ಮುಂಗಾರಿ ಬೆಳೆಗಳಿಗೆ ಕಂಟಕವಾದ ಅತಿವೃಷ್ಟಿ!

| Published : Sep 03 2025, 01:01 AM IST

ಸಾರಾಂಶ

ಅತಿವೃಷ್ಟಿಯಿಂದಾಗಿ ಗದಗ, ಹಾವೇರಿ, ಧಾರವಾಡ ಜಿಲ್ಲೆಗಳಲ್ಲಿ ಮುಂಗಾರಿ ಬೆಳೆಗಳಾದ ಹೆಸರು, ಶೇಂಗಾ, ಗೋವಿನಜೋಳ, ಸೋಯಾಬಿನ್‌, ಉದ್ದು, ಮೆಣಸಿನಕಾಯಿ, ಹತ್ತಿ, ಈರುಳ್ಳಿ ಹೀಗೆ ತರಹೇವಾರಿ ಬೆಳೆಗಳು ಬಹುತೇಕ ನಾಶವಾಗಿದೆ.

ಶಿವಾನಂದ ಅಂಗಡಿ

ಹುಬ್ಬಳ್ಳಿ: ಆಗಸ್ಟ್‌ ಮೊದಲ ವಾರದಿಂದ ಎರಡ್ಮೂರು ವಾರಗಳ ಕಾಲ ನಿರಂತರ ಮಳೆಯಿಂದಾಗಿ ಮುಂಗಾರು ಹಂಗಾಮಿನ ಹೆಸರು ಉತ್ಪಾದನೆಗೆ ತೀವ್ರ ಹೊಡೆತ ಬಿದ್ದಿದ್ದು, ತೋಟಗಾರಿಕೆ ಬೆಳೆಗಳಾದ ಈರುಳ್ಳಿ, ಬೆಳ್ಳುಳ್ಳಿ ಬೆಳೆ ನಾಶವಾಗಿ ರೈತರು ತೀವ್ರ ನಷ್ಟ ಅನುಭವಿಸಿದ್ದಾರೆ.

ಗದಗ, ಹಾವೇರಿ, ಧಾರವಾಡ ಜಿಲ್ಲೆಗಳಲ್ಲಿ ಮುಂಗಾರಿ ಬೆಳೆಗಳಾದ ಹೆಸರು, ಶೇಂಗಾ, ಗೋವಿನಜೋಳ, ಸೋಯಾಬಿನ್‌, ಉದ್ದು, ಮೆಣಸಿನಕಾಯಿ, ಹತ್ತಿ, ಈರುಳ್ಳಿ ಹೀಗೆ ತರಹೇವಾರಿ ಬೆಳೆಗಳು ಬಹುತೇಕ ನಾಶವಾಗಿದೆ.

ಸದ್ಯ ಹೆಸರು ಹಂಗಾಮು ಜೋರಾಗಿ ನಡೆಯುತ್ತಿರುವುದರಿಂದ ಹೆಸರು ಉತ್ಪಾದನೆಗೆ ಹೊಡೆತ ಬಿದ್ದಿರುವುದು ಸ್ಪಷ್ಪವಾಗಿ ಗೋಚರವಾಗುತ್ತಿದೆ. ಆಗಸ್ಟ್‌ನಲ್ಲಿ ಹೆಸರು ಹಂಗಾಮು ಶುರುವಾಗಿದ್ದು, ಈ ತಿಂಗಳ ಪೂರ್ತಿ ಗದಗ ಎಪಿಎಂಸಿಎಂಗೆ 85,167 ಕ್ವಿಂಟಲ್‌ ಹೆಸರು ಆವಕವಾಗಿದೆ. 2024ರ ಇದೇ ಆಗಸ್ಟ್‌ನಲ್ಲಿ 2,84,253 ಕ್ವಿಂಟಲ್‌ ಹೆಸರು ಆವಕವಾಗಿದ್ದು, ಇಳುವರಿ ಜತೆಗೆ ಉತ್ಪಾದನೆಗೂ ಹೊಡೆತ ಬಿದ್ದಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ.

ಹೆಸರು ಬೆಳೆಯಲ್ಲಿ ಗದಗ ಜಿಲ್ಲೆ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದ್ದು, ಇಲ್ಲಿಯ ಲಕ್ಷ್ಮೇಶ್ವರ ಎಪಿಎಂಸಿಗೆ 11,692 ಕ್ವಿಂಟಲ್‌ ಆವಕವಾಗಿದೆ. ಕಳೆದ ಬಾರಿ 46,906 ಕ್ವಿಂಟಲ್‌ ಆವಕವಾಗಿತ್ತು. ರೋಣದಲ್ಲಿ ಕಳೆದ ಬಾರಿ 20,970 ಕ್ವಿಂಟಲ್‌, ಈ ಬಾರಿ 3829 ಕ್ವಿಂಟಲ್‌ ಮಾತ್ರ ಆವಕವಾಗಿದೆ. ಮುಂಡರಗಿ ಎಪಿಎಂಸಿಯಲ್ಲಿ ಗೋವಿನಜೋಳದ ವಹಿವಾಟು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತದೆ. ನರಗುಂದ ತಾಲೂಕಿನಲ್ಲಿಯೂ ಹೆಚ್ಚು ಹೆಚ್ಚು ಹೆಸರು ಬೆಳೆಯಲಾಗುತ್ತಿದ್ದು, ಈ ಬಾರಿ ಇಳುವರಿ ತೀವ್ರವಾಗಿ ಕುಸಿತಗೊಂಡಿದೆ.

ಈ ಬಾರಿ ಗದಗ ಜಿಲ್ಲೆಯಲ್ಲಿ 1,23,956 ಹೆಕ್ಟೇರ್‌ ಪ್ರದೇಶದಲ್ಲಿ ಹೆಸರು ಬಿತ್ತನೆಯಾಗಿದೆ. ಹೀಗಾಗಿ ಬಹುಸಂಖ್ಯಾತ ರೈತರು ಹೆಸರು ಬೆಳೆಯನ್ನು ನಂಬಿಕೊಂಡಿದ್ದರು.

ಎಪಿಎಂಸಿಗೂ ಆವಕ ಕುಸಿತ: ಹುಬ್ಬಳ್ಳಿ ಎಪಿಎಂಸಿಗೆ ಕಳೆದ ಆಗಸ್ಟ್‌ನಲ್ಲಿ 6088 ಕ್ವಿಂಟಲ್‌ ಹೆಸರು ಆವಕವಾಗಿದೆ. 2024ರ ಇದೇ ಅವಧಿಯಲ್ಲಿ 35,687 ಕ್ವಿಂಟಲ್‌ ಹೆಸರು ಆವಕವಾಗಿದೆ. ಧಾರವಾಡ ಜಿಲ್ಲೆಯಲ್ಲಿ 97,406 ಹೆಕ್ಟೇರ್‌ನಲ್ಲಿ ಹೆಸರು ಬಿತ್ತನೆಯಾಗಿದೆ.

2024ರಲ್ಲಿ 94,956 ಹೆಕ್ಟೇರ್‌ ಹೆಸರು ಬಿತ್ತನೆಯಾಗಿತ್ತು. ಈ ಬಾರಿ ಕಳೆದ ವರ್ಷಕ್ಕಿಂತ 2450ಕ್ಕೂ ಹೆಚ್ಚು ಹೆಕ್ಟೇರ್‌ ಕ್ಷೇತ್ರದಲ್ಲಿ ಹೆಸರು ಬಿತ್ತನೆಯಾಗಿದ್ದರೂ ಪ್ರಮುಖ ಮಾರುಕಟ್ಟೆಯಾಗಿರುವ ಹುಬ್ಬಳ್ಳಿಗೆ ಆವಕ ತೀವ್ರವಾಗಿ ಕುಸಿತ ಕಂಡಿದೆ.

ಪಲ್ಲೆಕ್‌ ಹೆಸರ ಕಾಳ ಇಲ್ಲ: ಮಳೆ ಬಹಳ ಆಗಿ ಹೆಸರು ಉತ್ಪಾದನೆ ತೀವ್ರವಾಗಿ ಕುಸಿದಿದೆ. ಎಕರೆಗೆ 50 ಕಿಲೋದಿಂದ ಕ್ವಿಂಟಲ್‌ ವರೆಗೆ ಮಾತ್ರ ಬೆಳೆ ಬಂದಿದೆ. ಅದರಲ್ಲೂ ಆಗಸ್ಟ್‌ ಮಳೆಯಿಂದಾಗಿ ಹೆಸರು ಕಪ್ಪಾಗಿದ್ದು, ವರ್ಷದುದ್ದಕ್ಕೂ ಮನೆಯಲ್ಲಿ ಇಟ್ಟುಕೊಂಡು ಪಲ್ಲೆ ಮಾಡಾಕ್‌ ಕಾಳ ಇಲ್ದಂಗ್ ಆಗೈತಿ, ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಹಿಂಗಾರಿ ಬಿತ್ತನೆಗೆ ಬೀಜ, ಗೊಬ್ಬರ ಖರೀದಿಸಲು ಹಣವೇ ಇಲ್ಲದಾಗಿದೆ. ಆದ್ದರಿಂದ ಜಿಲ್ಲಾಡಳಿತ ಬೆಳೆಹಾನಿ ಅನುಭವಿಸಿದ ಎಲ್ಲ ರೈತರಿಗೆ ಎಕರೆಗೆ ಕನಿಷ್ಠ 30 ಸಾವಿರ ರು. ಪರಿಹಾರ ನೀಡಬೇಕು, ರೈತರ ಸಂಪೂರ್ಣ ನಷ್ಟ ಭರಿಸಲು ಸಾಧ್ಯವಿಲ್ಲ. ಈ ಪರಿಹಾರದಿಂದ ಹಿಂಗಾರಿ ಬಿತ್ತನೆಗೆ ಅನುಕೂಲ ಆಗುವುದು ಎಂದು ಗದಗ ಜಿಲ್ಲಾ ರೈತ ಸಂಘದ ಅಧ್ಯಕ್ಷ (ವಿ.ಆರ್‌. ನಾರಾಯಣರೆಡ್ಡಿ ಬಣ)ದ ಯಲ್ಲಪ್ಪ ಎಚ್‌. ಬಾಬರಿ ಆಗ್ರಹಿಸಿದ್ದಾರೆ.

''''ಮೊದಲು ಮಳಿ ಇಲ್ಲದಕ್‌ ಬೆಳಿ ಬರಲಿಲ್ಲ. ಆಮೇಲೆ ರೋಗ ಬಾಧೆ ಇನ್ನಿಲ್ಲದಂತೆ ಕಾಡಿತು. ಬಳಿಕ ಆಗಸ್ಟ್‌ನಲ್ಲಿ ಮೂರು ವಾರ ಕಾಲ ಮಳೆ ನಿರಂತರ ಸುರಿಯಿತು, ಕಟಾವ್‌ ಮಷಿನ್‌ ಹೊಲಕ್‌ ಹೋಗಾಕ್‌ ಬಿಡಲಿಲ್ಲ, ಹಿಂಗಾದರ ನಷ್ಟ ಸಹಿಸುವುದಾದರೂ ಹೇಗೆ? ಎಂದು ರೈತರು ಕಣ್ಣೀರಾಗುತ್ತಾರೆ.

ಮಳೆಗೆ ಸಿಲುಕಿ ಕಪ್ಪಾದ ಹೆಸರು ಹುಬ್ಬಳ್ಳಿ ಎಪಿಎಂಸಿಗೆ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದೆ. ಖರೀದಿದಾರರು ಸಹ ಬರೀ 2 ಸಾವಿರದಿಂದ 3 ಸಾವಿರ ಕೇಳಾಕತ್ತಾರ. ಎಕರೆಗೆ ಕ್ವಿಂಟಲ್ ಸಹಿತ ಇಳುವರಿ ಬಂದಿಲ್ಲ. ಹಿಂಗಾಗಿ ಈ ಸಲ ಖರ್ಚು ಮಾಡಿದ ರೊಕ್ಕಾ ಬರೋದ್ ಕಠಿಣ ಐತಿ, ಜತೆಗೆ ಹಿಂಗಾರಿ ಹೆಂಗ್ ಬಿತ್ ಬೇಕ್ ತಿಳಿವಲ್ದಾಗೈತಿ ಎಂದು ಬಂಡಿವಾಡದ ರೈತ ನಿಂಗಪ್ಪ ಬಾರಕೇರ ಹೇಳಿದರು.

ಧಾರವಾಡ ಜಿಲ್ಲಾದ್ಯಂತ ಆಗಸ್ಟ್ ತಿಂಗಳಲ್ಲಿ ಸುರಿದ ಮಳೆಯಿಂದ ತೀವ್ರ ಹಾನಿಯಾಗಿದ್ದು, ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆಯಿಂದ ಸಮೀಕ್ಷೆ ಮಾಡಿ ಜಿಲ್ಲಾಧಿಕಾರಿ ಕಚೇರಿಗೆ ವರದಿ ಸಲ್ಲಿಸಿದ್ದೇವೆ. ಹೆಸರು, ಉದ್ದು, ತೋಟಗಾರಿಕೆ ಬೆಳೆಗಳಾದ ಈರುಳ್ಳಿ, ಬೆಳ್ಳೂಳ್ಳಿ ಬೆಳೆಗೆ ಹಾನಿಯಾಗಿರುವುದು ಸಮೀಕ್ಷೆಯ ಕಾಲಕ್ಕೆ ಕಂಡು ಬಂದಿದೆ ಎಂದು ಧಾರವಾಡ ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಹೇಳಿದರು.