ಮಳೆ ಕೊರತೆಯಿಂದ ಮುಂಗಾರು ಬೆಳೆಗಳಾದ ಈರುಳ್ಳಿ, ಹತ್ತಿ, ಮೆಕ್ಕೆಜೋಳ, ಜೋಳ ಸೇರಿದಂತೆ ವಿವಿಧ ಬೆಳೆಗಳು ಹಾನಿಗೊಳಗಾಗಿದ್ದು, ರೈತರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.
ಗದಗ: ಕಳೆದ ಹಲವು ದಿನಗಳಿಂದ ತೀವ್ರ ಮಳೆ ಕೊರತೆ ಹಾಗೂ ಬರದ ಆತಂಕದಿಂದ ಕಂಗೆಟ್ಟಿದ್ದ ಜಿಲ್ಲೆಯ ರೈತರ ಮೊಗದಲ್ಲಿ ಶುಕ್ರವಾರ ಸಂಜೆ ಸುರಿದ ಧಾರಾಕಾರ ಮಳೆ ಹೊಸ ಭರವಸೆ ಮೂಡಿಸಿದೆ. ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿಯೂ ಉತ್ತಮ ಮಳೆಯಾಗಿದ್ದು, ಹಿಂಗಾರು ಹಂಗಾಮಿನ ಪ್ರಮುಖ ವಾಣಿಜ್ಯ ಬೆಳೆಯಾದ ಕಡಲೆ ಬಿತ್ತನೆಗೆ ಮಳೆ ಅನುಕೂಲಕರ ವಾತಾವರಣ ಕಲ್ಪಿಸಿದೆ.
ಗದಗ-ಬೆಟಗೇರಿ ಅವಳಿ ನಗರದಲ್ಲಿ ಮಧ್ಯಾಹ್ನದ ಬಳಿಕ ಏಕಾಏಕಿ ಆರಂಭವಾದ ಮಳೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರಭಸದಿಂದ ಸುರಿಯಿತು. ನಿರಂತರವಾಗಿ ಸುರಿದ ಮಳೆಯಿಂದ ರಸ್ತೆಗಳು ಜಲಾವೃತಗೊಂಡಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿತು. ಹಲವೆಡೆ ಚರಂಡಿಗಳು ತುಂಬಿ ಹರಿದ ಪರಿಣಾಮ ರಸ್ತೆಯ ಮೇಲೆ ನೀರು ಹರಿಯಿತು.ರೈತರಲ್ಲಿ ಚಿಗುರಿದ ಆಶಾಭಾವನೆ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಮಳೆ ಕೊರತೆಯಿಂದ ಮುಂಗಾರು ಬೆಳೆಗಳಾದ ಈರುಳ್ಳಿ, ಹತ್ತಿ, ಮೆಕ್ಕೆಜೋಳ, ಜೋಳ ಸೇರಿದಂತೆ ವಿವಿಧ ಬೆಳೆಗಳು ಹಾನಿಗೊಳಗಾಗಿದ್ದು, ರೈತರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಇದೀಗ ಹಿಂಗಾರು ಹಂಗಾಮಿನ ಆರಂಭದಲ್ಲೇ ಉತ್ತಮ ಮಳೆಯಾಗಿರುವುದು ರೈತರಲ್ಲಿ ಆಶಾಭಾವನೆ ಮೂಡಿಸಿದೆ.
ಈರುಳ್ಳಿ ರಕ್ಷಿಸಲು ಪರದಾಟ: ಗದಗ ಎಪಿಎಂಸಿಗೆ ಈರುಳ್ಳಿ ಮಾರಾಟಕ್ಕೆ ಆಗಮಿಸಿದ್ದ ರೈತರಿಗೆ ಮಾತ್ರ ಧಾರಾಕಾರ ಮಳೆ ಸಂಕಷ್ಟ ತಂದೊಡ್ಡಿತು. ಮಾರುಕಟ್ಟೆ ಆವರಣದಲ್ಲಿ ಮಾರಾಟಕ್ಕೆಂದು ತಂದಿದ್ದ ಈರುಳ್ಳಿ ರಾಶಿಗಳನ್ನು ಮಳೆಯಿಂದ ರಕ್ಷಿಸಲು ರೈತರು ಹರಸಾಹಸಪಟ್ಟರು. ಮಳೆ ಆರಂಭವಾಗುತ್ತಿದ್ದಂತೆ ರೈತರು ತಾವು ತಂದಿದ್ದ ಈರುಳ್ಳಿಯ ಚೀಲ ಹಾಗೂ ರಾಶಿಗಳನ್ನು ತಾಡಪತ್ರೆ, ಪ್ಲಾಸ್ಟಿಕ್ ಹೊದಿಕೆಗಳಿಂದ ಮುಚ್ಚಲು ಪರದಾಡಿದರು. ಏಕಾಏಕಿ ಸುರಿದ ರಭಸದ ಮಳೆಯಿಂದ ಕೆಲವೆಡೆ ನೀರು ನಿಂತ ಪರಿಣಾಮ ಈರುಳ್ಳಿ ತೇವಗೊಂಡು ಹಾನಿಯಾಗುವ ಆತಂಕ ರೈತರಲ್ಲಿ ಮೂಡಿತು. ಈರುಳ್ಳಿ ಬೆಲೆ ಕುಸಿತದಿಂದ ಈಗಾಗಲೇ ಸಂಕಷ್ಟದಲ್ಲಿರುವ ರೈತರಿಗೆ ಮಳೆಯ ಹೊಡೆತ ಮತ್ತಷ್ಟು ಆತಂಕಕ್ಕೆ ಕಾರಣವಾಯಿತು. ಬರದ ಬೇಗುದಿಯಿಂದ ಕಂಗೆಟ್ಟಿದ್ದ ಜಿಲ್ಲೆಯ ರೈತರಿಗೆ ಶುಕ್ರವಾರದ ಮಳೆ ತಾತ್ಕಾಲಿಕ ನೆಮ್ಮದಿ ನೀಡಿದ್ದು, ಮುಂದಿನ ದಿನಗಳಲ್ಲಿಯೂ ಉತ್ತಮ ಮಳೆ ಮುಂದುವರಿಯಲಿ ಎಂಬ ಆಶಯ ರೈತರದ್ದಾಗಿದೆ.