ಜೋಯಿಡಾ ತಾಲೂಕಿನ ತೋಟದಲ್ಲೆಲ್ಲ ರೋಗಗಳ ಸಂತೆ

| Published : Oct 13 2024, 01:09 AM IST

ಸಾರಾಂಶ

ಉತ್ತರ ಕನ್ನಡ ಜೋಯಿಡಾ ತಾಲೂಕಿನಲ್ಲಿ ಅತಿಯಾದ ಮಳೆಯಿಂದ ಬೆಳೆಗಳು ಹಾನಿಗೀಡಾಗುತ್ತಿವೆ. ಅಡಕೆಗೆ ಕೊಳೆರೋಗ ಬಂದರೆ ಕಾಳುಮೆಣಸು ರೋಗದಿಂದ ನಾಶವಾಗುತ್ತಿದೆ. ಮಳೆ ಬಂತೆಂದರೆ ಖುಷಿ ಪಡುವ ಜನ ಮಳೆ ಬಂತೆಂದರೆ ಬೆಚ್ಚಿ ಬೀಳುವಂತಾಗಿದೆ.

ಜೋಯಿಡಾ: ತಾಲೂಕಿನ ಅಡಕೆ ತೋಟದಲ್ಲಿ ಬೆಳೆಯುವ ಕಾಳುಮೆಣಸು ರೋಗದಿಂದ ನಾಶವಾಗುತ್ತಿದೆ.

ತಾಲೂಕಿನಲ್ಲಿ ಈ ವರ್ಷದ ಮಳೆ ಇಳೆಗೆ ತಂಪು ನೀಡಿದರೂ ರೈತರ ಬೆಳೆಗಳಿಗೆ ಮಾತ್ರ ಕೊಳೆ, ಕೊಳೆ, ಕೊಳೆ ಎಂಬ ಸ್ಥಿತಿಯಾಗಿದೆ. ಎಲ್ಲಿ ನೋಡಿದರೂ ತೋಟಿಗರ ಮುಖದಲ್ಲಿ ಮಂದಹಾಸವಿಲ್ಲ. ಮಳೆ ಬಂತೆಂದರೆ ಖುಷಿ ಪಡುವ ಜನ ಮಳೆ ಬಂತೆಂದರೆ ಬೆಚ್ಚಿ ಬೀಳುವಂತಾಗಿದೆ.

ಅಡಕೆಗೆ ಕೊಳೆ ರೋಗ ಬಂದು ರೈತರು ಕಂಗಾಲಾಗಿದ್ದಾರೆ. ಜತೆಗೆ ಬಾಳೆಗೂ ಹುಳುವಿನ ಕಾಟದಿಂದ ಬಾಳೆ ತೋಟವೇ ನಾಶವಾಗುತ್ತಿದೆ. ಅಡಕೆ ಕೊಳೆಯ ಜತೆಗೆ ಬಾಳೆ ತೋಟಕ್ಕೆ ಎಲೆ ತಿನ್ನುವ ಹುಳುಗಳ ಕಾಟ ನೋಡಿ ರೈತರೊಬ್ಬರು ತಮ್ಮ ಅರ್ಧ ಎಕರೆ ಬಾಳೆ ತೋಟವನ್ನೇ ಕಡಿದು ಹಾಕಿದರು.

ಅಡಕೆ ಜತೆ ಕಾಳು ಮೆಣಸಿಗೂ ಸೊರಗು ರೋಗ ಬಂದಿದೆ. ಈ ರೋಗದ ಪರಿಣಾಮ ಎಳೆಯ ಕಾಳುಮೆಣಸಿನ ಕರೆಗಳೆಲ್ಲ ಬಿದ್ದು ಎಲೆಗಳೆಲ್ಲ ಬಾಡಿ ಬಳ್ಳಿ ನಾಶವಾಗುತ್ತಿದೆ. 4 ವರ್ಷ ಆರೈಕೆ ಮಾಡಿದ ಮೇಲೆ ಕಾಳು ಕಟ್ಟುವ ಹಂತದಲ್ಲಿ ಬಳ್ಳಿಗಳು ಸಾಯುತ್ತಿದ್ದರೆ, ಮುಂದೇನು? ಎಂಬ ಚಿಂತೆ ರೈತರಿಗಾಗಿದೆ. ಮಧುಕರ ದೇಸಾಯಿ ಅವರ ಅರ್ಧ ಎಕರೆ ತೋಟದ ಅಡಕೆ , ಕಾಳುಮೆಣಸಿನ ಗಿಡಗಳೆಲ್ಲ ಬಾಡಿಹೋಗಿ , ಕೆಲವೇ ದಿನಗಳಲ್ಲಿ ಅಡಕೆ ಗಿಡಗಳೆಲ್ಲ ಬೀಳುವ ಹಂತಕ್ಕೆ ಬಂದಿದೆ. ಇದು ಅತಿಯಾದ ಮಳೆಯಿಂದ ಆದ ಹಾನಿ. ತಾಲೂಕಿನ ಎಲ್ಲ ರೈತರ ತೋಟದಲ್ಲಿ ಅಡಕೆ ಗಿಡ, ಕಾಳುಮೆಣಸಿನ ಬಳ್ಳಿಗಳು ಕೆಂಪಾಗುತ್ತಿರುವುದು ರೈತರಲ್ಲಿ ಆತಂಕ ತಂದಿದೆ. ನಮಗೆ ಈ ವರ್ಷದ ಬೆಳೆ ಹೋದಾಗ ಸಾಕಷ್ಟು ದುಃಖ ಪಡುತ್ತೇವೆ. ಆದರೆ ಅಡಕೆ ಮರಗಳೇ ಸಾಯುತ್ತಿದ್ದು, ಮುಂದೇನು ಎಂಬ ಚಿಂತೆ ಕಾಡಿದೆ ಎಂದು ಕೇದಾಳಿ ಗ್ರಾಮದ ರೈತ ಅನಂತ ಭಟ್ಟ ಹೇಳುತ್ತಾರೆ.