ಅತಿವೃಷ್ಟಿ: ಪರಿಹಾರದ ಭರವಸೆ ನೀಡದ ಸರ್ಕಾರ

| Published : Sep 04 2025, 01:00 AM IST

ಸಾರಾಂಶ

ಈ ಬಾರಿ ಆಗಸ್ಟ್‌ ತಿಂಗಳಲ್ಲಿನ ವರುಣಾರ್ಭಟಕ್ಕೆ ತೊಗರಿ ಕಣಜದ ರೈತರು ಚಿಂತಾಕ್ರಾಂತರಾಗಿದ್ದಾರೆ. ಧಾರಾಕಾರ ಮಳೆಗೆ ಜಿಲ್ಲಾದ್ಯಂತ ಭಾರಿ ಪ್ರಮಾಣದಲ್ಲಿ ಬೆಳೆಹಾನಿ ಸಂಭವಿಸಿದ್ದರಿಂದ ಅನ್ನದಾತರು ಕಣ್ಣೀರು ಹಾಕುವಂತಾಗಿದೆ.

ಶೇಷಮೂರ್ತಿ ಅವಧಾನಿ

ಕನ್ನಡಪ್ರಭ ವಾರ್ತೆ ಕಲಬುರಗಿ

ಈ ಬಾರಿ ಆಗಸ್ಟ್‌ ತಿಂಗಳಲ್ಲಿನ ವರುಣಾರ್ಭಟಕ್ಕೆ ತೊಗರಿ ಕಣಜದ ರೈತರು ಚಿಂತಾಕ್ರಾಂತರಾಗಿದ್ದಾರೆ. ಧಾರಾಕಾರ ಮಳೆಗೆ ಜಿಲ್ಲಾದ್ಯಂತ ಭಾರಿ ಪ್ರಮಾಣದಲ್ಲಿ ಬೆಳೆಹಾನಿ ಸಂಭವಿಸಿದ್ದರಿಂದ ಅನ್ನದಾತರು ಕಣ್ಣೀರು ಹಾಕುವಂತಾಗಿದೆ.

ಅನೇಕ ರೈತರು ಹೊಲದ ಮೇಲೆ, ಬೆಳೆ ಮೇಲಿನ ಸಾಲ-ಸೋಲಕ್ಕೆ ಬೆದರಿ, ಸಂಸಾರ ಬಂಡಿ ಎಳೆಯೋದು ಹೇಗೆಂಬ ಚಿಂತೆಯಲ್ಲಿ ಸಾವಿನ ಮನೆ ದಾರಿ ಹಿಡಿಯುತ್ತಿದ್ದಾರೆ. ಬಿತ್ತನೆಯಾದ 6ಲಕ್ಷ ಹೆಕ್ಟರ್‌ ತೊಗರಿ ಪೈತಿ ಶೇ.60ರಷ್ಟು ಹಾನಿಯಾಗಿದೆ. ಹೆಸರು, ಉದ್ದು, ಸೂರ್ಯಕಾಂತಿಯೂ ನೀರುಪಾಲು.

ಬಿತ್ತಿದ ಫಸಲು ಮಳೆಗಾಹುತಿಯಾಗಿ ಅದಾಗಲೇ ಫರತಾಬಾದ್‌ ಹೋಳಿಯ ಕವಲಬಾ (ಬಿ) ಹಣಮಂತ, ಆಳಂದದ ಸೀಡ್ಸ್‌ ಫಾರಂ ತಾಂಡಾ ಸುರೇಶ ರಾಮು ಚವ್ಹಾಣ (35) ರೈತರಿಬ್ಬರು ನೇಣಿಗೆ ಕೊರಳೊಡ್ಡಿದ್ದಾರೆ. ಈ ರೈತರ ಸಾವಿನ ಪ್ರಕರಣದಿಂದಾಗಿ ಜಿಲ್ಲೆಯ ಕೃಷಿ ವಲಯದ ಮೇಲೆ ಸೂತಕದ ಕರಿನೆರಳು ಮೂಡುವಂತೆ ಮಾಡಿದೆ.

ಸಾವಿನ ದಾರಿ: ನೇಣಿಗೆ ಶರಣಾದ ನತದೃಷ್ಟ ರೈತರಿಬ್ಬರೂ ಲಕ್ಷಾಂತರ ಮೊತ್ತದ ಸಾಲದ ಹೊರೆ ಹೊತ್ತವರು. ಮಳೆಗೆ ತಮಗಿರೋ ಮೂರು, ನಾಲ್ಕು ಎಕರೆಯಲ್ಲಿನ ತೊಗರಿ, ಹೆಸರು, ಉದ್ದು ಹಾಳಾಗಿದ್ದನ್ನು ಕಂಡು ಹೌಹಾರಿ ಸಾವಿನ ಮನೆ ಸೇರಿದ್ದರೆಂದು ಊರವರೇ ಹೇಳುತ್ತಿದ್ದಾರೆ.

ಕವಲಗಾದ ಹಣಮಂತ ಹೊಲದಲ್ಲಿನ ಬಾವಿಯ ದಿಂಡಿಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದ ದೃಶ್ಯ ಭೀಕರವಾಗಿತ್ತು. ಈ ಘಟನೆ ಮಾಸುವ ಮುನ್ನ ಆಳಂದದ ಸೀಡ್ಸ್‌ ಫಾರ್ಮ್‌ನ ರೈತನ ಸಾವು ಸಂಭವಿಸಿದೆ.

ರೈತರ ಕಣ್ಣೀರು: ಅತಿವೃಷ್ಟಿಯಂತಹ ಸವಾಲನ್ನ ಪ್ರಕೃತಿಯೇ ತಂದೊಡ್ಡಿರುವಾಗ ಸರ್ಕಾರ ರೈತರ ಕೈ ಹಿಡಿಯುವುದೆ? ಹಾನಿಯಿಂದಾಗಿ ಹೌಹಾರಿರುವ ರೈತರ ಜೇಬಿಗೆ ಪರಿಹಾರದ ಪುಡಿಗಾಸು ಸೇರುವುದೆ? ಎಂಬ ಪ್ರಶ್ನೆಗಳಿಗೆ ಸರ್ಕಾರ, ಸಚಿವರಿಗೆ ಸ್ಪಷ್ಟ ಉತ್ತರಗಳಿಲ್ಲ.

ಬೆಂಗಳೂರಲ್ಲಿ ಜಿಲ್ಲೆಯ ಶಾಸಕರು, ಸಂಸದರೊಂದಿಗೆ ಸಭೆ ನಡೆಸಿರುವ ಜಿಲ್ಲಾ ಉಸ್ತುವಾರಿ ಮಂತ್ರಿ ಪ್ರಿಯಾಂಕ್‌ ಖರ್ಗೆಯವರು ಮಳೆಯಿಂದಾಗಿರುವ ಹಾನಿಯ ಜಂಟಿ ಸಮೀಕ್ಷೆಯ ವರದಿ ನಿರೀಕ್ಷೆಯಲ್ಲಿದ್ದೇವೆ ಎಂದು ಪರಿಹಾರ ವಿಚಾರದಲ್ಲಿನ ಸರ್ಕಾರದ ನಿಲುವಿನ ಬಗ್ಗೆ ಸ್ಪಷ್ಟವಾಗಿ ಹೇಳಿಲ್ಲ.

ಏತನ್ಮಧ್ಯೆ ಕಾಂಗ್ರೆಸ್‌ನ ಶಾಸಕ ಬಿ.ಆರ್‌. ಪಾಟೀಲ್‌, ಅಲ್ಲಂಪ್ರಭು, ಎಂ.ವೈ.ಪಾಟೀಲ ರೈತರ ಹೋರಾಟದಲ್ಲಿ ಪಾಲ್ಗೊಂಡು ಬೆಳಹಾನಿ ಪರಿಹಾರಕ್ಕಾಗಿ

ಧ್ವನಿ ಎತ್ತಿದ್ದಾರೆ.

ಆದರೆ, ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗಳಿಗೆ ಯಾರೊಬ್ಬರು ಭೇಟಿ ನೀಡಿ ಕುಟುಂಬಗಳಿಗೆ ಸಾಂತ್ವನದ ಮಾತಿ ಹೇಳಿಲ್ಲ.

ಈ ಹಿಂದೆ ರೈತರ ಆತ್ಮಹತ್ಯೆ ಆದಾಗ ಉಸ್ತುವಾರಿ ಸಚಿವರು ಭೇಟಿ ನೀಡಿ ಸಾಂತ್ವನ ಹೇಳುತ್ತಿದ್ದರು. ಪ್ರಕರಣದ ವಾಸ್ತವಾಂಶ ಆಧರಿಸಿ ಪರಿಹಾರ ಚೆಕ್‌ ವಿತರಿಸುತ್ತಿದ್ದರು. ಈಗ ಬೆಳೆಹಾನಿಯಿಂದಾಗಿ ಸಾವಿನ ದಾರಿ ಹಿಡಿದಿರುವ ಅನ್ನದಾತರು ಬೀದಿಗೆ ಬೀಳುವಂತಾಗಿದೆ.

ರೈತರ ಹೊಲಗದ್ದೆಗಳಿಗೆ ಅಧಿಕಾರಿಗಳು, ಶಾಸಕರು ಭೇಟಿ ನೀಡಿ ಬರುತ್ತಿದ್ದಾರಾದರೂ ರೈತರ ಯಾತನೆಗೆ ನಿರೀಕ್ಷಿತ ಸ್ಪಂದನೆ ದೊರೆತಿಲ್ಲ.

ಡ್ರೋನ್ ಮೂಲಕ ಸಮೀಕ್ಷೆ

ಜಿಲ್ಲೆಯಾದ್ಯಂತ ಆಗಸ್ಟ್‌ನಲ್ಲಿ 3ವಾರ ಸುರಿದ ಧಾರಾಕಾರ ಮಳೆಗೆ ಸಾವಿರಾರು ಹೆಕ್ಟೆರ್ ಪ್ರದೇಶದಲ್ಲಿ ಬೆಳೆದ ಬೆಳೆ ನಾಶವಾಗಿದೆ. ಡ್ರೋನ್ ಕ್ಯಾಮರಾ ಬಳಸಿ ಬೆಳೆ ಹಾನಿ ಸಮೀಕ್ಷೆ ಸಾಗಿದೆ. ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆಯಿಂದ ಜಂಟಿ ಬೆಳೆ ಹಾನಿ ಸಮೀಕ್ಷೆಯಲ್ಲಿ ಮೊದಲ ಹಂತದಲ್ಲಿ ಅಫಜಲಪುರ,ಆಳಂದ ತಾಲೂಕಿನಲ್ಲಿ ಡ್ರೋನ್ ಮೂಲಕ ಸಮೀಕ್ಷೆ ಶುರುವಾಗಿದೆ. ಅಫಜಲಪುರ ತಾಲೂಕಿನಲ್ಲಿ 13850 ಹೇಕ್ಟೆರ್, ಆಳಂದ ತಾಲೂಕಿನಲ್ಲಿ 15,521ಹೇಕ್ಟರ್ ಬೆಳೆ ನಾಶವಾಗಿರುವ ಅಂದಾಜಿದೆ. ಉದ್ದು, ಹೆಸರು, ತೊಗರಿ, ಹತ್ತಿ, ಸೂರ್ಯಕಾಂತಿ ಬೆಳೆ ಮಳೆಯ ನೀರಿನಲ್ಲಿ ನಿಂತು ನಿಂತು ರೈತರನ್ನೆ ಕಂಗಾಲಾಗಿಸಿವೆ.

ಮಳೆ- ಬೆಳೆ- ಮನೆ- ಪ್ರಾಣ ಹಾನಿ

- ಜೂನ್‌ ನಿಂದ ಆಗಸ್ಟ್‌ನಲ್ಲಿ ವಾಡಿಕೆಯಂತೆ 406 ಮಿಮಿ ಮಳೆ ಸುರಿಯಬೇಕಿತ್ತು

- ಮೇಲಿನ ಅವಧಿಯಲ್ಲಿ ಸುರಿದದ್ದು 485 ಮಿಮೀ ಮಳೆ

- ಆಗಸ್ಟ್‌ ತಿಂಗಳಲ್ಲೇ 166 ಮಿಮಿ ಬದಲು 266 ಮಿಮಿ ಮಳೆ ಸುರಿದು ಶೇ. 70ರಷ್ಟು ಅಧಿಕ ಮಳೆ

- ಆಗಸ್ಟ್‌ ಕೊನೆಯ 2 ವಾರ ಸುರಿದ ಧಾರಾಕರ 110 ಮಿಮೀ ಮಳೆಗೆ ಹಾನಿ ಪ್ರಮಾಣ ದ್ವಿಗುಣ

- ಜೂನ್‌ನಿಂದ ಆಗಸ್ಟ್‌ ಅವಧಿಯಲ್ಲಿ ಜಿಲ್ಲಾದ್ಯಂತ 100 ಹೆಕ್ಟರ್‌ ತೋಟಗಾರಿಕೆ ಬೆಳೆ ಹಾನಿ

- ಮಳೆಯಿಂದಾಗಿ ನೀರು ಹೊಕ್ಕು 900 ಮನೆಗಳಿಗೆ ಹಾನಿ

- 580 ಮನೆಗಳು ಭಾಗಶಃ ಹಾನಿ

- ಆ.2ವಾರದಲ್ಲೇ 350ಕ್ಕೂ ಹೆಚ್ಚು ಮನೆಗಳಿಗೆ ಹಾನಿ

- ಕಬ್ಬು, ಬಾಳೆ, ಹೂವು, ಟೊಮೆಟೋ ಹಲವು ಬೆಳೆಗೆ ಹಾನಿ

- ಮಳೆಗೆ ಇಬ್ಬರು ಬಲಿ

- 30 ಜಾನುವಾರು ಬಲಿ

--------

ಅತಿವೃಷ್ಟಿಯಿಂದ ತೊಗರಿ ನಾಡು ಅನ್ನದಾತರು ಸಾವಿನ ಮನೆ ಸೇರುತ್ತಿದ್ದಾರೆ. ಬೆಳೆ ಹಾನಿಗೆ ಪರಿಹಾರ ವಿಷಯದಲ್ಲಿ ಸರ್ಕಾರದಿಂದ ರೈತರಿಗೆ ಭರವಸೆ ಸಿಕ್ಕಿಲ್ಲ. ತೋಟಗಾರಿಕೆ ಬೆಳೆಗಳೂ ಹಾಳಾಗಿವೆ. ರೈತರು ಚಿಂತಾ ಜನಕರಾಗಿದ್ದಾರೆ. ಬೆಳೆ ನಷ್ಟ ಸಮೀಕ್ಷೆ ಶೀಘ್ರ ನಡೆಸಿ, ಪರಿಹಾರ ಘೋಷಿಸಬೇಕು. ಕಳೆದ ವರ್ಷದ ಬೆಳೆಹಾನಿಯ ಬಹುಕೋಟಿ ಹಣ ಬಿಡುಗಡೆ ಮಾಡಬೇಕು. ತೊಗರಿ ನಾಡಿಗೆ ಅತಿವೃಷ್ಟಿ ಪೀಡಿತ ಎಂದು ಘೋಷಿಸಿ ವಿಶೇಷ ಪರಿಹಾರ ಪ್ಯಾಕೇಜ್ ಕೊಡಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಇಂದಿಗೂ ಸಾವನ್ನಪ್ಪಿರುವ ರೈತರ ಮನೆಗೆ ಭೇಟಿ ನೀಡಿಲ್ಲ, ರೈತರ ಹಾನಿಗೆ ಸ್ಪಂದಿಸಿ ಪರಿಹಾರದ ವಿಚಾರದ ಹೇಳಿಕೆ ನೀಡಿಲ್ಲ.

-ಶರಣಬಸಪ್ಪ ಮಮಶೆಟ್ಟಿ, ಜಿಲ್ಲಾ ಅಧ್ಯಕ್ಷರು, ಪ್ರಾಂತ ರೈತ ಸಂಘ, ಕಲಬುರಗಿ