ಸಾರಾಂಶ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಕಳೆದ ನಾಲ್ಕೈದು ದಿನಗಳಿಂದ ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕಾಗಿ ಅಬ್ಬರಿಸುತ್ತಿರುವ ವರುಣನಿಂದ ಜೀವ ನದಿಗಳು ಉಕ್ಕಿ ಹರಿಯುತ್ತಿವೆ. ಮತ್ತೊಂದೆಡೆ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಭಾರೀ ಗಾಳಿಗೆ ಮರಗಳು ಉರುಳಿ ಬಿದ್ದಿದ್ದು, ರಸ್ತೆ ಸಂಚಾರದಲ್ಲಿ ವ್ಯತ್ಯಯ, ಕೆಲವೆಡೆ ಭೂ ಕುಸಿತವೂ ಉಂಟಾಗಿದೆ.- ಇದು, ಗುರುವಾರ ಜಿಲ್ಲೆಯ ಮಲೆನಾಡಿನಲ್ಲಿ ಕಂಡು ಬಂದ ಚಿತ್ರಣ.
ಶೃಂಗೇರಿ, ಮೂಡಿಗೆರೆ, ಕಳಸ ತಾಲೂಕುಗಳಲ್ಲಿ ನಿರಂತರವಾಗಿ ಬಲವಾದ ಥಂಡಿ ಗಾಳಿ ಬೀಸುತ್ತಿದೆ. ಬೀಸುತ್ತಿರುವ ಈ ಗಾಳಿಗೆ ಮಲೆನಾಡಿನ ಹಲವೆಡೆ ಮರಗಳು ಉರುಳಿವೆ. ಇದರಿಂದ ಕೊಪ್ಪ ಹಾಗೂ ಶೃಂಗೇರಿ ತಾಲೂಕುಗಳಲ್ಲಿ ವಿದ್ಯುತ್ ಸಂಪರ್ಕ ಅಸ್ತವ್ಯಸ್ತವಾಗಿದೆ. ಶಿವಮೊಗ್ಗ- ಮಂಗಳೂರು ರಸ್ತೆಯಲ್ಲಿರುವ ಶೃಂಗೇರಿಯ ತ್ಯಾವಣ ಬಳಿ ಬುಧವಾರ ರಾತ್ರಿ ಮರವೊಂದು ಬಿದ್ದ ಪರಿಣಾಮ ಇಡೀ ರಾತ್ರಿ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿತ್ತು. ಗುರುವಾರ ಬೆಳಿಗ್ಗೆ ಮರ ತೆರವುಗೊಳಿಸಿದ ಬಳಿ ವಾಹನಗಳ ಸಂಚಾರ ಪುನಾರಂಭಗೊಂಡಿತು.ಕುದುರೆಮುಖ, ಕೆರೆಕಟ್ಟೆ, ನೆಮ್ಮಾರ್ ಸುತ್ತಮುತ್ತ ನಿರಂತರ ಮಳೆಯಿಂದ ಬುಧವಾರ ರಾತ್ರಿ ಶೃಂಗೇರಿ ಗಾಂಧಿ ಮೈದಾನ ಜಲಾವೃತವಾಗಿತ್ತು. ಇಲ್ಲಿನ ಭಾರತೀ ಬೀದಿ, ಕೆವಿಆರ್ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ಬೈಪಾಸ್ ರಸ್ತೆ ಹಾಗೂ ತುಂಗಾ ನದಿಯ ಆಸುಪಾಸಿನಲ್ಲಿರುವ ತಗ್ಗಿನ ಪ್ರದೇಶಗಳು ಜಲಾವೃತವಾಗಿದ್ದವು. ಆದರೆ, ಗುರುವಾರ ಬೆಳಿಗ್ಗೆಯಿಂದ ಸಂಜೆವರೆಗೆ ಮಳೆಯ ಅಬ್ಬರ ಸ್ವಲ್ಪಮಟ್ಟಿಗೆ ಇಳಿಮುಖವಾಗಿತ್ತು.
ಕಳಸ ತಾಲೂಕಿನಲ್ಲೂ ಬಿಡುವಿಲ್ಲದೆ ಮಳೆ ಸುರಿಯುತ್ತಿದೆ. ಹಾಗಾಗಿ ಭದ್ರಾ ನದಿಯಲ್ಲಿ ನೀರಿನ ಮಟ್ಟದಲ್ಲಿ ಏರಿಕೆ ಕಂಡು ಬಂದಿದೆ. ಕಳಸ ಹಾಗೂ ಹೊರನಾಡಿಗೆ ಸಂಪರ್ಕ ಕಲ್ಪಿಸುವ ಹೆಬ್ಬಾಳ್ ಸೇತುವೆ ಸಮೀಪಕ್ಕೆ ನೀರು ಬಂದಿದ್ದು, ಯಾವುದೇ ಕ್ಷಣದಲ್ಲಾದರೂ ಸೇತುವೆ ಮುಳುಗಡೆಯಾಗುವ ಸಾಧ್ಯತೆ ಇದೆ. ಕಳಸ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ರಂಗನಾಥ್ ಅವರ ಕಚ್ಚಿಗಾನೆ ಗ್ರಾಮದ ಮನೆಯ ಬಳಿ ನಿರ್ಮಾಣ ಮಾಡಲಾಗಿದ್ದ ತಡೆಗೋಡೆ, ಮನೆಯ ಸ್ಲ್ಯಾಬ್ ಗುರುವಾರ ಬೆಳಿಗ್ಗೆ ಸುಮಾರು 8 ಗಂಟೆ ವೇಳೆಗೆ ಜೀಪ್ ಮೇಲೆ ಬಿದ್ದ ಪರಿಣಾಮ ಹಾನಿ ಸಂಭವಿಸಿದೆ.ಕೊಟ್ಟಿಗೆಹಾರ, ಜಾವಳಿ, ಬಣಕಲ್, ಗೋಣಿಬೀಡು ಸೇರಿದಂತೆ ಮೂಡಿಗೆರೆ ತಾಲೂಕಿನ ಹಲವೆಡೆ ಬಿಡುವಿಲ್ಲದೆ ಮಳೆ ಸುರಿಯುತ್ತಿದೆ. ಹಲವೆಡೆ ಸಣ್ಣ ಪುಟ್ಟ ಭೂ ಕುಸಿತ ಉಂಟಾಗಿದೆ. ಚಾರ್ಮಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಪ್ರತಿಕೂಲ ವಾತಾವರಣ ಇದೆ. 2019ರಲ್ಲಿ ರಸ್ತೆ ಹಲವೆಡೆ ಕುಸಿತ ಉಂಟಾಗಿತ್ತು. ಆಗ ಕೆಲವೆಡೆ ತಡೆಗೋಡೆ ನಿರ್ಮಾಣ ಮಾಡಿದ್ದರೆ, ಕೆಲವೆಡೆ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿತ್ತು. ಆದರೆ, ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ತಡೆಗೋಡೆ ಹಾಗೂ ರಸ್ತೆಯಲ್ಲಿ ಬಿರುಕು ಕಂಡು ಬಂದಿದೆ. ಹಾಗಾಗಿ ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಚಾಲಕರು ಅತ್ಯಂತ ಎಚ್ಚರಿಕೆಯಿಂದ ಮುಂದೆ ಸಾಗುವ ಪರಿಸ್ಥಿತಿ ಎದುರಾಗಿದೆ.
ಎನ್.ಆರ್. ಪುರ ತಾಲೂಕಿನಲ್ಲೂ ಕಳೆದ ರಾತ್ರಿ ಭಾರೀ ಮಳೆಯಾಗಿದೆ. ಆದರೆ, ಗುರುವಾರ ಬೆಳಿಗ್ಗೆ 8 ರಿಂದ ಬಿಡುವು ನೀಡಿತ್ತು. ಬಾಳೆಹೊನ್ನೂರು ಬಳಿ ಭದ್ರಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಕೊಪ್ಪ ತಾಲೂಕಿನಲ್ಲಿ ಬೆಳಿಗ್ಗೆಯಿಂದ ಮಳೆ ಸ್ವಲ್ಪ ಮಟ್ಟಿಗೆ ಇಳಿಮುಖವಾಗಿತ್ತು. ಚಿಕ್ಕಮಗಳೂರು ತಾಲೂಕಿನಲ್ಲೂ ಕೂಡ ಬುಧವಾರ ರಾತ್ರಿ ಭಾರೀ ಮಳೆ ಇತ್ತು. ಆದರೆ, ಗುರುವಾರ ಸಂಜೆವರೆಗೆ ಬಿಡುವು ನೀಡಿತ್ತು. ತರೀಕೆರೆ ತಾಲೂಕಿನ ಹಲವೆಡೆ ತುಂತುರು ಮಳೆ ಮುಂದುವರಿದಿತ್ತು. ಆದರೆ, ಕಡೂರು ಹಾಗೂ ಅಜ್ಜಂಪುರ ತಾಲೂಕಿನಲ್ಲಿ ಮೋಡ ಕವಿದ ವಾತಾವರಣ ಮುಂದುವರಿದಿತ್ತು.-- ಬಾಕ್ಸ್--24 ಗಂಟೆಗಳಲ್ಲಿ ಜಿಲ್ಲೆಯ ವಿವಿಧೆಡೆ ಬಿದ್ದ ಮಳೆ
ಶೃಂಗೇರಿ ಪಟ್ಟಣದಲ್ಲಿ 151.4 ಮಿ.ಮೀ. ಮಳೆಯಾಗಿದ್ದರೆ, ಕೆರೆಕಟ್ಟೆಯಲ್ಲಿ ಅತಿ ಹೆಚ್ಚು ಅಂದರೆ 234.8 ಮಿ.ಮೀ. ಮಳೆ ಬಂದಿದೆ. ಕಿಗ್ಗಾ- 193.6, ಕೊಪ್ಪ- 104, ಹರಿಹರಪುರ- 131, ಜಯಪುರ- 98.6, ಬಸರೀಕಟ್ಟೆ- 95.5, ಕಮ್ಮರಡಿ- 196.4, ಎನ್.ಆರ್.ಪುರ- 63.4, ಬಾಳೆಹೊನ್ನೂರು- 61, ಕಳಸ- 40, ಮೂಡಿಗೆರೆ- 34.8, ಕೊಟ್ಟಿಗೆಹಾರ- 95.8, ಗೋಣಿಬೀಡು- 48.2, ಹೊಸಕೆರೆ- 117.2, ಚಿಕ್ಕಮಗಳೂರು- 19, ಜೋಳ್ದಾಳ್- 40, ಆಲ್ದೂರು- 30, ಅಜ್ಜಂಪುರ- 28, ಶಿವನಿಯಲ್ಲಿ 4 ಮಿ.ಮೀ. ಮಳೆಯಾಗಿದೆ.---4 ಕೆಸಿಕೆಎಂ 4ಕಳಸ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಚ್ಚಿಗಾನೆ ಗ್ರಾಮದಲ್ಲಿ ರಂಗನಾಥ್ ಅವರ ಮನೆ ಬಳಿ ತಡೆಗೋಡೆ ಕುಸಿದಿರುವುದು. 4 ಕೆಸಿಕೆಎಂ 5ಕಳಸ- ಹೊರನಾಡು ಸಂಪರ್ಕದ ಹೆಬ್ಬಾಳ್ ಸೇತುವೆಯ ಸಮೀಪಕ್ಕೆ ಬಂದಿರುವ ಭದ್ರಾ ನದಿಯ ನೀರು.