ಸಾರಾಂಶ
ಕಾವೇರಿ ಜಲಾನಯನ ಪ್ರದೇಶಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು ಈ ಹಿನ್ನೆಲೆಯಲ್ಲಿ ಕುಶಾಲನಗರ ಭಾಗದಲ್ಲಿ ಕಾವೇರಿ ನದಿ ಉಕ್ಕಿ ಹರಿಯುವ ಮೂಲಕ ತಗ್ಗು ಪ್ರದೇಶದ ಬಡಾವಣೆಗಳು ಮಂಗಳವಾರ ಮತ್ತೆ ಜಲಾವೃತಗೊಂಡಿವೆ. ಪಟ್ಟಣದ ಸಾಯಿ ಬಡಾವಣೆ ಸಂಜೆ ವೇಳೆಗೆ ಜಲಾವೃತಗೊಂಡಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಮೂರನೇ ಬಾರಿ ಕುಶಾಲನಗರ ಪಟ್ಟಣ ಪ್ರವಾಹಕ್ಕೆ ತುತ್ತಾಗುತ್ತಿದೆ.
ಕನ್ನಡಪ್ರಭ ವಾರ್ತೆ ಕುಶಾಲನಗರ
ಕಾವೇರಿ ಜಲಾನಯನ ಪ್ರದೇಶಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು ಈ ಹಿನ್ನೆಲೆಯಲ್ಲಿ ಕುಶಾಲನಗರ ಭಾಗದಲ್ಲಿ ಕಾವೇರಿ ನದಿ ಉಕ್ಕಿ ಹರಿಯುವ ಮೂಲಕ ತಗ್ಗು ಪ್ರದೇಶದ ಬಡಾವಣೆಗಳು ಮಂಗಳವಾರ ಮತ್ತೆ ಜಲಾವೃತಗೊಂಡಿವೆ.ಪಟ್ಟಣದ ಸಾಯಿ ಬಡಾವಣೆ ಸಂಜೆ ವೇಳೆಗೆ ಜಲಾವೃತಗೊಂಡಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಮೂರನೇ ಬಾರಿ ಕುಶಾಲನಗರ ಪಟ್ಟಣ ಪ್ರವಾಹಕ್ಕೆ ತುತ್ತಾಗುತ್ತಿದೆ. ಪಟ್ಟಣದ ಸಾಯಿ ಬಡಾವಣೆಯ10ಕ್ಕೂ ಅಧಿಕ ಮನೆಗಳ ನಿವಾಸಿಗಳು ಸ್ಥಳಾಂತರಗೊಂಡಿದ್ದಾರೆ.
ಕಾವೇರಿ ಮತ್ತು ಹಾರಂಗಿ ಜಲಾನಯನ ಪ್ರದೇಶಗಳಲ್ಲಿ ವ್ಯಾಪಕ ಮಳೆ ಸುರಿಯುತ್ತಿದ್ದು ಈ ಹಿನ್ನೆಲೆಯಲ್ಲಿ ಹಾರಂಗಿ ಜಲಾಶಯದಿಂದ ಹೆಚ್ಚುವರಿ ನೀರು ನದಿಗೆ ಬಿಟ್ಟ ಹಿನ್ನೆಲೆಯಲ್ಲಿ ಕಾವೇರಿ ನೀರಿನ ಹರಿವಿಗೆ ತೊಡಕುಂಟಾಗಿ ಹಿನ್ನೀರು ತಗ್ಗು ಪ್ರದೇಶದ ಬಡಾವಣೆಗಳಿಗೆ ನುಗ್ಗಿದೆ. ಇದರಿಂದಾಗಿ, ಪಟ್ಟಣದ ಸಾಯಿ ಬಡಾವಣೆ ಇಂದಿರಾ ಬಡಾವಣೆ, ದಂಡಿನಪೇಟೆ ಮತ್ತು ಸಮೀಪದ ಕೊಪ್ಪ ವ್ಯಾಪ್ತಿಯ ತಗ್ಗು ಪ್ರದೇಶದ ಮನೆಗಳು ಜಲಾವೃತಗೊಳ್ಳಲು ಕಾರಣವಾಗಿದೆ. ಹಾರಂಗಿ ಜಲಾಶಯದಿಂದ ಹೆಚ್ಚುವರಿ ನೀರು ನದಿಗೆ ಹರಿಸಿದ ಕಾರಣ ಏಕಾಏಕಿ ಜಲಾವೃತಗೊಂಡ ಬಡಾವಣೆಗಳಿಂದ ನಾಗರಿಕರು ಬಹುತೇಕ ಸ್ಥಳಾಂತರ ಗೊಂಡಿದ್ದಾರೆ.ಕುಶಾಲನಗರ ಪುರಸಭೆಯ ಅಧಿಕಾರಿ, ಸಿಬ್ಬಂದಿ, ಪೌರಕಾರ್ಮಿಕರು ಹಾಗೂ ಕುಶಾಲನಗರ ಪಟ್ಟಣ ಠಾಣಾಧಿಕಾರಿ ಚಂದ್ರಶೇಖರ್ ಮತ್ತು ಸಿಬ್ಬಂದಿ ಆಯಕ್ಕಟ್ಟಿನ ಪ್ರದೇಶಗಳಿಗೆ ತೆರಳಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡರು.
ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಎರಡು ಭಾಗಗಳ ತಗ್ಗು ಪ್ರದೇಶ ಸಂಪೂರ್ಣ ಜಲಾವೃತಗೊಂಡಿದ್ದ ದೃಶ್ಯ ಕಂಡುಬಂದಿತ್ತು. ಈ ಭಾಗದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.ಶಾಸಕ ಪರಿಶೀಲನೆ:
ಮಡಿಕೇರಿ ಶಾಸಕ ಡಾ ಮಂತರ್ ಗೌಡ ಕುಶಾಲನಗರ-ಕೊಪ್ಪ ಗಡಿಭಾಗದ ಕಾವೇರಿ ನದಿ ಸೇತುವೆ ಬಳಿ ಭೇಟಿ ನೀಡಿ ಪ್ರವಾಹದ ಬಗ್ಗೆ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು. ಹಾರಂಗಿ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ರಘುಪತಿ, ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ, ಅಣೆಕಟ್ಟು ಉಸ್ತುವಾರಿ ಅಧಿಕಾರಿ ಸಿದ್ದರಾಜು ಹೆಚ್ಚಿನ ಅನಾಹುತ ಸಂಭವಿಸದಂತೆ ಹಾರಂಗಿ ಅಣೆಕಟ್ಟಿನ ನೀರು ಬಿಡುಗಡೆ ನಿರ್ವಹಣೆಯಲ್ಲಿ ಕ್ರಮ ಕೈಗೊಂಡಿದ್ದಾರೆ.ಬೆಳಗಿನಿಂದ ಹಾರಂಗಿ ಜಲಾಶಯದಿಂದ 28,000 ಕ್ಯುಸೆಕ್ ಪ್ರಮಾಣದ ಹೆಚ್ಚುವರಿ ನೀರನ್ನು ನದಿಗೆ ಬಿಡಲಾಯಿತು. ಸಂಜೆ ವೇಳೆಗೆ ಅಣೆಕಟ್ಟೆಯಿಂದ ನದಿಗೆ ಬಿಡುವ ನೀರಿನ ಪ್ರಮಾಣ ಇಳಿಕೆ ಮಾಡಲಾಗಿದೆ. ಸಂಜೆ 6 ಗಂಟೆಯಿಂದ 18000 ಕ್ಯೂಸೆಕ್ ಪ್ರಮಾಣದ ಹೆಚ್ಚುವರಿ ನೀರು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹಾರಂಗಿ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ಕೆ ಕೆ ರಘುಪತಿ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.