ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿಕೊಡಗು ಜಿಲ್ಲೆಯ ಹಲವು ಕಡೆಗಳಲ್ಲಿ ಬುಧವಾರವೂ ಧಾರಾಕಾರ ಮಳೆಯಾಗಿದೆ. ಕುಶಾಲನಗರ ತಾಲೂಕಿನ ಕಣಿವೆ, ಹಕ್ಕೆ ತೊರೆನೂರು ವ್ಯಾಪ್ತಿಯಲ್ಲಿ ಭಾರಿ ಮಳೆಯಾಗಿದೆ.ಮಡಿಕೇರಿ ತಾಲೂಕಿನ ನಾಪೋಕ್ಲು, ನೆಲಜಿ ಸುತ್ತಮುತ್ತಲೂ ಆಲಿಕಲ್ಲು ಗುಡುಗು ಸಹಿತ ಕೆಲ ಸಮಯ ಭಾರಿ ಮಳೆ ಸುರಿಯಿತು.ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಹನಿ ಹನಿಯಾಗಿ ಮಳೆಯಾಯಿತು. ಉಳಿದಂತೆ ಜಿಲ್ಲೆಯ ಸೋಮವಾರಪೇಟೆ, ಮೂರ್ನಾಡು, ಸುಂಟಿಕೊಪ್ಪ, ಕಕ್ಕಬೆ, ಕೊಡಗರಹಳ್ಳಿ, ಅಮ್ಮತ್ತಿ, ನಾಲ್ಕೇರಿ, ಕುಂದಚೇರಿ, ಹೊದ್ದೂರು, ಕುಮಟೂರ್, ಪಾಲೂರು, ಕಾನೂರು, ಬೇಂಗೂರು ಚೇರಂಬಾಣೆ, ತಲಕಾವೇರಿ, ಭಾಗಮಂಡಲ ಸೇರಿದಂತೆ ಹಲವು ಕಡೆ ಮಳೆ ಸುರಿಯುತು.
ನಾಪೋಕ್ಲು: ಆಲಿಕಲ್ಲು ಸಹಿತ ಭಾರಿ ಮಳೆನಾಪೋಕ್ಲು ಸುತ್ತಮುತ್ತಲಿನ ಗ್ರಾಮಗಳಲ್ಲಿ ಬುಧವಾರ ಮಧ್ಯಾಹ್ನದ ನಂತರ ಗುಡುಗು, ಆಲಿಕಲ್ಲು ಸಹಿತ ಭಾರಿ ಮಳೆ ಸುರಿದಿದೆ.
ಪಟ್ಟಣ ಸೇರಿದಂತೆ ಬೇತು, ಹಳೆ ತಾಲೂಕು, ಚೇರಂಬಾಣೆ, ಕೊಟ್ಟಮುಡಿ, ಮೂರ್ನಾಡು, ಹೊದ್ದೂರು, ಹೋದವಾಡ, ಎಮ್ಮೆಮಾಡು, ನೆಲಜಿ, ಪಾರಾಣೆ, ಕಡಂಗ, ಕರಡ ವ್ಯಾಪ್ತಿಗಳಲ್ಲಿ ಬಿರುಸಿನ ಮಳೆಯಾಗಿದೆ.ಭಾರಿ ಮಳೆಗೆ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯ ಮೇಲೆ ಮಳೆ ನೀರು ತುಂಬಿ ವಾಹನ ಸಂಚಾರಕ್ಕೆ ದುಸ್ತರವಾಗಿದ್ದು, ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಲವು ಕಡೆಗಳಲ್ಲಿ ಸಣ್ಣ ಪುಟ್ಟ ಮರಗಳು ಬಿದ್ದು ಕಾಫಿ ತೋಟಗಳಿಗೆ ಹಾನಿ ಉಂಟಾಗಿದೆ. ಪಾರಾಣೆ ಸರ್ಕಾರಿ ಪ್ರಾಥಮಿಕ ಶಾಲಾ ಸಮೀಪದಲ್ಲಿದ್ದ ಸುಮಾರು 200 ವರ್ಷದ ಭಾರಿ ಗಾತ್ರದ ಮರ ಉರುಳಿ ಬಿದ್ದಿದ್ದು, ಯಾವುದೇ ಹಾನಿ ಸಂಭವಿಸಿಲ್ಲ.ನಾಪೋಕ್ಲು ನಾಡಕಚೇರಿ ಬಳಿ ನಿಲ್ಲಿಸಿದ್ದ ಸ್ಕೂಟರ್ ಮೇಲೆ ಗಾಳಿ ಮಳೆಗೆ ಬೀಟೆ ಮರವೊಂದು ಉರುಳಿಬಿದ್ದು ಸ್ಕೂಟರ್ ಜಖಂಗೊಂಡಿದೆ.