ಕೊಡಗಿನಲ್ಲಿ ಭಾರಿ ಮಳೆ: ಭೂ ಕುಸಿತ

| Published : Aug 29 2025, 01:00 AM IST

ಸಾರಾಂಶ

ಕೊಡಗು ಜಿಲ್ಲೆಯಾದ್ಯಂತ ಭಾರಿ ಮಳೆಯಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಜಿಲ್ಲಾದ್ಯಂತ ಗುರುವಾರ ಬೆಳಗ್ಗೆ ಭಾರಿ ಮಳೆಯಾಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.

ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಹಲವು ಕಡೆಗಳಲ್ಲಿ ಬೆಳಗ್ಗೆಯಿಂದ ಭಾರಿ ಮಳೆಯಾಗಿದ್ದು, ಮಧ್ಯಾಹ್ನದ ನಂತರ ಮಳೆ ಇಳಿಮುಖಗೊಂಡಿದೆ. ಎರಡು ದಿನಗಳಿಂದ ಮಳೆ ಸುರಿಯುತ್ತಿರುವ ಹಿನ್ನೆಲೆ ಜಿಲ್ಲೆಯಲ್ಲಿ ಭೂಕುಸಿತ ಉಂಟಾಗಿದೆ.

ಮಡಿಕೇರಿ ತಾಲೂಕಿನ ಮೇಕೇರಿ ಬಳಿ ಭೂಕುಸಿತವಾಗಿದ್ದು, ಮಡಿಕೇರಿ-ವಿರಾಜಪೇಟೆ ರಸ್ತೆಯಲ್ಲಿ ಕುಸಿತವಾಗಿದೆ. ಒಂದು ಬದಿಯಲ್ಲಿ ರಸ್ತೆ ಬಹುತೇಕ ಕುಸಿದಿದೆ. ರಸ್ತೆ 100 ಅಡಿಗೂ ಹೆಚ್ಚು ಆಳವಿರುವ ಭಾಗಕ್ಕೆ ಕುಸಿದಿರುವುದರಿಂದ ಮಡಿಕೇರಿ- ವಿರಾಜಪೇಟೆ ಸಂಪರ್ಕ ಕಡಿತಗೊಳ್ಳುವ ಆತಂಕ ಉಂಟಾಗಿದೆ.

ಬುಧವಾರ ಬೆಳಗ್ಗೆಯಿಂದಲೂ ಜಿಲ್ಲೆಯಲ್ಲಿ ಮಳೆ ಸುರಿಯುತ್ತಿದೆ. ಆಗಸ್ಟ್ ಆರಂಭದಲ್ಲಿ ಇದೇ ಜಾಗದಲ್ಲಿ ಸ್ವಲ್ಪ ಮಣ್ಣು ಕುಸಿದಿತ್ತು. ಇದೀಗ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿದಿದೆ. ರಸ್ತೆ ಬದಿಯಲ್ಲಿ ಮತ್ತಷ್ಟು ಬಿರುಕು ಬಿಟ್ಟಿದೆ. ಮಳೆ ಮತ್ತಷ್ಟು ತೀವ್ರಗೊಂಡಲ್ಲಿ ಮತ್ತಷ್ಟು ಭೂಮಿ ಕುಸಿಯುವ ಸಾಧ್ಯತೆ ಇದೆ. ಸದ್ಯ ರಸ್ತೆಯ ಒಂದು ಬದಿಯಲ್ಲಿ ಬ್ಯಾರಿಕೇಡ್ ಹಾಕಿ ಒಂದೇ ಬದಿಯಲ್ಲಿ ವಾಹನಗಳು ಸಂಚರಿಸುತ್ತಿದ್ದು, ಇದರಿಂದ ಸಂಚಾರಕ್ಕೆ ತೀವ್ರ ಅಡ್ಡಿಯಾಗಿದೆ.

ಸೆ.2ರ ವರೆಗೆ ಜಿಲ್ಲೆಯಲ್ಲಿ ಮಳೆ ಸುರಿಯುವ ಮುನ್ಸೂಚನೆ ಇದ್ದು, ಹೀಗಾಗಿ ಜಿಲ್ಲೆಯಲ್ಲಿ ಸಮಸ್ಯೆಗಳು ಎದುರಾಗುವ ಆತಂಕ ಎದುರಾಗಿದೆ.

ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 27.70 ಮಿ.ಮೀ. ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ಸರಾಸರಿ ಮಳೆ 52.08 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ ಸರಾಸರಿ 18.05 ಮಿ.ಮೀ., ಪೊನ್ನಂಪೇಟೆ ತಾಲೂಕಿನಲ್ಲಿ ಸರಾಸರಿ 20.35 ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ 29.30 ಮಿ.ಮೀ., ಕುಶಾಲನಗರ ತಾಲೂಕಿನಲ್ಲಿ ಸರಾಸರಿ 18.70 ಮಿ.ಮೀ. ಮಳೆಯಾಗಿದೆ.

ಹೋಬಳಿವಾರು ಮಳೆ ವಿವರ:

ಮಡಿಕೇರಿ ಕಸಬಾ 38, ನಾಪೋಕ್ಲು 21, ಸಂಪಾಜೆ 86.50, ಭಾಗಮಂಡಲ 62.80, ವಿರಾಜಪೇಟೆ 21.60, ಅಮ್ಮತ್ತಿ 14.50, ಹುದಿಕೇರಿ 28, ಶ್ರೀಮಂಗಲ 24.40, ಪೊನ್ನಂಪೇಟೆ 20, ಬಾಳೆಲೆ 9, ಸೋಮವಾರಪೇಟೆ 25.20, ಶನಿವಾರಸಂತೆ 22, ಶಾಂತಳ್ಳಿ 45, ಕೊಡ್ಲಿಪೇಟೆ 25, ಕುಶಾಲನಗರ 11.20, ಸುಂಟಿಕೊಪ್ಪ 26.20 ಮಿ.ಮೀ.ಮಳೆಯಾಗಿದೆ.