ಹಾವೇರಿ ಜಿಲ್ಲೆಯ ವಿವಿಧೆಡೆ ತಂಪೆರೆದ ಮಳೆ

| Published : Apr 14 2024, 01:45 AM IST

ಸಾರಾಂಶ

ಬಿರು ಬಿಸಿಲಿನ ಧಗೆಯಿಂದ ಬಸವಳಿದಿದ್ದ ಜಿಲ್ಲೆಯ ಕೆಲ ಭಾಗದಲ್ಲಿ ಮಳೆರಾಯ ತಂಪೆರೆದಿದ್ದಾನೆ. ಯುಗಾದಿ ಬಳಿಕ ವರ್ಷದ ಮೊದಲ ಮಳೆ ಶುಕ್ರವಾರ ರಾತ್ರಿ, ಶನಿವಾರ ಸಂಜೆ ಧಾರಾಕಾರವಾಗಿ ಸುರಿದಿದೆ.

ಹಾವೇರಿ: ಬಿರು ಬಿಸಿಲಿನ ಧಗೆಯಿಂದ ಬಸವಳಿದಿದ್ದ ಜಿಲ್ಲೆಯ ಕೆಲ ಭಾಗದಲ್ಲಿ ಮಳೆರಾಯ ತಂಪೆರೆದಿದ್ದಾನೆ. ಯುಗಾದಿ ಬಳಿಕ ವರ್ಷದ ಮೊದಲ ಮಳೆ ಶುಕ್ರವಾರ ರಾತ್ರಿ, ಶನಿವಾರ ಸಂಜೆ ಧಾರಾಕಾರವಾಗಿ ಸುರಿದಿದೆ.ಹಿರೇಕೆರೂರ, ರಟ್ಟೀಹಳ್ಳಿ ತಾಲೂಕಿನಲ್ಲಿ ಶುಕ್ರವಾರ ಸಂಜೆ ಭಾರೀ ಗಾಳಿಯೊಂದಿಗೆ ಮಳೆ ಬಿದ್ದಿದೆ. ಭಾರೀ ಗಾಳಿಗೆ ಕೆಲ ಮನೆಗಳ ಮೇಲ್ಛಾವಣಿ, ಮನೆಯ ಮುಂಭಾಗದಲ್ಲಿ ತಗಡಿನ ಸೀಟ್‌ಗಳು, ಹೊಲಗಳಲ್ಲಿನ ಶೆಡ್‌ಗಳ ತಗಡಿನ ಸೀಟ್‌ಗಳು ದೂರ, ದೂರ ಹಾರಿ ಬಿದ್ದಿವೆ. ಶನಿವಾರ ಹಿರೇಕೆರೂರ, ರಟ್ಟೀಹಳ್ಳಿ, ಹಾನಗಲ್ಲ ಕೆಲ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಬ್ಯಾಡಗಿ, ರಾಣಿಬೆನ್ನೂರ, ಸವಣೂರು, ಶಿಗ್ಗಾವಿ ಸಾಧಾರಣ ಮಳೆಯಾಗಿದೆ. ಹಾವೇರಿ ತಾಲೂಕಿನ ಕೆಲ ಭಾಗದಲ್ಲಿ ಮಳೆಯಾಗಿದ್ದರೆ, ಕೆಲ ಭಾಗದಲ್ಲಿ ಮಳೆಯಾಗಿಲ್ಲ. ಜಿಲ್ಲೆಯಲ್ಲಿ ಬೆಳಗ್ಗಿನಿಂದಲೂ ಮೋಡ ಕವಿದ ವಾತಾವರಣ ಇದ್ದರೂ ಸೆಕೆ ಹೆಚ್ಚಾಗಿತ್ತು. ಸಂಜೆ ವೇಳೆಗೆ ಒಂದು ತಾಸಿಗೂ ಹೆಚ್ಚು ಕಾಲ ಗುಡುಗು ಸಮೇತ ಮಳೆ ಸುರಿದಿದೆ. ಹೀಗಾಗಿ ಇಳೆ ತಂಪಾಗಿತ್ತು. ಕೆಲ ಭಾಗದಲ್ಲಿ ಕೆರೆಗಳಿಗೆ ನೀರು ಹರಿದು ಬಂದಿದೆ. ಗಾಳಿಯಿಂದಾಗಿ ಮರಗಳು, ವಿದ್ಯುತ್ ವೈರ್‌ಗಳು ಹರಿದು ಬಿದ್ದ ಪರಿಣಾಮ ಜಿಲ್ಲೆಯ ವಿವಿಧೆಡೆ ಕೆಲಕಾಲ ವಿದ್ಯುತ್ ವ್ಯತ್ಯಯ ಉಂಟಾಯಿತು.ಭಾರಿ ಗಾಳಿ ಮಳೆಗೆ ಪಟ್ಟಣದಲ್ಲಿ ೧೦ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ. ವಿದ್ಯುತ್ ಸ್ಥಗಿತದಿಂದ ಸಮಸ್ಯೆಯಾಗಿದೆ. ಪಟ್ಟಣದ ಹೌಸಿಂಗ್ ಬೋರ್ಡ ಕಾಲನಿಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಓಮಿನಿ ವ್ಯಾನ್ ಹಾಗೂ ಬೈಕ್ ಮೇಲೆ ವಿದ್ಯುತ್ ಕಂಬ ಉರಳಿ ಬಿದ್ದು ವಾಹನ ಜಖಂಗೊಂಡಿದೆ. ಬಾಳಂಬೀಡ ಕ್ರಾಸ್ ಹತ್ತಿರದ ರಸ್ತೆಯಲ್ಲಿ ಬಿದಿರು ಪೆಳೆ ರಸ್ತೆಗೆ ಅಡ್ಡವಾಗಿ ಬಿದ್ದು ರಸ್ತೆ ಸಂಪರ್ಕವಿಲ್ಲದೆ ವಿವಿಧ ಗ್ರಾಮಗಳಿಗೆ ತೆರಳಲು ಸಾರ್ವಜನಿಕರು ರಾತ್ರಿಯಿಂದ ಪರದಾಡುವಂತಾಯಿತು. ಬಿರುಗಾಳಿ ಮಳೆ ರಭಸಕ್ಕೆ ತಾಲೂಕಿನ ಅನೇಕ ಗ್ರಾಮಗಳಲ್ಲಿ ಮರಗಳು ನೆಲಕ್ಕುರುಳಿವೆ.