ಸಾರಾಂಶ
ಕಾರವಾರ: ಜಿಲ್ಲೆಯನ್ನು ಮಳೆ ಬಿಟ್ಟೂ ಬಿಡದೆ ಕಾಡುತ್ತಿದೆ. ಶನಿವಾರವೂ ಕೆಲವೆಡೆ ಭಾರಿ ಮಳೆಯಾಗಿದೆ. ಲಿಂಗನಮಕ್ಕಿ, ಗೇರುಸೊಪ್ಪ ಜಲಾಶಯದಿಂದ ನೀರನ್ನು ಹೊರಬಿಡುತ್ತಿರುವುದು ಹಾಗೂ ಗುಂಡಬಾಳಾ ನದಿಗೆ ನೆರೆ ಬಂದಿರುವುದರಿಂದ ಶರಾವತಿ ನದಿ ತೀರದುದ್ದಕ್ಕೂ ಪ್ರವಾಹ ಉಂಟಾಗಿದೆ.
ಶರಾವತಿ ನದಿ ತೀರದುದ್ದಕ್ಕೂ ಪ್ರವಾಹ ಭೀತಿ ಎದುರಿಸುತ್ತಿರುವ ಜನರು ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಒಟ್ಟೂ 18 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. 227 ಕುಟುಂಬಗಳ 670 ಸಂತ್ರಸ್ತರು ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.ಕರಾವಳಿ ತಾಲೂಕುಗಳಲ್ಲಿ ಆಗಾಗ ಭಾರಿ ಮಳೆ ಬೀಳುತ್ತಿದೆ. ಅಂಕೋಲಾದ ಕೇಣಿ ಗಾಂವಕರ ವಾಡದಲ್ಲಿ ಮೂರು ದಿನಗಳ ಹಿಂದೆ ಮನೆಗಳು ಜಲಾವೃತವಾಗಿ ಸಂತ್ರಸ್ತರಾದ 46 ಜನರು ಇನ್ನೂ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.
ಕದ್ರಾ ಜಲಾಶಯದಿಂದ ನೀರು ಹೊರಬಿಟ್ಟಿರುವ ಕಾರಣದಿಂದ ಕಾಳಿ ನದಿಯ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ.ಕಾರವಾರ, ಕುಮಟಾ, ಭಟ್ಕಳಗಳಲ್ಲೂ ಆಗಾಗ ಭಾರಿ ಮಳೆ ಸುರಿಯುತ್ತಿದೆ. ಕರಾವಳಿಯುದ್ದಕ್ಕೂ ಪ್ರವಾಹದ ಆತಂಕ ಕಾಡುತ್ತಲೇ ಇದೆ.
ಜಿಲ್ಲೆಯಲ್ಲಿ ಶನಿವಾರ 1 ಮನೆ ಪೂರ್ಣ, 12 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಕಾರವಾರದ 2, ಅಂಕೋಲಾದ 1, ಹೊನ್ನಾವರದ 17 ಮತ್ತು ಕುಮಟಾದ 2 ಸೇರಿದಂತೆ ಒಟ್ಟು 22 ಕಾಳಜಿ ಕೇಂದ್ರಗಳಲ್ಲಿ 734 ಮಂದಿಗೆ ಆಶ್ರಯ ಕಲ್ಪಿಸಲಾಗಿದೆ.
ಅಂಕೋಲಾ-ಕೇಣಿಯ ಗಾಂವಕರ ವಾಡಾ ಸಂಪೂರ್ಣ ಜಲಾವೃತ:
ಅಂಕೋಲಾ ತಾಲೂಕಿನಲ್ಲಿ ಕಳೆದ 3 ವಾರದಿಂದ ನಿರಂತರವಾಗಿ ಸುರಿದ ಭೀಕರ ಮಳೆಗೆ ಕೇಣಿಯ ಗಾಂವಕರ ವಾಡಾ ಸಂಪೂರ್ಣ ಜಲಾವೃತ್ತವಾಗಿದ್ದು, ಅಲ್ಲಿಯ 32 ಮನೆಗಳ ಪೈಕಿ 16 ಮನೆಗಳಿಗೆ ಭಾರಿ ಪ್ರಮಾಣದಲ್ಲಿ ನೀರು ನುಗ್ಗಿ ಹಾನಿಯಾಗಿದೆ. ಒಟ್ಟು 84 ಜನ ಕಳೆದ 4 ದಿನದಿಂದ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.
ಕಳೆದ ಬುಧವಾರ ತಾಲೂಕಿನಲ್ಲಿ ಅಪಾರ ಮಳೆಯಾಗಿದ್ದು, ಮಳೆಯ ತೀವೃತೆಗೆ ಕಸಬಾ ಕೇಣಿಯ ಗಾಂವಕರ ವಾಡಾದ ಜಲಾವೃತ್ತಗೊಳ್ಳಲು ಶುರುವಾಗಿತ್ತು. ರಾತ್ರಿ 1 ಗಂಟೆಯ ಸುಮಾರಿಗೆ ಒಮ್ಮೆಲೇ ನೀರಿನ ಮಟ್ಟ ಜಾಸ್ತಿಯಾಗಿದೆ.
ವಿಷಯ ತಿಳಿದ ಅಗ್ನಿಶಾಮಕ ದಳವು ಆಗಮಿಸಿ ಕಾರ್ಯಾಚರಣೆ ನಡೆಸಿದೆ. ಮನೆಯ ಒಳಗೆ 6 ಅಡಿಗಳಷ್ಟು ನೀರು ತುಂಬಿದ್ದು, ಇದರಿಂದಾಗಿ ಮನೆಯಲ್ಲಿದ್ದ ಪೀಠೋಪಕರಣಗಳು, ಆಹಾರ ಹಾಗೂ ಇತರ ವಸ್ತುಗಳು ಸಂಪೂರ್ಣ ಹಾಳಾಗಿದೆ.
ನೀರಿನಲ್ಲಿ ಕೊಚ್ಚಿ ಎಮ್ಮೆ, ಕರು: ಯಾದು ಗಾಂವಕರ ಅವರ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿದ್ದ ತುಂಬು ಗರ್ಭಿಣಿ ಎಮ್ಮೆ ಹಾಗೂ ಕರು ತೇಲಿ ಹೋಗಿದ್ದು, ಮೃತಪಟ್ಟಿದೆ. ಪರಿಹಾರಕ್ಕಾಗಿ ತಹಸೀಲ್ದಾರರಲ್ಲಿ ವಿನಂತಿಸಿದಾಗ ಅದರ ಕಳೆಬರ ಸಿಗದೇ ಪರಿಹಾರಕ್ಕೆ ಸುತ್ತೋಲೆಯಲ್ಲಿ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಕೆಸರಿನಿಂದ ದುರ್ನಾತ: ಮಳೆಯ ತೀವ್ರತೆಗೆ ಚರಂಡಿಯ ಒಳಗಿನ ಕೊಳಚೆ ನೀರು ಮೇಲೆ ಬಂದು ಮನೆಗೆ ನುಗ್ಗಿದ್ದರಿಂದ ಮನೆಯ ಒಳಗೆ ಒಂದು ಅಡಿಯಷ್ಟು ಕೆಸರು ತುಂಬಿಕೊಂಡಿದ್ದು, ದುರ್ನಾತ ಹೊಡೆಯುತ್ತಿದೆ. ಕೆಸರನ್ನು ಹೊರ ತೆಗೆಯಲು ಮನೆಯವರು ಹರಸಹಾಸ ಪಡುತ್ತಿದ್ದಾರೆ.
ಸಲಕರಣೆ ಹೊತ್ತು ಅರ್ಧ ಕಿಮೀ ಸಾಗಿದ ಅಗ್ನಿಶಾಮಕ ತಂಡ: ನೀರು ತುಂಬಿರುವ ಜಾಗಕ್ಕೆ ಕಿರಿದಾದ ರಸ್ತೆ ಇದ್ದು ದೊಡ್ಡ ವಾಹನ ಓಡಾಡುವಷ್ಟು ಅಗಲವಿಲ್ಲ. ಹಾಗಾಗಿ ಅಗ್ನಿಶಾಮಕ ವಾಹನ ಘಟನಾ ಸ್ಥಳದ ವರೆಗೂ ಹೋಗಲು ಸಾಧ್ಯವಾಗದ ಕಾರಣಕ್ಕೆ ಸಿಬ್ಬಂದಿ ತಮ್ಮ ರಕ್ಷಣಾ ಸಲಕರಣೆ ಹಾಗೂ ಭಾರಿ ತೂಕದ ಹಗ್ಗ ಹೊತ್ತು ಅರ್ಧ ಕಿಮೀ ವರೆಗೆ ನಡೆದುಕೊಂಡೆ ಹೋಗಿ ಕಾರ್ಯಾಚರಣೆ ನಡೆಸಿದ್ದಾರೆ.
ತಹಸೀಲ್ದಾರ್ ಅನಂತ ಶಂಕರ ಹಾಗೂ ಪುರಸಭೆಯ ಮುಖ್ಯಾಧಿಕಾರಿ ಎಚ್. ಅಕ್ಷತಾ ಅವರು ಸಂತ್ರಸ್ತರು ಇರುವ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಿಎಚ್‌ಒ ಸಮೀರಾ ನಾಯ್ಕ, ಪಿಸಿಎಚ್ಓ ವೈಶಾಲಿ ಸೈಲ್, ಡಾ. ಪರ್ಹತ್ ಸೈಯ್ಯದ್, ಪುರಸಭೆ ಸದಸ್ಯೆ ಶೀಲಾ ಶೆಟ್ಟಿ, ಕೇಶವ ಸೇರಿದಂತೆ ಹಲವರು ಸಂತ್ರಸ್ತರ ಸಹಕಾರಕ್ಕೆ ಸಂಪೂರ್ಣ ಸಹಕಾರ ನೀಡಿದ್ದಾರೆ.