ಹಾವೇರಿ ನಗರದಲ್ಲಿ ಶುಕ್ರವಾರ ಸಂಜೆ ಗಾಳಿ, ಗುಡುಗು ಸಹಿತ ಸುರಿದ ಭಾರಿ ಮಳೆಗೆ ರಸ್ತೆ ಮೇಲೆ ನೀರು ಹರಿದು ಸಂಚಾರ ಅಸ್ತವ್ಯಸ್ತಗೊಂಡರೆ, ರಾಣಿಬೆನ್ನೂರು ತಾಲೂಕಿನಲ್ಲಿ ಸಿಡಿಲು ಬಡಿದು ರೈತರೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.

ಹಾವೇರಿ: ನಗರದಲ್ಲಿ ಶುಕ್ರವಾರ ಸಂಜೆ ಗಾಳಿ, ಗುಡುಗು ಸಹಿತ ಸುರಿದ ಭಾರಿ ಮಳೆಗೆ ರಸ್ತೆ ಮೇಲೆ ನೀರು ಹರಿದು ಸಂಚಾರ ಅಸ್ತವ್ಯಸ್ತಗೊಂಡರೆ, ರಾಣಿಬೆನ್ನೂರು ತಾಲೂಕಿನಲ್ಲಿ ಸಿಡಿಲು ಬಡಿದು ರೈತರೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.

ರಾಣಿಬೆನ್ನೂರು ತಾಲೂಕು ಜೋಯಿಸರಹರಳಹಳ್ಳಿ ಗ್ರಾಮದ ರೈತ ಮಹದೇವಪ್ಪ ಗುರುಶಾಂತಪ್ಪ ಶಿಡೇನೂರ (70) ಮೃತಪಟ್ಟಿದ್ದಾರೆ. ಹೊಲಕ್ಕೆ ಹೋದ ಸಂದರ್ಭದಲ್ಲಿ ಗುಡುಗು, ಮಳೆ ಆರಂಭವಾಗಿದ್ದು, ಈ ವೇಳೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಹಾವೇರಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಭಾರಿ ಮಳೆ ಸುರಿದಿದ್ದು, ರಸ್ತೆ ಮೇಲೆ ನೀರು ಹರಿದು ಸಂಚಾರ ಅಸ್ತವ್ಯಸ್ತಗೊಂಡಿದೆ.

ಕಳೆದ ಎರಡು ತಿಂಗಳಿಂದ ಕಣ್ಮರೆಯಾಗಿದ್ದ ಮಳೆ ಶುಕ್ರವಾರ ಸಂಜೆ ಏಕಾಏಕಿ ಗುಡುಗು, ಸಿಡಿಲು ಹಾಗೂ ಮಿಂಚಿನ ಆರ್ಭಟದೊಂದಿಗೆ ಧಾರಾಕಾರವಾಗಿ ಸುರಿಯಿತು. ಜಿಲ್ಲಾ ಕೇಂದ್ರ ಹಾವೇರಿಯಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದ ಬಿಸಿಲಿನ ಝಳಕ್ಕೆ ಕಾದು ಕೆಂಪಾಗಿದ್ದ ಭೂಮಿಗೆ ತಂಪಿನ ಅನುಭವವಾಗಿದ್ದು, ಮಳೆಯ ನಿರೀಕ್ಷೆಯಲ್ಲಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಶುಕ್ರವಾರ ಬೆಳಗ್ಗೆಯಿಂದಲೇ ಬಿಸಿಲಿನ ತೀವ್ರತೆ ಹೆಚ್ಚಾಗಿತ್ತು. ದಿನವಿಡೀ ಬಿಸಿಲಿನ ಝಳದಿಂದ ಜನರು ತತ್ತರಿಸಿದ್ದರು. ಮಧ್ಯಾಹ್ನದ ವೇಳೆಯೂ ಬಿಸಿಲಿನ ಪ್ರಖರತೆ ಕಡಿಮೆಯಾಗಿರಲಿಲ್ಲ. ಆದರೆ, ಸಂಜೆ ವೇಳೆಗೆ ಮೋಡ ಕಡಿದು ಏಕಾಏಕಿಯಾಗಿ ಮಳೆ ಸುರಿಯಲಾರಂಭಿಸಿತು.

ಹಾವೇರಿಯ ಎಸ್ಪಿ ಕಚೇರಿ ಎದುರಿನಿಂದ ತಾಪಂ ಕಚೇರಿವರೆಗೂ ರಸ್ತೆ ಮೇಲೆ ಒಂದು ಅಡಿಗೂ ಹೆಚ್ಚು ನೀರು ಹರಿಯಿತು. ಹಾನಗಲ್ಲ ರಸ್ತೆಯಲ್ಲೂ ಅರ್ಧ ಕಿಲೋ ಮೀಟರ್‌ವರೆಗೆ ರಸ್ತೆ ಮೇಲೆಯೇ ಹಳ್ಳದಂತೆ ನೀರು ಹರಿಯಿತು. ಇದರಿಂದ ಎರಡೂ ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು. ಮಾರುಕಟ್ಟೆ ಪ್ರದೇಶದಲ್ಲಿ ಮಳೆ ಅಬ್ಬರಕ್ಕೆ ಜನ ಕಂಗಾಲಾದರು. ಶಿವಾಜಿನಗರ, ಗೂಗಿಕಟ್ಟಿ ಸೇರಿದಂತೆ ವಿವಿಧೆಡೆ ಚರಂಡಿ ಕಾಲುವೆಗಳು ತುಂಬಿ, ರಸ್ತೆ ಮೇಲೆ ನೀರು ಹರಿದಿದೆ. ಪರಿಣಾಮ ವಾಹನ ಸವಾರರು ಕೆಲಕಾಲ ಪರದಾಡುವಂತಾಯಿತು.

ಹಿರೇಕೆರೂರು ತಾಲೂಕು ಸೇರಿದಂತೆ ಹಲವೆಡೆ ಧಾರಾಕಾರ ಮಳೆ ಸುರಿದಿದೆ. ಉಳಿದಂತೆ ಜಿಲ್ಲೆಯ ಹಲವೆಡೆ ಗ್ರಾಮೀಣ ಭಾಗದಲ್ಲಿ ಮಳೆಯಾಗಿದ್ದು, ರಾಣಿಬೆನ್ನೂರು, ಬ್ಯಾಡಗಿ, ಹಾನಗಲ್ಲ, ಶಿಗ್ಗಾಂವಿ, ಸವಣೂರು, ರಟ್ಟಿಹಳ್ಳಿ ತಾಲೂಕಿನಲ್ಲಿ ಮೋಡ ಕವಿದ ವಾತಾವರಣ ಕಂಡುಬಂದಿದೆ. ಮಳೆಗಾಗಿ ಕಾಯುತ್ತಿದ್ದ ರೈತರ ಮೊಗದಲ್ಲಿ ಸಂತಸ ಮೂಡಿಸಿದೆ.