ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ, ಬಿಸಿಲ ಬೇಗುದಿಗೆ ಬ್ರೇಕ್

| Published : Apr 21 2024, 02:21 AM IST

ಸಾರಾಂಶ

ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಕಡೆ ಬಿರುಗಾಳಿ, ಗುಡುಗು, ಮಿಂಚಿನೊಂದಿಗೆ ಭಾರಿ ಮಳೆ ಸುರಿಯಿತು. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರಗಳಲ್ಲೂ ಬೆಳಗ್ಗೆ ಒಂದು ಗಂಟೆ ಕಾಲ ಬಿರುಗಾಳಿಯೊಂದಿಗೆ ಮಳೆ ಸುರಿಯಿತು. ಗುಡುಗು, ಮಿಂಚುಗಳ ಆರ್ಭಟವೂ ಜೋರಾಗಿತ್ತು.

ಕಾರವಾರ: ಅಂತೂ ಇಂತೂ ಉತ್ತರ ಕನ್ನಡ ಜಿಲ್ಲೆ ಶನಿವಾರ ಮಳೆಯಲ್ಲಿ ನೆನೆಯಿತು. ಜಿಲ್ಲೆಯ ಬಹುತೇಕ ಕಡೆ ಬಿರುಗಾಳಿ, ಗುಡುಗು, ಮಿಂಚಿನೊಂದಿಗೆ ಭಾರಿ ಮಳೆ ಸುರಿಯಿತು. ಬಿರುಗಾಳಿ ಮಳೆಯ ಅಬ್ಬರಕ್ಕೆ ಭಟ್ಕಳದಲ್ಲಿ ಮೀನುಗಾರಿಕೆ ಬೋಟ್ ಮುಳುಗಿತು. ಮೀನುಗಾರರು ಸುರಕ್ಷಿತವಾಗಿ ದಡ ಸೇರಿದರು.ಬಿಸಿಲ ಬೇಗುದಿ, ನೀರಿನ ಅಭಾವದಿಂದ ಕಂಗೆಟ್ಟಿದ್ದ ಜಿಲ್ಲೆಗೆ ಮಳೆ ತಂಪೆರೆಯಿತು. ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ ಸೂರ್ಯನ ದರ್ಶನವೇ ಆಗಲಿಲ್ಲ. ಬೆಳ್ಳಂಬೆಳಗ್ಗೆ ದಟ್ಟ ಮೋಡ ಕವಿದ ವಾತಾವರಣದೊಂದಿಗೆ ಬಿರುಗಾಳಿ ಬೀಸಲಾರಂಭಿಸಿತು. ಗುಡುಗು ಮಿಂಚುಗಳ ಅಬ್ಬರದಿಂದ ಮಳೆ ಸುರಿಯಿತು.ಭಟ್ಕಳದ ಮಾವಿನಕುರ್ವೆ ಮೀನುಗಾರಿಕಾ ಬಂದರು ವ್ಯಾಪ್ತಿಯಲ್ಲಿ ಭಾರಿ ಬಿರುಗಾಳಿ ಮಳೆಯಿಂದ ಮೀನುಗಾರಿಕಾ ಬೋಟ್ ಮುಳುಗಡೆಯಾಯಿತು. ಬೋಟಿನಲ್ಲಿದ್ದ ನಾಲ್ವರು ಮೀನುಗಾರರನ್ನು ಇನ್ನೊಂದು ಬೋಟ್‌ನಲ್ಲಿರುವ ಮೀನುಗಾರರು ರಕ್ಷಿಸಿದರು. ಭಟ್ಕಳದಲ್ಲಿ ಗುಡುಗು, ಮಿಂಚು, ಬಿರುಗಾಳಿಯೊಂದಿಗೆ ಬೆಳಗ್ಗೆ ಒಂದು ಗಂಟೆ ಕಾಲ ಭಾರಿ ಮಳೆ ಸುರಿದಿದೆ. ಗೋಕರ್ಣದಲ್ಲಿ ಮೂರು ತಾಸಿಗೂ ಹೆಚ್ಚುಕಾಲ ಸುರಿದ ಮಳೆಯಿಂದ ರಸ್ತೆಯಲ್ಲಿ ಚರಂಡಿ ನೀರು ಹರಿದು ಕೆಲಕಾಲ ಸಂಚಾರಕ್ಕೆ ಸಮಸ್ಯೆ ಉಂಟಾಯಿತು.

ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರಗಳಲ್ಲೂ ಬೆಳಗ್ಗೆ ಒಂದು ಗಂಟೆ ಕಾಲ ಬಿರುಗಾಳಿಯೊಂದಿಗೆ ಮಳೆ ಸುರಿಯಿತು. ಗುಡುಗು, ಮಿಂಚುಗಳ ಆರ್ಭಟವೂ ಜೋರಾಗಿತ್ತು.ಹಳಿಯಾಳ, ಶಿರಸಿ, ಮುಂಡಗೋಡ, ದಾಂಡೇಲಿ, ಜೋಯಿಡಾ, ಸಿದ್ಧಾಪುರ, ಯಲ್ಲಾಪುರದಲ್ಲೂ ಮಳೆ ಸುರಿದಿದೆ. ಘಟ್ಟದ ಮೇಲಿನ ತಾಲೂಕುಗಳಲ್ಲಿ ಕೆಲವೆಡೆ ಭಾರಿ ಮಳೆಯಾದರೆ, ಕೆಲವೆಡೆ ಸಾಧಾರಣ ಮಳೆ ಸುರಿದಿದೆ.

ಜಿಲ್ಲೆಯ ಕೆಲವೆಡೆ ಕುಡಿಯುವ ನೀರಿಗೆ ತೊಂದರೆ ಎದುರಾಗಿದೆ. ಪ್ರಮುಖ ವಾಣಿಜ್ಯ ಬೆಳೆಯಾದ ಅಡಕೆ ತೋಟ ಕೆಲವೆಡೆ ನೀರಿಲ್ಲದೆ ಒಣಗಲಾರಂಭಿಸಿತ್ತು. ತೆಂಗು, ಬಾಳೆ ಮತ್ತಿತರ ಬೆಳೆಗಳಿಗೂ ನೀರಿನ ಅಭಾವದ ಬಿಸಿ ತಟ್ಟಿತ್ತು. ಈ ಮಳೆಯಿಂದಾಗಿ ಜನತೆ ತುಸು ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ.ಬೆಳಗ್ಗೆ ಹಠಾತ್ತಾಗಿ ಭಾರಿ ಮಳೆ ಸುರಿದ ಕಾರಣ ಜನಜೀವನಕ್ಕೆ ವ್ಯತ್ಯಯ ಉಂಟಾಯಿತು. ಕೆಲವೆಡೆ ಮರದ ರೆಂಬೆ ಕೊಂಬೆಗಳು ವಿದ್ಯುತ್ ತಂತಿಯ ಮೇಲೆ ಎರಗಿದ್ದರಿಂದ ವಿದ್ಯುತ್ ಕೂಡ ಕೈಕೊಟ್ಟಿತು. ಜಿಲ್ಲೆಯಲ್ಲಿ ಎರಡು ದಿನ ಮಳೆಯಾಗುವ ಸಾಧ್ಯತೆಯ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.

ಕುಮಟಾದಲ್ಲಿ ಮನೆ, ಅಂಗಡಿ ಮೇಲೆ ಬಿದ್ದ ಮರ

ಕುಮಟಾ ತಾಲೂಕಿನಾದ್ಯಂತ ಶನಿವಾರ ಬೆಳಗ್ಗೆ ಉತ್ತಮವಾಗಿ ಮಳೆ ಸುರಿದಿದೆ. ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ವಾತಾವರಣ ತಂಪಾಗಿದ್ದರಿಂದ ಸಮಾಧಾನವಾಗಿದೆ. ಮಳೆಯೊಂದಿಗೆ ಜತೆಯಾಗಿ ಬೀಸಿದ ಬಿರುಸಾದ ಗಾಳಿಗೆ ಹಲವೆಡೆ ಮನೆ, ಅಂಗಡಿಗಳ ಮೇಲೆ ಮರಮುರಿದು ಬಿದ್ದು ಹಾನಿಯಾಗಿದೆ.

ಹೆಗಡೆಯ ಶಿವಪುರದ ಪಾರ್ವತಿ ಮಂಜುನಾಥ ಮುಕ್ರಿ ಎಂಬವರ ಮನೆಯ ಗೋಡೆಯು ಭಾಗಶಃ ಕುಸಿದು ಹಾನಿಯಾಗಿದ್ದು, ಅಂದಾಜು ₹೨೦,೦೦೦ ಹಾನಿ ಎಂದು ಪಂಚನಾಮೆ ಮಾಡಲಾಗಿದೆ.

ಬಾಡ ಗ್ರಾಮದ ನೀಲಾ ಬೀರಪ್ಪ ಪಟಗಾರ ಅವರ ಮನೆಯ ಮೇಲೆ ಮಾವಿನ ಮರ ಬಿದ್ದು ಅಂದಾಜು ₹೪೦ ಸಾವಿರ ಹಾನಿಯಾಗಿದೆ. ಹೊಲನಗದ್ದೆಯಲ್ಲಿ ಲಕ್ಷ್ಮೀ ಮಂಜು ಹರಿಕಂತ್ರ ಅವರ ಮನೆಯ ಮೇಲೆ ಮರವೊಂದು ಮುರಿದು ಬಿದ್ದು ಅಂದಾಜು ₹೨೦,೦೦೦ ಹಾನಿಯಾಗಿದೆ.

ಅಳಕೋಡ ಪಂಚಾಯಿತಿ ವ್ಯಾಪ್ತಿಯ ಉಪ್ಪಿನಪಟ್ಟಣದಲ್ಲಿ ಹಿರಿಯ ಪ್ರಾಥಮಿಕ ಶಾಲೆ ಪಕ್ಕದ ಬಸ್ ಪ್ರಯಾಣಿಕರ ತಂಗುದಾಣ ಮತ್ತು ಅನಂತ ಪುಂಡಲೀಕ ಶಾನಭಾಗ ಅವರ ಅಂಗಡಿಯ ಮೇಲೆ ಮರ ಮುರಿದು ಬಿದ್ದ ಘಟನೆಯಲ್ಲಿ ಅಂಗಡಿಗೆ ಹೆಚ್ಚಿನ ಹಾನಿಯಾಗಿದೆ. ಯಾವುದೇ ಘಟನೆಯಲ್ಲೂ ಜನ-ಜಾನುವಾರುಗಳಿಗೆ ಹಾನಿಯಾಗಿಲ್ಲ.

ಪಟ್ಟಣದ ಮುಖ್ಯ ಅಂಚೆಕಚೇರಿ ಬಳಿ ಕಾಲುವೆ ಕಟ್ಟಿಕೊಂಡು ಮಳೆ ನೀರು ಹರಿದು ಹೋಗದೇ ಅಕ್ಕಪಕ್ಕದ ಅಂಗಡಿಗಳಿಗೆ ನೀರು ನುಗ್ಗಿ ಸಮಸ್ಯೆಯಾಗಿತ್ತು. ಉಳಿದಂತೆ ಹಲವೆಡೆ ವಿದ್ಯುತ್ ತಂತಿಗಳ ಮೇಲೆ ಟೊಂಗೆ ಬಿದ್ದು ಕೆಲಕಾಲ ವಿದ್ಯುತ್ ವ್ಯತ್ಯಯಕ್ಕೆ ಕಾರಣವಾಗಿದೆ.

ಭಟ್ಕಳದಲ್ಲಿ ಗುಡುಗು ಮಿಂಚು ಗಾಳಿಯೊಂದಿಗೆ ಭಾರೀ ಮಳೆ

ಭಟ್ಕಳ ತಾಲೂಕಿನಾದ್ಯಂತ ಶನಿವಾರ ಬೆಳಗಿನ ಜಾವ ಭಾರೀ ಗುಡುಗು, ಮಿಂಚು, ಗಾಳಿಯೊಂದಿಗೆ ಮಳೆ ಸುರಿದಿದ್ದು, ಸೆಕೆಯಿಂದಾಗಿ ಬಿಸಿಯಾಗಿದ್ದ ವಾತಾವರಣ ತಂಪಾಗಿಸಿದೆ.

ಕಳೆದ ವಾರ ಸಂಜೆಯ ಸಮಯದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಳೆ ಬಂದಿತ್ತು. ಮಳೆ ಬಂದು ಹೋದ ನಂತರ ಬಿಸಿಲ ತಾಪಮಾನ ಹೆಚ್ಚಾಗಿ ಸೆಕೆ ಜೋರಾಗಿತ್ತು. ಸೆಕೆಯ ಪ್ರಮಾಣ ಹೇಗಿತ್ತೆಂದರೆ ಹಗಲು ಹೊತ್ತಿನಲ್ಲಿ ಮನೆಯಿಂದ ಹೊರಗೆ ಬರುವುದೇ ಬೇಡ ಎನ್ನುವಂತಾಗಿತ್ತು. ಆದರೆ ಶನಿವಾರ ಬೆಳಗಿನ ಜಾವ 6 ಗಂಟೆಗೆ ಭಾರೀ ಗುಡುಗು, ಮಿಂಚು, ಗಾಳಿಯೊಂದಿಗೆ ಆರಂಭವಾದ ಮಳೆ ಒಂದು ತಾಸಿಗೂ ಅಧಿಕ ಕಾಲ ಜೋರಾಗಿ ಸುರಿದಿದೆ. ಬೆಳಗಿನ ಜಾವದ ವ್ಯಾಪಕ ಮಳೆಯಿಂದಾಗಿ ತಾಲೂಕಿನಾದ್ಯಂತ ಶನಿವಾರ ತಂಪಿನ ವಾತಾವರಣ ನಿರ್ಮಾಣವಾಗಿತ್ತು. ಭಾರಿ ಮಳೆಗೆ ಭಟ್ಕಳ ಪಟ್ಟಣದ ವೃತ್ತದಲ್ಲಿ ಮಳೆ ನೀರು ನಿಂತು ಸಂಚಾರಕ್ಕೆ ತೊಂದರೆ ಉಂಟಾಯಿತು. ಬಿರುಬಿಸಿಲಿಗೆ ಬಾವಿ, ಕೆರೆ, ಹಳ್ಳ, ಹೊಳೆಯಲ್ಲಿ ನೀರಿನ ಹರಿವು ಕಡಿಮೆಯಾಗಿ ಒಣಗುವ ಹಂತಕ್ಕೆ ಬಂದಿದ್ದು, ಶನಿವಾರ ಬೆಳಗಿನ ಜಾವದ ವ್ಯಾಪಕ ಮಳೆಯಿಂದಾಗಿ ಎಲ್ಲ ಕಡೆಗಳಲ್ಲಿ ನೀರಿನ ಹರಿವು ಜಾಸ್ತಿಯಾಗಿದೆ. ಮಳೆ ಒಮ್ಮೇಲೆ ಜೋರಾಗಿ ಸುರಿದಿದ್ದರಿಂದ ಗಟಾರ ತುಂಬಿ ತುಳುಕಿ ನೀರು ರಸ್ತೆ ಮೇಲೆ ಹರಿಯುವಂತಾಯಿತು. ಪಟ್ಟಣ ಹಾಗೂ ಗ್ರಾಮಾಂತರ ಭಾಗದಲ್ಲಿ ಗಟಾರ ಹೂಳು ತೆಗೆಯುವ ಕೆಲಸ ಪೂರ್ಣ ಪ್ರಮಾಣದಲ್ಲಿ ಆಗದೇ ಇರುವುದರಿಂದ ಕೆಲವು ಕಡೆ ರಸ್ತೆ ಮೇಲೆ ಕಸ, ಕಡ್ಡಿ, ತ್ಯಾಜ್ಯಗಳು ನೀರಿನೊಂದಿಗೆ ಬಂದು ಬಿದ್ದಿತ್ತು.

ಗ್ರಾಮಾಂತರ ಭಾಗದಲ್ಲಿ ಮಳೆಗಾಲದ ಕೆಲಸಗಳು ಇನ್ನೂ ಆಗಬೇಕಿದೆ. ದಿನದಿಂದ ದಿನಕ್ಕೆ ಬಿಸಿಲ ತಾಪಮಾನ ಹೆಚ್ಚಿದ್ದರಿಂದ ಜನರು ಮಳೆಯ ನಿರೀಕ್ಷೆಯಲ್ಲಿದ್ದರು. ಶನಿವಾರ ಮಳೆ ಸ್ವಲ್ಪ ಮಟ್ಟಿಗಾದರೂ ತಂಪಾಗಿಸಿದೆ. ಕೆಲವು ಕಡೆ ಕುಡಿಯುವ ನೀರಿಗೆ ತತ್ವಾರ ಉಂಟಾಗಿತ್ತು. ಹೊಳೆಯಲ್ಲಿ ನೀರು ಒಣಗಿದ್ದರಿಂದ ತೋಟಗಳು ಒಣಗಲಾರಂಬಿಸಿತ್ತು. ಶನಿವಾರ ಬೆಳಗಿನ ಜಾವ ಸುರಿದ ಮಳೆ ಎಲ್ಲರಿಗೂ ಅನುಕೂಲ ಮಾಡಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.ಬೆಳಗ್ಗೆ ಹೋದ ವಿದ್ಯುತ್ ಮಧ್ಯಾಹ್ನ ಬಂತು!: ಬೆಳಗಿನ ಜಾವ ಹೋಗಿದ್ದ ವಿದ್ಯುತ್ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಬಂದಿತ್ತು. ಕುಮಟಾ-ಹೊನ್ನಾವರದ ಮಧ್ಯೆ ವ್ಯತ್ಯಯ ಉಂಟಾದ ಹಿನ್ನೆಲೆಯಲ್ಲಿ ಇದನ್ನು ರಿಪೇರಿ ಮಾಡಿದ ಆನಂತರ ಜನರು ಬೆಳಕು ಕಂಡರು. ಆರು ತಾಸಿಗೂ ಅಧಿಕ ಕಾಲ ಕರೆಂಟ್ ಇಲ್ಲದೇ ಜನರು ಪರದಾಡುವಂತಾಯಿತು.

ಅಲೆಗಳ ಹೊಡೆತಕ್ಕೆ ಬೋಟು ಮುಳುಗಡೆ: ಐವರ ರಕ್ಷಣೆ

ಭಾರೀ ಗಾಳಿ ಮಳೆಗೆ ಭಟ್ಕಳ ಮಾವಿನಕುರ್ವೆ ವ್ಯಾಪ್ತಿಯ ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಬೋಟೊಂದು ಅಲೆಗಳ ಹೊಡೆತಕ್ಕೆ ಸಿಕ್ಕಿ ಮುಳುಗಿದ್ದು, ಬೋಟಿನಲ್ಲಿದ್ದ 5 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.

ಮಾವಿನಕುರ್ವೆ ಬಂದರಿನ ಮಾದೇವ ಗೋವಿಂದ ಖಾರ್ವಿ ಎನ್ನುವವರಿಗೆ ಸೇರಿದ ಮಹಾಗಣಪತಿ ಎನ್ನುವ ಹೆಸರಿನ ಬೋಟು ಮುಳಗಡೆ ಆಗಿದೆ. ಶನಿವಾರ ಬೆಳಗಿನ ಜಾವದ 5 ಗಂಟೆಗೆ ಭಟ್ಕಳ ಬಂದರಿನಿಂದ ಬೋಟು ಮೀನುಗಾರಿಕೆಗೆ ತೆರಳಿತ್ತು. ಈ ಸಂದರ್ಭದಲ್ಲಿ ಸುರಿದ ಭಾರೀ ಮಳೆ ಹಾಗೂ ಗಾಳಿಯ ರಭಸಕ್ಕೆ ಸಿಕ್ಕಿದ ಬೋಟು ಮುಳುಗುವ ಸಂದರ್ಭದಲ್ಲಿ ಅಲ್ಲಿಯೇ ಮೀನುಗಾರಿಕೆ ಮಾಡುತ್ತಿದ್ದ ಸಚ್ಚಿದಾನಂದ ಬೋಟಿನವರು ಮುಳುಗುತ್ತಿದ್ದ ದೋಣಿಯಲ್ಲಿದ್ದ ಐವರನ್ನು ರಕ್ಷಣೆ ಮಾಡಿ ದಡಕ್ಕೆ ತಂದಿದ್ದಾರೆ.ಬೋಟಿನ ಮಾಲೀಕ ಮಾದೇವ ಗೋವಿಂದ ಖಾರ್ವಿಯ ಜತೆಗೆ ದೋಣಿಯಲ್ಲಿದ್ದ ಶ್ರೀಧರ ನಾರಾಯಣ ಖಾರ್ವಿ, ಮಂಜುನಾಥ ಮಾದೇವ ಖಾರ್ವಿ, ರವಿ ಸುಬ್ಬ ಪೂಜಾರಿ ಹಾಗೂ ಸಾಯಿ ಮೊಂಡಲ ಕೋಲ್ಕತ್ತಾ ಅವರನ್ನು ರಕ್ಷಣೆ ಮಾಡಿ ದಡಕ್ಕೆ ಕರೆತರಲಾಗಿದೆ. ಬೋಟು ಮುಳುಗಡೆ ಆಗಿದ್ದರಿಂದ ಅಪಾರ ಹಾನಿ ಉಂಟಾಗಿದೆ ಎನ್ನಲಾಗಿದೆ.