ಭಾರಿ ಮಳೆ, ಹಿರೇಹಳ್ಳದ ಪ್ರವಾಹಕ್ಕೆ ಕೊಚ್ಚಿಹೋದ ಬೆಳೆ

| Published : Oct 13 2024, 01:02 AM IST

ಸಾರಾಂಶ

ಕಳೆದೆರಡು ರಾತ್ರಿ ಸುರಿದ ಧಾರಾಕಾರ ಮಳೆ ಅಪಾರ ಹಾನಿಯನ್ನುಂಟು ಮಾಡಿದೆ. ಅದರಲ್ಲೂ ಶುಕ್ರವಾರ ತಡರಾತ್ರಿ ಮತ್ತು ಶನಿವಾರ ಬೆಳಗಿನ ಜಾವ ಸುರಿದ ಭಾರಿ ಮಳೆಯಿಂದಾಗಿ ಹಿರೇಹಳ್ಳ ಭರ್ತಿಯಾಗಿ ಹಳ್ಳಕ್ಕೆ ನೀರು ಬಿಡುಗಡೆ ಮಾಡಿದ್ದರಿಂದ ಪ್ರವಾಹ ಸೃಷ್ಟಿಯಾಗಿ ರೈತರ ಕೋಟ್ಯಂತರ ರುಪಾಯಿ ಬೆಳೆ ಕೊಚ್ಚಿ ಹೋಗಿದೆ.

- ಶುಕ್ರವಾರ ಮಧ್ಯ ರಾತ್ರಿಯಿಂದ ಸುರಿದ ಮಳೆ

- ಹಿರೇಸಿಂದೋಗಿ ರಸ್ತೆ ಮಾರ್ಗ ಸಂಪೂರ್ಣ ಬಂದ್

- ಹಿರೇಹಳ್ಳದುದ್ದಕ್ಕೂ ಎರಡು ಬದಿಯಲ್ಲಿ ಹೊಲಗಳಿಗೆ ನುಗ್ಗಿದ ನೀರು

- ಜೆಸಿಬಿ ಆಪರೇಟರ್ ಪ್ರಾಣಾಪಾಯದಿಂದ ಪಾರುಕನ್ನಡಪ್ರಭ ವಾರ್ತೆ ಕೊಪ್ಪಳ

ಕಳೆದೆರಡು ರಾತ್ರಿ ಸುರಿದ ಧಾರಾಕಾರ ಮಳೆ ಅಪಾರ ಹಾನಿಯನ್ನುಂಟು ಮಾಡಿದೆ. ಅದರಲ್ಲೂ ಶುಕ್ರವಾರ ತಡರಾತ್ರಿ ಮತ್ತು ಶನಿವಾರ ಬೆಳಗಿನ ಜಾವ ಸುರಿದ ಭಾರಿ ಮಳೆಯಿಂದಾಗಿ ಹಿರೇಹಳ್ಳ ಭರ್ತಿಯಾಗಿ ಹಳ್ಳಕ್ಕೆ ನೀರು ಬಿಡುಗಡೆ ಮಾಡಿದ್ದರಿಂದ ಪ್ರವಾಹ ಸೃಷ್ಟಿಯಾಗಿ ರೈತರ ಕೋಟ್ಯಂತರ ರುಪಾಯಿ ಬೆಳೆ ಕೊಚ್ಚಿ ಹೋಗಿದೆ.

ಹೌದು, ಹಿರೇಹಳ್ಳ ಕಳೆದ ನಾಲ್ಕು ವರ್ಷಗಳ ನಂತರ ಮತ್ತೆ ಅಬ್ಬರಿಸಿದೆ. ಕಿನ್ನಾಳ ಗ್ರಾಮದ ಬಳಿ ಇರುವ ಹಿರೇಹಳ್ಳ ಜಲಾಶಯಕ್ಕೆ ಶುಕ್ರವಾರ ತಡರಾತ್ರಿ ಮಿತಿಮೀರಿ ನೀರು ಹರಿದು ಬಂದಿದೆ. ಹೀಗಾಗಿ ಕೇವಲ ನಾಲ್ಕಾರು ಗಂಟೆಯಲ್ಲಿ ಜಲಾಶಯ ಭರ್ತಿಯಾಗಿದ್ದರಿಂದ ಜಲಾಶಯದಿಂದ ಬರೋಬ್ಬರಿ 18886 ಕ್ಯುಸೆಕ್ ನೀರು ಹಳ್ಳಕ್ಕೆ ಬಿಡಲಾಗಿದೆ. ಜಲಾಶಯ ಸಾಮರ್ಥ್ಯ ಇರುವುದೇ ಕೇವಲ 1.67 ಟಿಎಂಸಿ ಮಾತ್ರ. ಅದು ಮುಂಗಾರು ಮಳೆಗೆ ಭರ್ತಿಯಾಗಿತ್ತು. ಆದರೆ, ಶುಕ್ರವಾರ ಅತೀಯಾದ ಮಳೆಯಿಂದಾಗಿ ಜಲಾಶಯಕ್ಕೆ ದೊಡ್ಡ ಪ್ರಮಾಣದ ನೀರು ಹರಿದುಬಂದಿದ್ದರಿಂದ ರಾತ್ರೋರಾತ್ರಿ ನೀರು ಬಿಡುಗಡೆ ಮಾಡಲಾಗಿದೆ.

ಹಿರೇಹಳ್ಳ ಜಲಾಶಯದಿಂದ ನೀರು ಬಿಡುಗಡೆ ಮಾಡಿದ್ದು ಮತ್ತು ವಿಪರೀತ ಮಳೆಯಾಗಿದ್ದರಿಂದ ವಿವಿಧೆಡೆಯಿಂದ ಹರಿದುಬಂದ ನೀರು ಹಿರೇಹಳ್ಳದಲ್ಲಿ ಕೊಪ್ಪಳ ತಾಲೂಕಿನುದ್ದಕ್ಕೂ ಪ್ರವಾವ ಸೃಷ್ಟಿಯಾಗುವಂತೆ ಆಯಿತು.

ಮಾದಿನೂರು ಗ್ರಾಮದಿಂದ ಹಿಡಿದು, ಕೋಳೂರು, ಕಾಟ್ರಳ್ಳಿ, ಚಿಕ್ಕಸಿಂದೋಗಿ, ಬೂದಿಹಾಳ, ಡೊಂಬರಳ್ಳಿ ಗ್ರಾಮದವರೆಗೂ ಹಿರೇಹಳ್ಳದ ಎರಡು ಬದಿಯಲ್ಲಿ ಪ್ರವಾಹ ಸೃಷ್ಟಿಯಾಗಿ ಬರೋಬ್ಬರಿ ಹಾನಿಯಾಗುವಂತೆ ಮಾಡಿದೆ.

ರೈತರು ಬಿತ್ತನೆ ಮಾಡಿದ್ದ ಮೆಕ್ಕೆಜೋಳ, ಮೆಣಿಸಿನಕಾಯಿ, ಈರುಳ್ಳಿ ಬೆಳೆ ಕಟಾವಿಗೆ ಬಂದಿದ್ದರು ಪ್ರವಾಹದ ರಭಸಕ್ಕೆ ಕೊಚ್ಚಿಕೊಂಡು ಹೋಗಿದೆ. ಹೀಗಾಗಿ, ಹಿರೇಹಳ್ಳದುದ್ದಕ್ಕೂ ರೈತರ ಪಾಡು ದೇವರಿಗೆ ಪ್ರೀತಿ ಎನ್ನುವಂತೆ ಆಗಿದೆ.

ಹಿರೇಹಳ್ಳದುದ್ದಕ್ಕೂ ನಿರ್ಮಾಣ ಮಾಡಲಾಗಿರುವ ಬ್ಯಾರೇಜ್ ಸಹ ಭರ್ತಿಯಾಗಿದ್ದು, ಅವುಗಳಿಗೆ ಗೇಟ್ ಇಲ್ಲದಿರುವುದರಿಂದ ನೀರು ಅನಾಯಾಸವಾಗಿ ಹರಿದು ಹೋಯಿತು. ಹೀಗೆ ಹರಿದು ಹೋಗುವಾಗ ಅಕ್ಕಪಕ್ಕದ ಹೊಲಗಳಿಗೆ ನುಗ್ಗಿ ಅಪಾರ ಹಾನಿ ಮಾಡಿದೆ.

ಕೋಳೂರು ರಸ್ತೆಯಲ್ಲಿಯೂ ಅಲ್ಲಲ್ಲಿ ಇರುವ ಸಣ್ಣಪುಟ್ಟ ಹಳ್ಳಗಳು ತುಂಬಿ ಹರಿದಿದ್ದರಿಂದ ಮಾರ್ಗವೇ ಬಂದ್ ಆಗಿತ್ತು. ರೈತರು ತಮ್ಮ ಉತ್ಪನ್ನಗಳನ್ನು ಬೆಳಗ್ಗೆ ಕೊಪ್ಪಳಕ್ಕೆ ತರುವುದಕ್ಕೆ ಸಮಸ್ಯೆಯಾಯಿತು. ಕೆಲವರು ಅದರಲ್ಲಿಯೇ ದಾಟುವ ಪ್ರಯತ್ನ ಮಾಡಿದರು.ಬಂದಾದ ಚನ್ನಳ್ಳ:

ತಾಲೂಕಿನ ಹಿರೇಸಿಂದೋಗಿ ಗ್ರಾಮದ ಬಳಿ ಇರುವ ಚನ್ನಳ್ಳ ತುಂಬಿ ಹರಿದಿದೆ. ಸೇತುವೆ ಮೇಲೆ ನೀರು ಹರಿಯುತ್ತಿದ್ದರಿಂದ ಕಲ್ಮಲ, ಸಿಗ್ಗಾಂ ರಾಜ್ಯ ಹೆದ್ದಾರಿ ನಾಲ್ಕಾರು ಗಂಟೆಗಳ ಕಾಲ ಬಂದ್ ಆಗಿದ್ದು, ತೀವ್ರ ಸಮಸ್ಯೆಯಾಯಿತು. ಹೀಗಾಗಿ, ರಸ್ತೆ ಮಾರ್ಗ ಬದಲಾಯಿಸಿಕೊಂಡು ಕೊಪ್ಪಳದಿಂದ ಹಲಿಗೇರಿ ಮಾರ್ಗವಾಗಿ ಸಂಚಾರ ಮಾಡಲಾಯಿತು.ಕೊಚ್ಚಿಹೋಗಿದ್ದ ಯುವಕನ ರಕ್ಷಣೆ:

ಕೊಪ್ಪಳ ತಾಲೂಕಿನ ಗೊಂಡಬಾಳ ಗ್ರಾಮದ ಬಳಿ ಹಿರೇಹಳ್ಳದಲ್ಲಿ ಮರಳು ಹೇರಲು ಜೆಸಿಬಿ ಆಪರೇಟ್ ಮಾಡುತ್ತಿದ್ದ ಯುವಕ ಏಕಾಏಕಿ ಹಳ್ಳಬಂದಿದ್ದರಿಂದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ, ಮುಳ್ಳುಕಂಟಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ, ಹಾವೇರಿ ಮೂಲದ ಈ ಯುವಕನನ್ನು ಅಗ್ನಿಶಾಮಕ ದಳದವರು ರಕ್ಷಣೆ ಮಾಡಿದ್ದಾರೆ.ಅಳವಂಡಿ ಹಳ್ಳದಲ್ಲಿಯೂ ಪ್ರವಾಹ:

ಅಳವಂಡಿ ಗ್ರಾಮದ ಬಳಿ ಇರುವ ಹಿರೇಹಳ್ಳದಲ್ಲಿಯೂ ಪ್ರವಾಹದಂತೆ ನೀರು ಉಕ್ಕಿ ಹರಿದಿದೆ. ಹಳ್ಳದಲ್ಲಿ ಬೆಳೆದಿದ್ದ ಮುಳ್ಳುಕಂಟಿಯನ್ನು ಸ್ವಚ್ಛ ಮಾಡದೆ ಇರುವುದರಿಂದ ನೀರು ಅಕ್ಕಪಕ್ಕದ ಹೊಲಗಳಿಗೆ ನುಗ್ಗಿ, ಅಪಾರ ಹಾನಿ ಮಾಡಿದೆ.ಕೋಟ್ಯಂತರ ರುಪಾಯಿ ಬೆಳೆ ಹಾನಿ:

ಜಿಲ್ಲಾದ್ಯಂತ ಕಳೆದೆರಡು ದಿನಗಳಿಂದ ಸುರಿಯುತ್ತಿದ್ದ ಮಳೆಯಿಂದ ಕೋಟ್ಯಂತರ ರುಪಾಯಿ ಬೆಳೆ ಹಾನಿಯಾಗಿದೆ. ಕಟಾವಿಗೆ ಬಂದಿದ್ದ ಮೆಕ್ಕೆಜೋಳಕ್ಕೆ ನೆಲಕ್ಕೆ ಬಿದ್ದಿದ್ದರೇ ಬತ್ತವೂ ಉರುಳಿ ಬಿದ್ದಿದೆ. ಈರುಳ್ಳಿ, ಮೆಣಸಿನಗಿಡ ನೀರು ಪಾಲಾಗಿವೆ.

ಇನ್ನು ಹುಲಿಗಿ–ಆನೆಗೊಂದಿ ರಸ್ತೆಯೂ ಬಂದ್ ಆಗಿತ್ತು. ಹಳ್ಳ ತುಂಬಿ ಹರಿಯುತ್ತಿದ್ದರಿಂದ ದೇವಸ್ಥಾನಕ್ಕೆ ಬಂದಿದ್ದ ಭಕ್ತರು ಹರಸಾಹಸ ಮಾಡಿ ದಾಟಿದರು.ಶಾಶ್ವತ ಪರಿಹಾರಕ್ಕೆ ಆಗ್ರಹ:

ಹಿರೇಹಳ್ಳದುದ್ದಕ್ಕೂ ಆಗಾಗ ಪ್ರವಾಹ ಬಂದು ಹಿರೇಹಳ್ಳದ ದಡದಲ್ಲಿರುವ ಹೊಲಗಳಿಗೆ ಪ್ರತಿ ವರ್ಷವೂ ಹಾನಿಯಾಗುತ್ತಿದೆ. ಹೀಗಾಗಿ, ಕೂಡಲೇ ಪರಿಹಾರ ನೀಡಬೇಕು ಮತ್ತು ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.