ಹಾವೇರಿ, ಗದಗ ಸೇರಿ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆ

| Published : Mar 25 2025, 12:51 AM IST

ಸಾರಾಂಶ

ರಾಜ್ಯಾದ್ಯಂತ ಸೋಮವಾರವೂ ಮುಂಗಾರು ಪೂರ್ವ ಅಕಾಲಿಕ ಮಳೆ ಹಾವೇರಿ, ಗದಗ, ಚಿಕ್ಕಮಗಳೂರು, ಕೊಡಗು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಧಾರಾಕಾರವಾಗಿ ಸುರಿದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯಾದ್ಯಂತ ಸೋಮವಾರವೂ ಮುಂಗಾರು ಪೂರ್ವ ಅಕಾಲಿಕ ಮಳೆ ಹಾವೇರಿ, ಗದಗ, ಚಿಕ್ಕಮಗಳೂರು, ಕೊಡಗು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಧಾರಾಕಾರವಾಗಿ ಸುರಿದಿದೆ.

ಗದಗ ಜಿಲ್ಲೆಯ ನರಗುಂದ, ಶಿರಹಟ್ಟಿ, ಲಕ್ಷ್ಮೇಶ್ವರ, ಡಂಬಳದಲ್ಲಿ ಸುಮಾರು ಅರ್ಧ ಗಂಟೆ ಕಾಲ ಮಳೆಯಾಗಿದೆ. ಲಕ್ಷ್ಮೇಶ್ವರದಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದಿದೆ. ಹಾವೇರಿ ಜಿಲ್ಲೆಯ ಹಾವೇರಿ, ರಾಣಿಬೆನ್ನೂರು, ಬ್ಯಾಡಗಿ, ಧಾರವಾಡ ಜಿಲ್ಲೆಯ ಧಾರವಾಡ, ಕುಂದಗೋಳದಲ್ಲಿ ಸುಮಾರು 20 ನಿಮಿಷ ಮಳೆಯಾಗಿದ್ದು, ಕೆಲವಡೆ ಆಲಿಕಲ್ಲು ಬಿದ್ದಿವೆ. ಹಾವೇರಿ ಸಮೀಪದ ಕಬ್ಬೂರ ಗ್ರಾಮದ ಸಿದ್ದಪ್ಪ ವಾಲಿಕಾರ್‌ ಅವರ ಮನೆ ಮೇಲೆ ಬೃಹತ್ ಗಾತ್ರದ ನೀಲಗಿರಿ ಮರ ಬಿದ್ದು ಹಾನಿಯಾಗಿದೆ.

ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹಲವೆಡೆ ಸಂಜೆ ಗುಡುಗು, ಮಿಂಚು, ಬಿರುಗಾಳಿ ಸಹಿತ ಭರ್ಜರಿ ಆಲಿಕಲ್ಲು ಮಳೆ 5.30ರಿಂದ 6.30ರವರಗೆ ಸುರಿದಿದೆ. ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ಸೇರಿ ಹಲವು ಕಡೆಗಳಲ್ಲಿ ಸೋಮವಾರ ಸಂಜೆ 4.45 ಗಂಟೆಯಿಂದ ಕೆಲಕಾಲ ಗುಡುಗು, ಮಿಂಚು, ಆಲಿಕಲ್ಲು ಸಹಿತ ಭಾರೀ ಆರ್ಭಟದ ಮಳೆ ಸುರಿದಿದೆ.

ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಹಲವೆಡೆ ಬಿರುಗಾಳಿ, ಗುಡುಗು, ಮಿಂಚು ಸಹಿತ ಭಾನುವಾರ ರಾತ್ರಿ ಸುರಿದ ಮಳೆಗೆ ಹತ್ತಾರು ಮರಗಿಡಗಳು, ವಿದ್ಯುತ್‌ ಕಂಬಗಳು ಮನೆ ಹೆಂಚುಗಳು ಧರೆಗುರುಳಿವೆ. ಇದೇ ರೀತಿ ಗುಬ್ಬಿ ತಾಲೂಕಲ್ಲಿ ಸುರಿದ ಮಳೆಗೆ ನೂರಾರು ಅಡಿಕೆ, ತೆಂಗು ಮರಗಳು ಮುರಿದು ಬಿದ್ದಿವೆ. ಬಾಳೆ ನೆಲಕಚ್ಚಿದೆ.