ಸಾರಾಂಶ
Heavy rains: MLA Allamprabhu Patil expresses concern over farmers' plight
ಕನ್ನಡಪ್ರಭ ವಾರ್ತೆ ಕಲಬುರಗಿ : ಕಳೆದ 2 ವಾರದಿಂದ ಸತತ ಮಳೆ ಸುರಿದು ಉಂಟಾದ ಅತಿವೃಷ್ಟಿ ವಿಕೋಪದಲ್ಲಿ ತೊಗರಿ, ಹೆಸರು, ಉದ್ದು, ಸೂರ್ಯಕಾಂತಿ ಸೇರಿದಂತೆ ಹಣ ತರುವ ಹಲವಾರು ಬೆಳೆ ಹಾನಿಯಾಗಿರುವ ಹೊಲಗದ್ದೆಗಳಿಗೆ
ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಶನಿವಾರ ಶಾಸಕರು ಪಟ್ಟಣ, ಭೀಮಳ್ಳಿ, ಮೇಳಕುಂದಾ, ಸಾವಳಗಿ ಗ್ರಾಮಗಳ ಅನೇಕ ರೈತರ ಹೊಲಗದ್ದೆಗಳಿಗೆ ಭೇಟಿ ನೀಡಿದರು. ಮಳೆಯಿಂದಾಗಿ ಕೊಳೆತಿರುವ ತೊಗರಿ ಫಸಲು, ಕಾಳು ಮೊಳಕೆಯಾಗುತ್ತಿರುವ ಹೆಸರು, ಉದ್ದು, ಸೂರ್ಯಕಾಂತಿ ಸೇರಿದಂತೆ ಅನೇಕ ಬೆಳೆಗಳ ಹಾನಿ ಖುದ್ದು ಕಂಡು ರೈತರಿಗೆ ಒದಗಿರುವ ಕೆಟ್ಟ ಸ್ಥಿತಿಗೆ ಮರುಗಿದರು.
ಅತಿವೃಷ್ಟಿಯಿಂದ ಉಂಟಾದ ಬೆಳೆ ಹಾನಿ ಅನುಭವಿಸಿರುವ ಅನೇಕ ರೈತರೊಂದಿಗೆ ಮಾತನಾಡಿದ ಶಾಸಕರು ಅವರ ಸಂಕಷ್ಟಕ್ಕೆ ಕಿವಿಯಾದರು.ಸುರಿದ ನಿರಂತರ ಮಳೆಯಿಂದಾಗಿ ಹೆಸರು, ಉದ್ದು, ತೊಗರಿ ಸೇರಿದಂತೆ ಮುಂಗಾರು ಬೆಳೆಗಳು ನಾಶವಾದ ಕಾರಣ ಸಂಕಷ್ಟಕ್ಕೆ ಸಿಲುಕಿದ್ದೇವೆ. ಪರಿಹಾರ ನೀಡುವಂತೆ ರೈತರು ಶಾಸಕರಿಗೆ ಕೋರಿದರು. ಬೆಳೆ ಹಾನಿಗೆ ಸರ್ಕಾರದಿಂದ ಸೂಕ್ತ ಪರಿಹಾರ ದೊರಕುವಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಶಾಸಕರು, ಸಂಕಷ್ಟದಲ್ಲಿರುವ ರೈತರಿಗೆ ಧೈರ್ಯ ತುಂಬಿದರು.
ತಹಶೀಲ್ದಾರ ಆನಂದ ಶೀವಂತ್, ಕೃಷಿ ಇಲಾಖೆ ಅಧಿಕಾರಿ ಅರುಣ ಪಾಟೀಲ್, ಮುಖಂಡರಾದ ಇಸ್ಮಯಿಲ್, ರೈತ ಜೀವಣಗಿ ಚಂದ್ರಕಾಂತ್, ಸಂತೋಷ ಪಾಟೀಲ್ ದಣ್ಣೂರ, ರಮೇಶ ಕನಗೊಂಡ ಸಾವಳಗಿ, ಭೀಮಳ್ಳಿಯ ನೀಲಕಂಠ , ಬಸವರಾಜ ಸೇರಿದಂತೆ ಕಾಂಗ್ರೇಸ್ ಮುಖಂಡರು, ಅಧಿಕಾರಿಗಳು ಗ್ರಾಮಸ್ಥರು ಇದ್ದರು.ಫೋಟೋ- ಅಲ್ಲಂಪ್ರಭು 1, 2 ಮತ್ತು 3