ಭಾರೀ ಮಳೆ: ಕಡಹಿನಬೈಲು ಗ್ರಾಪಂ 3 ಸೇತುವೆ ಜಲಾವೃತ

| Published : Jul 26 2024, 01:39 AM IST

ಸಾರಾಂಶ

ನರಸಿಂಹರಾಜಪುರ, ತಾಲೂಕಿನಲ್ಲಿ ಗುರುವಾರ ರಾತ್ರಿಯಿಂದ ಶುಕ್ರವಾರ ಸಂಜೆಯವರೆಗೂ ಸುರಿದ ಭಾರೀ ಮಳೆಗೆ ತಾಲೂಕಿನ ಕಡಹಿನಬೈಲು ಗ್ರಾಮ ಪಂಚಾಯಿತಿಗೆ ಸೇರಿದ 3 ಸೇತುವೆಗಳು ನೀರಿನಲ್ಲಿ ಮುಳುಗಿದ್ದು ಗ್ರಾಮಸ್ಥರು 5 ಕಿ.ಮೀ.ಸುತ್ತುವರಿದು ಪ್ರಯಾಣಿಸ ಬೇಕಾಯಿತು.

- 5 ಕಿ.ಮೀ.ಸುತ್ತಿಕೊಂಡ ಗ್ರಾಮಸ್ಥರ ಪ್ರಯಾಣ । ಅಲ್ಲಲ್ಲಿ ಗೋಡೆ ಕುಸಿತ । ಗಾಳಿಗೆ ಅಡಕೆ ಮರ ಧರೆಗೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ತಾಲೂಕಿನಲ್ಲಿ ಗುರುವಾರ ರಾತ್ರಿಯಿಂದ ಶುಕ್ರವಾರ ಸಂಜೆಯವರೆಗೂ ಸುರಿದ ಭಾರೀ ಮಳೆಗೆ ತಾಲೂಕಿನ ಕಡಹಿನಬೈಲು ಗ್ರಾಮ ಪಂಚಾಯಿತಿಗೆ ಸೇರಿದ 3 ಸೇತುವೆಗಳು ನೀರಿನಲ್ಲಿ ಮುಳುಗಿದ್ದು ಗ್ರಾಮಸ್ಥರು 5 ಕಿ.ಮೀ.ಸುತ್ತುವರಿದು ಪ್ರಯಾಣಿಸ ಬೇಕಾಯಿತು.

ಶೆಟ್ಟಿಕೊಪ್ಪದ ಮುಖ್ಯ ರಸ್ತೆಯಿಂದ ನೇರ್ಲೆಕೊಪ್ಪ, ಆಲಂದೂರು ಸಂಪರ್ಕ ಸೇತುವೆ ಮೇಲೆ 5 ಅಡಿ ನೀರು ಹರಿಯುತ್ತಿದೆ. ಶೆಟ್ಟಿಕೊಪ್ಪದ ಮುಖ್ಯ ರಸ್ತೆಯಿಂದ ಭೀಮನರಿ- ಚನ್ನಮಣಿ ಸಂಪರ್ಕದ ಚನ್ನಮಣಿ ಸೇತುವೆ ಮೇಲೂ ನೀರು ಹರಿಯುತ್ತಿದೆ. ಮುಖ್ಯ ರಸ್ತೆಯಿಂದ ಗಾಂಧಿ ಗ್ರಾಮ, ಮಡಬೂರು ಎಸ್ಟೇಟ್‌ ಸಂಪರ್ಕಿಸುವ ಸೇತುವೆ ಮೇಲೂ ನೀರು ನಿಂತಿದ್ದು ಗ್ರಾಮಸ್ಥರು 5 ಕಿ.ಮಿ.ಸುತ್ತು ಬಳಸಿ ಬಣಗಿ-ಮಳಲಿ-ಮಾವಿನಕೆರೆ, ಆಲಂದೂರು, ಗಾಂಧಿ ಗ್ರಾಮದ ಮಾರ್ಗವಾಗಿ ಸಂಚರಿಸಿದರು.

ಸೇತುವೆ ಮೇಲೆ ನೀರು ಹರಿಯುತ್ತಿರುವುದರಿಂದ ಸೇತುವೆ ಅಕ್ಕ ಪಕ್ಕದ ರೈತರ ಭತ್ತದ ಗದ್ದೆ, ಅಡಕೆ ತೋಟಗಳು ಜಲಾವೃತವಾದ ಪ್ರದೇಶಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೈಲಾ ಮಹೇಶ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗಾಳಿ, ಮಳೆಗೆ ಅಡಕೆ, ರಬ್ಬರ್‌ ಬಾಳೆ ತೋಟಗಳು ನೆಲಕಚ್ಚಿವೆ. ಕಡಹಿನಬೈಲು ಗ್ರಾಮದ ಎಂ.ಟಿ.ಕುಮಾರ್‌ ಎಂಬುವರ 1.50 ಎಕರೆ ಅಡಕೆ ತೋಟದಲ್ಲಿ 30ಕ್ಕೂ ಹೆಚ್ಚು ಅಡಕೆ ಮರ ಉರುಳಿ ಬಿದ್ದಿದೆ. ನೇರ್ಲೆಕೊಪ್ಪ, ಕರುಗುಂದ, ಬಾಳೆಕೊಪ್ಪ, ಸೂಸಲವಾನಿ , ಮಾಕೋಡು, ಶೆಟ್ಟಿಕೊಪ್ಪದಲ್ಲಿ ರೈತರು ಬೆಳೆದ ಬಾಳೆ ತೋಟ, ರಬ್ಬರ್‌ ತೋಟ ನಾಶವಾಗಿದೆ.

ಕುಸಿದ ರಸ್ತೆ:

ಸೀತೂರು ಗ್ರಾಪಂ ವ್ಯಾಪ್ತಿಯ ಬೆಮ್ಮನೆ ಸುಮೀಪದ ಜಾಲ, ಕಾರ್ಕೋಡ್ಲು, ಹೆಮ್ಮೂರು, ಕೊಡಗಿನಬೈಲು, ದೋಣಿಸರ ಕಣಿಬೈಲು, ಹಾತೂರು ಸಂಪರ್ಕಿಸುವ ರಸ್ತೆ ಜಾಲ ಎಂಬಲ್ಲಿ ಹಳ್ಳಕ್ಕೆ ಕುಸಿದಿದೆ. ರಸ್ತೆಯ ಅರ್ಧ ಭಾಗ ಉಳಿದಿದ್ದು ಇನ್ನೂ ಕುಸಿತ ಕಂಡರೆ ಸಂಪರ್ಕ ಬಂದ್‌ ಆಗಲಿದೆ.

ಗಡಿಗೇಶ್ವರ ಸರ್ಕಾರಿ ಪ್ರೌಢ ಶಾಲೆ ಅಡುಗೆ ಮನೆಯ ಮೇಲೆ 2ನೇ ಬಾರಿ ಮರ ಉರುಳಿ ಬಿದ್ದಿದೆ. ಕಳೆದ 2 ದಿನದ ಹಿಂದೆ ಮರ ಉರುಳಿ ಕಟ್ಟಡಕ್ಕೆ ಹಾನಿಯಾಗಿತ್ತು. ನರಸಿಂಹರಾಜಪುರ ಪಟ್ಟಣದ ನಾಗರತ್ನ ಎಂಬುವರ ಮನೆ ಮಳೆಯಿಂದ ಕುಸಿದಿದೆ. ಪಟ್ಟಣದ 1 ನೇ ವಾರ್ಡಿನಲ್ಲಿ ಮಹಮ್ಮದ್‌ ರಫೀಕ್‌ ಎಂಬುವರ ಮನೆ ಗೋಡೆ ಕುಸಿದು, ಉಳಿದ ಗೋಡೆ ಬಿರುಕು ಬಿಟ್ಟಿದೆ.ಇದೇ ವಾರ್ಡಿನಲ್ಲಿ ರಂಗೇಗೌಡ್ರು ಎಂಬುವರ ಮನೆ ಗೋಡೆ ಬಿದ್ದಿದೆ.

ಸಿಂಪರಣೆಗೆ ತೊಂದರೆ: ಮಳೆ,ಗಾಳಿ ಮುಂದುವರಿಯುತ್ತಿರುವುದರಿಂದ ಅಡಕೆ ತೋಟಗಳಿಗೆ ಕೊಳೆ ರೋಗ ಬಾರದಂತೆ ಬೋರ್ಡೋ ಮಿಶ್ರಣ ಸಿಂಪರಣೆಗೆ ತೊಂದರೆಯಾಗುತ್ತಿದೆ. ಮಳೆ ಜೊತೆ ಗಾಳಿ ಬೀಸುತ್ತಿರುವುದರಿಂದ ಅಲ್ಲಲ್ಲಿ ರಸ್ತೆಗಳಲ್ಲಿ ಮರದ ಗೆಲ್ಲುಗಳು ಉರುಳಿ ಬೀಳುತ್ತಿದೆ. ಅಡಕೆ ತೋಟಗಳಲ್ಲಿ ಗಾಳಿಯಿಂದ ಅಡಕೆ ಮರಗಳು ಸಿಗಿದು ಬೀಳುತ್ತಿದೆ. ಜೊತೆಗೆ ಅಡಕೆ ಮರಗಳು ಪರಸ್ಪರ ಡಿಕ್ಕಿಯಾಗಿ ಅಡಕೆ ಕಾಯಿ ಉರುಳುತ್ತಿದೆ.