ಸಾರಾಂಶ
ಉಡುಪಿ ಜಿಲ್ಲಾದ್ಯಂತ ಸೋಮವಾರ ಬಿರುಗಾಳಿ ಮಳೆಯಾಗಿದ್ದು ನಗರದ ಕಡಿಯಾಳಿ ವಾರ್ಡಿನಲ್ಲಿ ಆಲದ ಮರವೊಂದು ಮನೆ ಮೇಲೆ ಉರುಳಿ ಬಿದ್ದು, ಗಂಡ, ಹೆಂಡತಿಗೆ ಗಾಯಗಳಾಗಿವೆ. ಮೂಡಬೆಟ್ಟು ವಾರ್ಡಿನಲ್ಲಿ ಮರವೊಂದು ಬಿದ್ದು 3 ಮನೆಗಳಿಗೆ ಹಾನಿಯಾಗಿದೆ.
ಕನ್ನಡಪ್ರಭ ವಾರ್ತೆ ಉಡುಪಿಉಡುಪಿ ಜಿಲ್ಲೆಯಾದ್ಯಂತ ಸೋಮವಾರ ಸಂಜೆ ಬಿರುಗಾಳಿ ಸಹಿತ ಉತ್ತಮ ಮಳೆಯಾಗಿದೆ. ಹಲವೆಡೆ ಗಾಳಿಮಳೆಗೆ ಮರಗಳು ಉರುಳಿದ್ದು, ವಿದ್ಯುತ್ ಕಂಬಗಳು ಉರುಳಿವೆ, ತಂತಿ ಕಡಿದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.
ಉಡುಪಿ ನಗರದ ಕಡಿಯಾಳಿ ವಾರ್ಡಿನಲ್ಲಿ ಆಲದ ಮರವೊಂದು ಮನೆ ಮೇಲೆ ಉರುಳಿ ಬಿದ್ದು, ಗಂಡ, ಹೆಂಡತಿಗೆ ಗಾಯಗಳಾಗಿವೆ. ಮೂಡಬೆಟ್ಟು ವಾರ್ಡಿನಲ್ಲಿ ಮರವೊಂದು ಬಿದ್ದು 3 ಮನೆಗಳಿಗೆ ಹಾನಿಯಾಗಿದೆ.ಸಂಜೆ 4 ಗಂಟೆ ಸುಮಾರಿಗೆ ಏಕಾಏಕಿ ಮೋಡಕವಿದು, ಗಾಳಿ ಬೀಸಲಾರಂಭಿಸಿತು. ನಂತರ ಗುಡುಗು ಸಹಿತ ಮಳೆಯಾಯತು. ಗಾಳಿಗೆ ಧೂಳು, ತರಗೆಲೆ, ಕಸಕಡ್ಡಿಗಳು ಹಾರಿ, ಕೆಲ ನಿಮಿಷಗಳ ಕಾಲ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಯಿತು.ಕಾರ್ಕಳ, ಮಣಿಪಾಲ, ಹಿರಿಯಡ್ಕ, ಉಡುಪಿ, ಬ್ರಹ್ಮಾವರ, ಶಿರ್ವ, ಕಾಪು ಪರಿಸರದಲ್ಲಿ ವ್ಯಾಪಕ ಗಾಳಿ ಬೀಸಿದ್ದು, ಈ ಭಾಗದಲ್ಲಿ ರಾತ್ರಿಯವರೆಗೂ ವಿದ್ಯುತ್ ಸಂಪರ್ಕ ಕಡಿತವಾಗಿದ್ದು, ಜನ ಪರದಾಡುವಂತಾಯಿತು.ಉಡುಪಿಯ ಕಡಿಯಾಳಿ ವಾರ್ಡಿನ ಕಟ್ಟೆ ಆಚಾರ್ಯ ಮಾರ್ಗದಲ್ಲಿ ಭಾರಿ ಪ್ರಮಾಣದ ಸುಂಟರ ಗಾಳಿಗೆ ಬೃಹತ್ ಗಾತ್ರದ ಅಶ್ವತ್ಥ ಮರ ಮನೆಯ ಮೇಲೆ ಬಿದ್ದು ಪೂರ್ಣ ಪ್ರಮಾಣದ ಹಾನಿಯಾಗಿದ್ದು, ಮನೆಯಲ್ಲಿದ್ದ ರಾಘವೇಂದ್ರ ಭಟ್ ಹಾಗೂ ನೀರಜ ಅವರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಸ್ಥಳಕ್ಕೆ ಭೇಟಿ ನೀಡಿ, ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಸದಸ್ಯರಾದ ಶ್ರೀಶ ಭಟ್, ಗಿರೀಶ್ ಆಂಚನ್ ಮುಂತಾದವರು ಜೊತೆಗಿದ್ದರು.