ಸಾರಾಂಶ
ಭಾರಿ ಮಳೆಯ ಹಿನ್ನೆಲೆಯಲ್ಲಿ ನದಿ ಪಾತ್ರದ ಭತ್ತದ ಗದ್ದೆಗಳು ಸಂಪೂರ್ಣ ಜಲಾವೃತವಾಗಿದ್ದು ನಷ್ಟವುಂಟಾಗಿದೆ.
ಕನ್ನಡಪ್ರಭ ವಾರ್ತೆ ಕಾರ್ಕಳ
ಕಳೆದ ಎರಡು ದಿನಗಳಿಂದ ಬಿಡುವು ನೀಡಿದ್ದ ಮಳೆ, ಮತ್ತೆ ಎಡೆಬಿಡದೆ ಸುರಿಯುತ್ತಿದೆ. ಭಾರಿ ಮಳೆಗೆ ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲಿನ ಎಲ್ಲ ನದಿಗಳು ಅಪಾಯಮಟ್ಟದಲ್ಲಿ ಹರಿಯುತ್ತಿದ್ದು, ಅಕ್ಕಪಕ್ಕದ ಕೃಷಿಭೂಮಿಗೆ ನೀರು ನುಗ್ಗಿದೆ.* ಭಾರಿ ಕೃಷಿ ನಾಶ: ಸುರಿಯುತ್ತಿರುವ ಭಾರಿ ಮಳೆಗೆ ಸುಮಾರು 2000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ಭತ್ತ ಕೃಷಿ ನಾಶವಾಗಿದೆ. ಕಳೆದ ಎಂಟು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯ ಹಿನ್ನೆಲೆಯಲ್ಲಿ ನದಿ ಪಾತ್ರದ ಭತ್ತದ ಗದ್ದೆಗಳು ಸಂಪೂರ್ಣ ಜಲಾವೃತವಾಗಿದ್ದು ನಷ್ಟವುಂಟಾಗಿದೆ. ಹೆಬ್ರಿಯ ಸೀತಾನದಿ, ಕಾರ್ಕಳದ ಸ್ವರ್ಣ ನದಿಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.
* ಭಾರಿ ಗಾಳಿಗೆ ವಿದ್ಯುತ್ ಕಣ್ಣಾಮುಚ್ಚಾಲೆ: ಅವಳಿ ತಾಲೂಕುಗಳಲ್ಲಿ ಭಾರಿ ಗಾಳಿಗೆ ಕಬ್ಬಿನಾಲೆ, ಶಿರ್ಲಾಲು, ಕೆರುವಾಶೆ ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ಉರುಳಿದ್ದು, ವಿದ್ಯುತ್ ಪೂರೈಕೆ ಯಲ್ಲಿ ವ್ಯತ್ಯಯವಾಗಿದೆ.ಗುರುವಾರ ರಾತ್ರಿ ಬೀಸಿದ ಗಾಳಿ ಮಳೆಗೆ ಲಕ್ಷಾಂತರ ರು. ಹಾನಿ ಸಂಭವಿಸಿದೆ. ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಸುರೇಶ್ ರಾವ್ ಅವರ ತೋಟಗಾರಿಕಾ ಬೆಳೆ ಹಾನಿಯಾಗಿದ್ದು 25000 ರು. ನಷ್ಟವಾಗಿದೆ. ಮುಂಡ್ಕೂರು ಗ್ರಾಮದ ಸದಾನಂದ ಅವರ ಕೃಷಿ ಬೆಳೆಗೆ 3000 ರು., ಬೋಳ ಗ್ರಾಮದ ದೇವಕಿ ಆಚಾರ್ಯ ಅವರ ಕೃಷಿಗೆ 20000 ರು., ಸುಂದರ ಪೂಜಾರಿ ಅವರ ಕೃಷಿಗೆ 20000 ರು., ಕಣಜಾರು ಗ್ರಾಮದ ಕೃಷ್ಣ ಶೆಟ್ಟಿ ಅವರ ಕೃಷಿಗೆ 10000 ರು. ನಷ್ಟವಾಗಿದೆ.ಕಾರ್ಕಳದಲ್ಲಿ 76 ಮಿ.ಮೀ. ಹಾಗೂ ಹೆಬ್ರಿಯಲ್ಲಿ 73 ಮಿ.ಮೀ. ಮಳೆಯಾಗಿದೆ.