ಸಾರಾಂಶ
ತಗ್ಗು ಪ್ರದೇಶದಲ್ಲಿರುವ ವಸತಿ ಪ್ರದೇಶಗಳಲ್ಲಿ ನೀರು ನುಗ್ಗಿ ಆವಾಂತರ ಸೃಷ್ಟಿ
ಕನ್ನಡಪ್ರಭ ವಾರ್ತೆ ಬೆಳಗಾವಿ
ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಬೆಳಗಾವಿ ಜಿಲ್ಲೆಯ ಜನತೆಗೆ ಶನಿವಾರ ಸಂಜೆ ಸುರಿದ ಅಬ್ಬರದ ಮಳೆ ತಂಪೇರಿಯಿತು. ಸಂಜೆ 4 ಗಂಟೆ ಸುಮಾರಿಗೆ ಗಡುಗು, ಮಿಂಚಿನ ಆರ್ಭಟದೊಂದಿಗೆ ಅಬ್ಬರದ ಮಳೆ ಸುರಿಯಿತು. ಇದರಿಂದಾಗಿ ಜನಜೀವನ ಅಸ್ತವ್ಯಸ್ತವಾಯಿತು. ಒಂದು ಗಂಟೆ ಕಾಲ ಬಿಟ್ಟು ಬಿಡದೇ ಮಳೆ ಸುರಿಯಿತು. ರಸ್ತೆಯ ಇಕ್ಕೆಲಗಳಲ್ಲಿ ಮಳೆ ನೀರು ತುಂಬಿ ಹರಿಯಿತು. ರಸ್ತೆಗಳೆಲ್ಲವೂ ನದಿಯಂತೆ ಭಾಸವಾದವು. ಇನ್ನು ತಗ್ಗು ಪ್ರದೇಶದಲ್ಲಿರುವ ವಸತಿ ಪ್ರದೇಶಗಳಲ್ಲಿ ನೀರು ನುಗ್ಗಿ ಆವಾಂತರ ಸೃಷ್ಟಿಯಾಯಿತು.ತಮ್ಮ ಮನೆಯೊಳಗೆ ನುಗ್ಗಿದ ನೀರನ್ನು ಹೊರ ತೆಗೆಯಲು ಜನರು ಹರಸಾಹಸ ಮಾಡಬೇಕಾಯಿತು. ಗಾಳಿ ಮಳೆಗೆ ಅಲ್ಲಲ್ಲಿ ಮರಗಳು, ವಿದ್ಯುತ್ ಕಂಬಗಳು ಧರೆಗುಳಿದಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ನಗರದ ಪಾಂಗೋಳ ಗಲ್ಲಿ, ಬೆಂಡಿ ಬಜಾರ್ ಪ್ರದೇಶಗಳಲ್ಲಿ ಚರಂಡಿಯಲ್ಲಿ ಮಳೆ ನೀರು ಸರಾಗವಾಗಿ ಹರಿಯದೇ ಇರುವುದರಿಂದ ನೀರು ಮನೆಗೊಳಗೆ ನುಗ್ಗಿತ್ತು. ರಸ್ತೆಯ ಮೇಲೆಯೇ ನೀರು ಹರಿದಿದ್ದರಿಂದ ಜನರು ಓಡಾಡಲು ತೀವ್ರ ತೊಂದರೆ ಎದುರಿಸಬೇಕಾಯಿತು. ಕೋಟೆ ಕೆರೆ ಬಳಿಯಿರುವ ಹಣ್ಣಿನ ಮಾರುಕಟ್ಟೆ ಪ್ರದೇಶದಲ್ಲಿಯೂ ನೀರು ತುಂಬಿ ಹರಿಯಿತು.
ಬೆಳಗಾವಿಯಲ್ಲಿ ಶಿವಾಜಿ ಜಯಂತಿ ಹಿನ್ನೆಲೆಯಲ್ಲಿ ಹೊರಡಿಸಲಾಗಿದ್ದ ಶಿವಾಜಿ ಮಹಾರಾಜರ ರೂಪಕ ವಾಹನಗಳ ಮೆರವಣಿಗೆಗೂ ಮಳೆ ಅಡ್ಡಿಯಾಯಿತು. ಮಾರ್ಚ್ ತಿಂಗಳಿಂದಲೇ ಬಿಸಿಲಿನ ಪ್ರಖರತೆ ಹೆಚ್ಚಾಗಿತ್ತು. ಜಿಲ್ಲೆಯ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗಿತ್ತು. ಜನರು ಬಿಸಿಲಿನ ಬೇಗೆಯಿಂದ ಬಸವಳಿದಿದ್ದರು. ಶನಿವಾರ ಸುರಿದ ಅಬ್ಬರದ ಮಳೆಯಿಂದಾಗಿ ನಗರದಲ್ಲಿ ತಂಪಿನ ವಾತಾವರಣ ನಿರ್ಮಾಣವಾಗಿದೆ. ಮಳೆ ಸುರಿದಿದ್ದರಿಂದ ಕೃಷಿಕರಲ್ಲಿ ಮಂದ ಹಾಸ ಮೂಡಿದಂತಾಗಿದೆ.