ಸಾರಾಂಶ
- ವಾರದ ಸಂತೆ ಸಂಪೂರ್ಣ ಅಸ್ತ್ಯವ್ಯಸ್ತ । ತರಕಾರಿ, ಕಾಳುಗಳ ರಕ್ಷಿಸಲು ಹರಸಾಹಸ
- - -ಕನ್ನಡಪ್ರಭ ವಾರ್ತೆ ಹರಿಹರ ನಗರ ಸೇರಿದಂತೆ ತಾಲೂಕಿನ ವಿವಿಧೆಡೆ ಮಂಗಳವಾರ ಮಧ್ಯಾಹ್ನ ಭಾರಿ ಮಳೆ ಸುರಿಯುವ ಮೂಲಕ ಧರಣಿಗೆ ತಂಪು ನೀಡಿತು. ನಗರದಲ್ಲಿ ಬೆಳಗಿನಿಂದ ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ನ 12.10ರಿಂದ ಇದ್ದಕ್ಕಿದಂತೆ ಜೋರು ಮಳೆ ಪ್ರಾರಂಭವಾಗಿ 1.40 ರವರೆಗೆ ಸುರಿಯಿತು.
ನಿರಂತರ ಒಂದೂವರೆ ಗಂಟೆ ಕಾಲ ಸುರಿದ ಮಳೆಯಿಂದಾಗಿ ನಗರದಲ್ಲಿ ವಾರದ ಸಂತೆ ಸಂಪೂರ್ಣ ಅಸ್ತ್ಯವ್ಯಸ್ತ ಆಯಿತು. ತರಕಾರಿ, ಕಾಳುಗಳನ್ನು ರೈತರು ಸಂರಕ್ಷಿಸಲು ಹರಸಾಹಸ ಪಡಬೇಕಾಯಿತು. ತರಕಾರಿ ತರಲು ಆಗಮಿಸಿದ್ದ ಸಂತೆಗೆ ಬಂದಿದ್ದ ಜನತೆ ಅಂಗಡಿ ಮುಂಗ್ಗಟ್ಟುಗಳಲ್ಲಿ ಆಶ್ರಯ ಪಡೆದರು. ಅನೇಕರು ಮನೆಗೆ ತೆರಳುವ ಧಾವಂತದಲ್ಲಿ ಆಟೋಗಳ ಮೊರೆಹೋದ ಕಾರಣ ಆಟೋಗಳಿಗೆ ಭರ್ಜರಿ ಡಿಮ್ಯಾಂಡ್ ಕಂಡುಬಂತು.ನಗರದ ವಿವಿಧ ರಸ್ತೆಗಳ ಮೇಲೆಲ್ಲ ರಭಸವಾಗಿ ನೀರು ಹರಿಯಿತು. ರಸ್ತೆಗಳು ಹಾಗೂ ಚರಂಡಿಗಳು ಸಂಪೂರ್ಣ ಸ್ವಚ್ಛವಾದವು. ಮಳೆಯ ಕಾರುಬಾರಿಗೆ ಬಹುತೇಕ ಜನತೆ ರಸ್ತೆಗೆ ಇಳಿಯಲಿಲ್ಲ. ಅಲ್ಲೊಬ್ಬರು ಇಲ್ಲೊಬ್ಬರು ಛತ್ರಿಗಳ ಹಿಡಿದು ಸಂಚರಿಸುತ್ತಿದ್ದರು.
ಮೇ 8ರಂದು ಮಳೆಯಾಗಿದ್ದು ಹೊರತುಪಡಿಸಿದರೆ, ನಂತರ ಅಂಥ ದೊಡ್ಡ ಮಳೆ ಆಗಿರಲಿಲ್ಲ. ಮಂಗಳವಾರ ಸುರಿದ ಮಳೆ ಹಾಗೂ ಮೋಡ ಕವಿದ ವಾತಾವರಣ ಮಲೆನಾಡು ಪರಿಸರ ನೆನಪಿಸಿತ್ತು. ನಗರಾದ್ಯಂತ ಆಹ್ಲಾದಕರ ವಾತಾವರಣ ಉಂಟಾಗಿತ್ತು.ತಾಲೂಕಿನಲ್ಲಿ ಅತಿ ಹೆಚ್ಚು ಭತ್ತ ಹಾಗೂ ಮೆಕ್ಕೆಜೋಳ ಬೆಳೆಯುವ ರೈತರಿಗೆ ಭೂಮಿ ಉಳುಮೆ ಮಾಡಲು ಈ ಮಳೆ ಗ್ರೀನ್ ಸಿಗ್ನಲ್ ನೀಡಿದಂತಿತ್ತು. ಅಡಕೆ ಬೆಳೆಗೆ ಮಳೆ ಸಂಜೀವಿನಿಯಂತೆ ಪರಿಣಮಿಸಿದೆ. ತಾಲೂಕಿನಾದ್ಯಂತ ಬಿರು ಬೇಸಿಗೆಗೆ ಕೆಲ ಬೋರ್‌ವೆಲ್‍ಗಳು ಬತ್ತಿದ್ದು, ಕೆಲ ದಿನಗಳ ಕಾಲ ಇಂಥ ಮಳೆ ಆದಲ್ಲಿ ಬೋರ್‌ಗಳಲ್ಲಿ ನೀರು ಪುನಃ ಲಭಿಸುವ ಆಶಾಭಾವನೆ ರೈತರಲ್ಲಿದೆ.
- - --20ಎಚ್‍ಆರ್‍ಆರ್04:
ಹರಿಹರದಲ್ಲಿ ಮಂಗಳವಾರ ಮಧ್ಯಾಹ್ನ ಒಂದೂವರೆ ಗಂಟೆ ಕಾಲ ಭಾರಿ ಮಳೆ ಸುರಿದ ಪರಿಣಾಮ ರಸ್ತೆಗಳಲ್ಲಿ ಜನ-ವಾಹನಗಳ ಸಂಚಾರ ಕ್ಷೀಣವಾಗಿತ್ತು.