ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಆರ್ಭಟ ಮುಂದುವರಿದಿದ್ದು, ಮಂಗಳವಾರ ರಾಜಧಾನಿ ಬೆಂಗಳೂರು ಸೇರಿ 5 ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಳೆಯಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರುರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಆರ್ಭಟ ಮುಂದುವರಿದಿದ್ದು, ಮಂಗಳವಾರ ರಾಜಧಾನಿ ಬೆಂಗಳೂರು ಸೇರಿ 5 ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಳೆಯಾಗಿದೆ. ಈ ಮಧ್ಯೆ, ಮೈಸೂರು ತಾಲೂಕಿನ ಇಲವಾಲದಲ್ಲಿ ಸಿಡಿಲು ಬಡಿದು, ಮಡಿಕೇರಿ ಮೂಲದ ರೋಶನ್ (38) ಎಂಬುವರು ಮೃತಪಟ್ಟಿದ್ದಾರೆ. ಮೈಸೂರಿನಲ್ಲಿನ ಸಂಬಂಧಿಕರ ಮನೆಗೆ ಬಂದಿದ್ದ ರೋಶನ್, ಇಲವಾಲದಲ್ಲಿ ನಿವೇಶನ ನೋಡಲು ಹೋಗಿದ್ದ ವೇಳೆ ಸಿಡಿಲು ಬಡಿಯಿತು.
ಬೆಂಗಳೂರಿನಲ್ಲಿ ಸಂಜೆಯ ವೇಳೆ ಗುಡುಗು, ಮಿಂಚು ಸಹಿತ ಸುರಿದ ಬಿರುಗಾಳಿ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ನಗರದ ಉತ್ತರ, ಈಶಾನ್ಯ ಮತ್ತು ಕೇಂದ್ರ ಭಾಗಗಳಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಸರಾಸರಿ 20ರಿಂದ 40 ಮಿ.ಮೀ. ಮಳೆಯಾಗಿದೆ. ಮಳೆ ನೀರು ನಿಂತಿದ್ದ ಕಾರಣ ಕೆ.ಆರ್.ಸರ್ಕಲ್ ಅಂಡರ್‌ಪಾಸ್ ನ್ನು ಬಂದ್ ಮಾಡಲಾಗಿತ್ತು. ಹೊರವರ್ತುಲ ರಸ್ತೆ, ಸಿಲ್ಕ್ ಬೋರ್ಡ್, ವೈಟ್‌ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ ಸಿಟಿ ರಸ್ತೆಗಳಲ್ಲಿ ವಾಹನಗಳು ಕಿಲೋ ಮೀಟರ್‌ಗಟ್ಟಲೆ ಟ್ರಾಫಿಕ್‌ನಲ್ಲಿ ಸಿಲುಕಿದ್ದವು. ನಗರದ ಅನೇಕ ಕಡೆ ಮರಗಳು ಮತ್ತು ಕೊಂಬೆಗಳು ಧರೆಗುರುಳಿದ್ದರಿಂದ ಸಂಚಾರಕ್ಕೆ ಅಡ್ಡಿಯಾಯಿತು.ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಂಗಳವಾರ ಮಧ್ಯಾಹ್ನ ಸುಮಾರು 2 ತಾಸು ಬಿಟ್ಟು ಬಿಡದೇ ಭಾರೀ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತ್ತು. ರಸ್ತೆಗಳಲ್ಲಿ ಸುಮಾರು ಮೂರು ಅಡಿಯಷ್ಟು ನೀರು ಹರಿದ ಪರಿಣಾಮ ಕಾರು, ಆಟೋ, ಬೈಕ್ ಸೈಲೆನ್ಸರ್ ಒಳಗೆ ನೀರು ಹೋಗಿ ನೀರಿನ ಮಧ್ಯೆ ಕೆಟ್ಟು ನಿಂತ ದೃಶ್ಯಗಳು ಕಂಡು ಬಂದವು. ಕಲ್ಕೆರೆ ಸೇರಿ ಜಿಲ್ಲೆಯಲ್ಲಿನ ಹಲವು ಸಣ್ಣ-ಪುಟ್ಟ ಕೆರೆಗಳು ಭರ್ತಿಯಾಗಿದ್ದು, ಕೆರೆ ಕೋಡಿ ದೃಶ್ಯವನ್ನು ಜನ ಮೊಬೈಲ್‌ನಲ್ಲಿ ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿ ಖುಷಿ ಪಡುತ್ತಿದ್ದಾರೆ.
ಕೋಲಾರ ಜಿಲ್ಲೆ ಮಾಲೂರಿನಲ್ಲಿ ಸಂಜೆ ಸುಮಾರು ಒಂದೂವರೆ ಗಂಟೆ ಸುರಿದ ಬಿರುಗಾಳಿ ಸಹಿತ ಅಲಿಕಲ್ಲು ಮಳೆಗೆ ಪಟ್ಟಣದ ಹಲವೆಡೆ ಮರಗಳು ಧರೆಗೆ ಉರುಳಿದ್ದು, ಮೂರಕ್ಕೂ ಹೆಚ್ಚು ಕಾರು, ಎರಡು ಆಟೋಗಳು ಜಖಂಗೊಂಡಿವೆ. ಅರಳೇರಿ ರಸ್ತೆ ಬಳಿ ರಸ್ತೆ ಬದಿಯಲ್ಲಿದ್ದ ತರಕಾರಿ ಅಂಗಡಿಯೊಂದು ಕೊಚ್ಚಿಕೊಂಡು ಹೋಗಿದೆ.