ಕಾರ್ಕಳ, ಹೆಬ್ರಿಯಲ್ಲಿ ಭಾರಿ ಮಳೆ: ತುಂಬಿ ಹರಿದ ನದಿಗಳು

| Published : Jul 15 2024, 01:59 AM IST

ಸಾರಾಂಶ

ಆಗುಂಬೆ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತಿದ್ದು, ಸೀತಾ ನದಿ ನೀರಿನ ಪ್ರಮಾಣವು ಏರಿಕೆಯಾಗಿದೆ. , ಮಾಳ ಮಲ್ಲಾರ್ ಬಳಿ ಹುಟ್ಟುವ ಸ್ವರ್ಣ ನದಿಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿಯುತಿದೆ.ತೀರ್ಥೊಟ್ಟು ನದಿಯಲ್ಲಿ ನೀರು ಅಪಾಯ ಮಟ್ಟದಲ್ಲಿ ಹರಿಯುತ್ತಿದೆ.

ಕನ್ನಡಪ್ರಭ ವಾರ್ತೆ ಕಾರ್ಕಳ

ಕಾರ್ಕಳ ಹಾಗೂ ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ ಭಾರಿ ಮಳೆಯಾಗುತ್ತಿದೆ. ಕುದುರೆಮುಖ ವನ್ಯಜೀವಿ ವಿಭಾಗದ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಮಾಳ ಮಲ್ಲಾರ್ ಬಳಿ ಹುಟ್ಟುವ ಸ್ವರ್ಣ ನದಿಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿಯುತಿದೆ.

ಆಗುಂಬೆ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತಿದ್ದು, ಸೀತಾ ನದಿ ನೀರಿನ ಪ್ರಮಾಣವು ಏರಿಕೆಯಾಗಿದೆ.ವರಂಗದ ಕಬ್ಬಿನಾಲೆ ನದಿ, ಹೆಬ್ರಿಯ ಜರುವತ್ತು ನದಿ, ಮುನಿಯಾಲು ಬಳಿಯ ತೀರ್ಥೊಟ್ಟು ನದಿಯಲ್ಲಿ ನೀರು ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು, ಕೃಷಿ ಗದ್ದೆಗಳಿಗೆ ನೀರು ನುಗ್ಗಿದೆ. ಹೆಬ್ರಿ ತಾಲೂಕಿನ ಶಿವಪುರ ನದಿ, ಕೆರುವಾಶೆ ಹೆಪ್ಪನಡ್ಕ ನದಿ, ಎಣ್ಣೆಹೊಳೆ ಸಮೀಪದ ಹಂಚಿಕಟ್ಟೆ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ.* ಆಗುಂಬೆಯಲ್ಲಿ ಗುಡ್ಡಕುಸಿತ:

ಸೋಮೇಶ್ವರ ಅಭಯಾರಣ್ಯ ವ್ಯಾಪ್ತಿಯ ಆಗುಂಬೆಯ ನಾಲ್ಕನೇ ತಿರುವಿನಲ್ಲಿ ಭಾನುವಾರ ಮುಂಜಾನೆ ಸಣ್ಣ ಪ್ರಮಾಣದ ಗುಡ್ಡ ಕುಸಿತವಾಗಿದೆ. ಅರಣ್ಯ ಇಲಾಖೆ ಹಾಗೂ ಹೆದ್ದಾರಿ ಪ್ರಾಧಿಕಾರ, ಸ್ಥಳೀಯರು, ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ರಸ್ತೆಯಲ್ಲಿ ಬಿದ್ದಿದ್ದ ಮಣ್ಣು, ಕಲ್ಲುಗಳನ್ನು ತೆರವುಗೊಳಿಸಲಾಯಿತು.

* ಚಾಲಕರೇ ಹುಷಾರ್:

ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಧಾರಕಾರವಾಗಿ ಗಾಳಿಯೊಂದಿಗೆ ಮಳೆ ಸುರಿಯುತಿದೆ. ಭಾರಿ ಗಾಳಿ ಹಿನ್ನೆಲೆ ವಾಹನ ಸವಾರರು ಚಾಲನೆ ವೇಳೆ ನಿಗಾ ವಹಿಸುವುದು ಅಗತ್ಯ. ಕಳೆದ ವಾರ ಚಲಿಸುತ್ತಿದ್ದ ಕಾರಿನ‌ ಮೇಲೆ ಮರಬಿದ್ದ ಕಾರಣ ಕಾರಿನ ಮೆಲ್ಭಾಗ ಸಂಪೂರ್ಣ ನಜ್ಜುಗುಜ್ಜಾಗಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿತ್ತು. ಆಗುಂಬೆ, ಮಾಳ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಸುಳಿಗಾಳಿಗೆ ಸುಮಾರು ಇನ್ನೂರಕ್ಕೂ ಹೆಚ್ಚು ಮರಗಳು ಉರುಳಿವೆ.ಮಳೆಗಾಲ ಆರಂಭವಾಗುತ್ತಿದ್ದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಆಗುಂಬೆ ಘಾಟಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧಿಸಿ ಉಡುಪಿ ಹಾಗೂ ಶಿವಮೊಗ್ಗ ಜಿಲ್ಲಾಧಿಕಾರಿಗಳು ಆದೇಶಿಸಿದ್ದರು.ಕಾರ್ಕಳ ತಾಲೂಕಿನಲ್ಲಿ 37.7 ಮಿ.ಮೀ., ಹೆಬ್ರಿಯಲ್ಲಿ 70.6 ಮಿ.ಮೀ. ಮಳೆ ಸುರಿದಿದೆ.