2024, 01:30 AM IST

ಸಾರಾಂಶ

ಕೆಲವು ಕಡೆಗಳಲ್ಲಿ ಚರಂಡಿ ನೀರು ಮನೆ, ಅಂಗಡಿ, ಅಪಾರ್ಟ್‌ಮೆಂಟ್‌ಗಳಿಗೆ ನುಗ್ಗಿ ಜನತೆ ರಾತ್ರಿಯಿಡಿ ತೊಂದರೆ ಅನುಭವಿಸುವಂತಾಯಿತು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಕಳೆದ 2-3 ದಿನಗಳಿಂದ ಮಧ್ಯಾಹ್ನದ ವೇಳೆ ಸುರಿಯುತ್ತಿದ್ದ ಮಳೆ ಶನಿವಾರ ರಾತ್ರಿಯಿಡಿ ಸುರಿದು ಮಹಾನಗರ ಸೇರಿದಂತೆ ತಾಲೂಕಿನ ಜನತೆಯನ್ನು ಹೈರಾಣಾಗಿಸಿತು.

ರಾತ್ರಿಯಿಡಿ ಕೆಲಕಾಲ ಜಡಿ ಮಳೆ ಸುರಿದರೆ ಮತ್ತೆ ಕೆಲಕಾಲ ರಭಸದ ಮಳೆ ಸುರಿದ ಹಿನ್ನೆಲೆಯಲ್ಲಿ ನಗರದ ಹಲವು ತಗ್ಗು ಪ್ರದೇಶಗಳಲ್ಲಿ ನೀರು ನಿಂತು ತೊಂದರೆ ಅನುಭವಿಸುವಂತಾಯಿತು. ಇಲ್ಲಿನ ಕೊಪ್ಪೀಕರ ರಸ್ತೆ, ದುರ್ಗದಬೈಲ್, ಹಳೇ ಹುಬ್ಬಳ್ಳಿ ಭಾಗ, ಎಪಿಎಂಸಿ ಅಕ್ಕಪಕ್ಕದ ಪ್ರದೇಶಗಳು, ಉಣಕಲ್ಲು ಸೇರಿದಂತೆ ಹಲವು ಭಾಗಗಳಲ್ಲಿ ಚರಂಡಿಗಳು ಬಂದಾಗಿ ನೀರೆಲ್ಲ ರಸ್ತೆಯ ಮೇಲೆ ಹರಿಯಿತು.

ಇನ್ನು ಕೆಲವು ಕಡೆಗಳಲ್ಲಿ ಚರಂಡಿ ನೀರು ಮನೆ, ಅಂಗಡಿ, ಅಪಾರ್ಟ್‌ಮೆಂಟ್‌ಗಳಿಗೆ ನುಗ್ಗಿ ಜನತೆ ರಾತ್ರಿಯಿಡಿ ತೊಂದರೆ ಅನುಭವಿಸುವಂತಾಯಿತು. ಇನ್ನು ಗಂಗಾಧರ ನಗರದ ರತ್ನವ್ವ ಸಂಕನಾಳ ಅವರ ತಗಡಿನ ಮನೆಮೇಲೆ ಮರವೊಂದು ಉರುಳಿ ಬಿದ್ದ ಪರಿಣಾಮ ಮನೆಗೆ ಸ್ವಲ್ಪ ಹಾನಿಯಾಗಿದ್ದು, ಯಾವುದೇ ಜೀವಹಾನಿಯಾಗಿಲ್ಲ.

ಗ್ರಾಮೀಣ ಭಾಗಕ್ಕೆ ಹೋಲಿಸಿದರೆ ನಗರದ ಪ್ರದೇಶದಲ್ಲಿ ಹೆಚ್ಚಿನ ಮಳೆ ಸುರಿದಿರುವ ಕುರಿತು ವರದಿಯಾಗಿದೆ. ಹುಬ್ಬಳ್ಳಿ ನಗರದಲ್ಲಿ 63.5 ಮಿಮೀ ಮಳೆಯಾಗಿದೆ. ಛಬ್ಬಿಯಲ್ಲಿ 11 ಮಿಮೀ, ಶಿರಗುಪ್ಪಿಯಲ್ಲಿ 40.2 ಮಿಮೀ ಹಾಗೂ ಬ್ಯಾಹಟ್ಟಿಯಲ್ಲಿ 34.4 ಮಿಮೀ ಮಳೆಯಾಗಿರುವುದು ದಾಖಲಾಗಿದೆ.

ಭಾನುವಾರ ಸಂಜೆ ಕೂಡಾ ಸ್ವಲ್ಪ ಮಳೆ ಸುರಿಯಿತು. ವಾಹನಗಳು ಸಂಚರಿಸುವ ಮಾರ್ಗಗಳ ಅಕ್ಕಪಕ್ಕ ಗುಂಡಿಗಳಲ್ಲಿ ಮಳೆನೀರು ಸಂಗ್ರಹವಾದ ಹಿನ್ನೆಲೆಯಲ್ಲಿ ವಾಹನಗಳು ನಿಧಾನವಾಗಿ ಸಂಚರಿಸಿದವು. ರಾತ್ರಿ ಮೋಡ ಕವಿದ ವಾತಾವರಣ ಮುಂದುವರಿಯಿತು.ಅಪಾರ್ಟಮೆಂಟ್‌ಗೆ ನುಗ್ಗಿದ ನೀರು:

ಇಲ್ಲಿನ ನ್ಯೂ ಕಾಟನ್ ಮಾರ್ಕೆಟ್ ಪ್ರದೇಶದಲ್ಲಿರುವ ಮುಕೇಶ್ ಆ್ಯಂಡ್‌ ಬ್ರದರ್ಸ್ ಮಾಲೀಕತ್ವದ ಅಪಾರ್ಟ್‌ಮೆಂಟ್‌ ಹಾಗೂ ಮಳಿಗೆಗಳಿಗೆ ಮಳೆನೀರು ನುಗ್ಗಿ ಲಕ್ಷಾಂತರ ಮೌಲ್ಯದ ಔಷಧಿಗಳು ಹಾಳಾದ ಘಟನೆ ನಡೆಯಿತು. ಕಳೆದ ಕೆಲ ದಿನಗಳ ಹಿಂದೆ ಕಿಮ್ಸ್‌ನ ಮೈದಾನದ ತಡೆಗೋಡೆ ಕುಸಿದ ಹಿನ್ನೆಲೆಯಲ್ಲಿ ಈ ಭಾಗದ ಮಳೆ ನೀರೆಲ್ಲ ಈ ಅಪಾರ್ಟ್‌ಮೆಂಟ್‌ಗೆ ನುಗ್ಗಿದ ಹಿನ್ನೆಲೆಯಲ್ಲಿ ಈ ಅವಘಡ ಉಂಟಾಗಿದೆ. ಘಟನೆ ನಡೆಯುತ್ತಿದ್ದಂತೆ ಇಲ್ಲಿನ ನಿವಾಸಿಗಳು ವಾರಾಣಸಿಯ ಪ್ರಸಾದಲ್ಲಿರುವ ಶಾಸಕ ಮಹೇಶ ಟೆಂಗಿನಕಾಯಿ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಕೂಡಲೇ ಶಾಸಕರು ಕಿಮ್ಸ್‌ ನಿರ್ದೇಶಕರಿಗೆ ವಿಷಯ ತಿಳಿಸಿದ್ದಾರೆ.

ನಂತರ ಸ್ಥಳಕ್ಕೆ ಆಗಮಿಸಿದ ನಂತರ ಕಿಮ್ಸ್ ನಿರ್ದೇಶಕ ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆನಂತರ ಸ್ಥಳಕ್ಕೆ ಆಗಮಿಸಿದ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಸ್ಥಳ ಪರಿಶೀಲನೆ ಮಾಡಿ ಸೋಮವಾರ ಬೆಳಗ್ಗೆ ಕಿಮ್ಸ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.