ಮಳೆ ಬಿರುಸು: ಭತ್ತ ನಾಟಿ ಕಾರ್ಯ ಚುರುಕು

| Published : Jul 28 2025, 12:30 AM IST

ಸಾರಾಂಶ

ಜಿಲ್ಲೆಯಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಉತ್ತಮವಾಗಿ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆ ಬಿರುಸುಗೊಂಡಿದೆ. ಈಗಾಗಲೇ ಮೆಕ್ಕೆಜೋಳ ಬಿತ್ತನೆ ಮಾಡಿರುವ ರೈತರು ಈಗ ಭತ್ತ ನಾಟಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಉತ್ತಮವಾಗಿ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆ ಬಿರುಸುಗೊಂಡಿದೆ. ಈಗಾಗಲೇ ಮೆಕ್ಕೆಜೋಳ ಬಿತ್ತನೆ ಮಾಡಿರುವ ರೈತರು ಈಗ ಭತ್ತ ನಾಟಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 77556 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ನಾಟಿ ಗುರಿಯನ್ನು ಹೊಂದಲಾಗಿದ್ದು, ಕಳೆದ ವಾರ ಕೊಂಚ ಮಳೆ ತಗ್ಗಿದ್ದರಿಂದ ಜಿಲ್ಲೆಯ ಕೆಲವೆಡೆ ಈಗಗಾಲೇ ಬಿತ್ತನೆ ಕಾರ್ಯ ಮುಗಿದಿದೆ. ಈವರೆಗೆ 24015 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ನಾಟಿ ಕಾರ್ಯ ಪೂರ್ಣಗೊಂಡಿದೆ. ಸದ್ಯ ಜಿಲ್ಲೆಯಲ್ಲಿ ನಿರಂತವಾಗಿ ಮಳೆಯಾಗುತ್ತಿರುವ ಕಾರಣ ಭತ್ತ ನಾಟಿಗೆ ಕೊಂಚ ಹಿನ್ನಡೆಯಾಗಿದ್ದು, ಇನ್ನೂ 53 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ನಾಟಿ ಬಾಕಿ ಉಳಿದಿದೆ. ಬಹುಪಾಲು ಕೃಷಿಕರು ಭತ್ತದ ಸಸಿ ಮಡಿಗಳನ್ನು ಸಿದ್ಧಗೊಳಿಸಿ ಇಟ್ಟುಕೊಂಡಿದ್ದು, ಕೆಲ ದಿನಗಳಲ್ಲಿ ನಾಟಿ ಕಾರ್ಯ ಶುರುಮಾಡಲಿದ್ದಾರೆ. ಸೊರಬದಲ್ಲಿ 12560, ಸಾಗರದಲ್ಲಿ 6980 ಹೆಕ್ಟೇರ್‌ ಪ್ರದೇಶದಲ್ಲಿ ನಾಟಿ ಕಾರ್ಯ ಪೂರ್ಣಗೊಂಡಿದ್ದು, ಶೇ.50ರಷ್ಟು ನಾಟಿ ಕಾರ್ಯ ಮುಗಿದಿದೆ. ಶಿವಮೊಗ್ಗದಲ್ಲಿ 1850 ಹೆಕ್ಟೇರ್‌, ಭದ್ರಾವತಿಯಲ್ಲಿ 600, ತೀರ್ಥಹಳ್ಳಿಯಲ್ಲಿ 75, ಹೊಸನಗರದಲ್ಲಿ 1950 ಹೆಕ್ಟೇರ್‌ ಪ್ರದೇಶದಲ್ಲಿ ನಾಟಿ ಕಾರ್ಯ ಮುಗಿದಿದ್ದು, ಶಿಕಾರಿಪುರದಲ್ಲಿ ಇನ್ನೂ ನಾಟಿ ಕಾರ್ಯ ಶುರುವಾಗಿಲ್ಲ. ತೀರ್ಥಹಳ್ಳಿ ಹಾಗೂ ಸಾಗರ ತಾಲೂಕುಗಳಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಅಂಜನಾಪುರ ಹಾಗೂ ಅಂಬ್ಲಿಗೊಳ ಜಲಾಶಯಗಳು ಭರ್ತಿಯಾಗಿವೆ. ಇದರಿಂದ ಭತ್ತ ಬೆಳೆಯಲು ಅನುಕೂಲವಾಗಿದ್ದು, ಅಚ್ಚುಕಟ್ಟು ಭಾಗದ ರೈತರು ಇದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ. ಶಿವಮೊಗ್ಗ ತಾಲೂಕು ವ್ಯಾಪ್ತಿಯಲ್ಲಿ ಕೆಲವು ರೈತರು ನಾಟಿ ಕಾರ್ಯ ಮುಗಿಸಿದ್ದಾರೆ. ‘ಜಿಲ್ಲೆಯ ರೈತರು ಹಿಂದೆಲ್ಲಾ ಜಯ, ಜ್ಯೋತಿ, ಸಹ್ಯಾದ್ರಿ ಭತ್ತದ ತಳಿಗಳನ್ನು ಹೆಚ್ಚಾಗಿ ಬೆಳೆಯುತ್ತಿದ್ದರು. ಈ ಬಾರಿ ಅಭಿಲಾಷ ತಳಿಯ ಭತ್ತ ಬೆಳೆಯಲು ಹೆಚ್ಚು ಆಸಕ್ತಿ ತೋರಿದ್ದಾರೆ. ಈ ಬಾರಿ 1,500 ಕ್ವಿಂಟಲ್ ಅಭಿಲಾಷ ಭತ್ತದ ತಳಿಯ ಬೀಜವನ್ನು ಇಲಾಖೆಯಿಂದ ರೈತರಿಗೆ ವಿತರಿಸಲಾಗಿದೆ. ಜತೆಗೆ ‘1001,’ ‘1110’ ತಳಿಯ ಬಿತ್ತನೆ ಬೀಜವನ್ನು ರೈತರು ಹೆಚ್ಚಾಗಿ ಖರೀದಿಸಿದ್ದಾರೆ’ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ನಾಟಿಗೆ ಸಿದ್ಧತೆ ಜೋರು: ರೈತರು ಭತ್ತದ ನಾಟಿಗಾಗಿ ವಾರದ ಮುನ್ನವೇ ಬದುಗಳನ್ನು ಕಡಿದು, ಅವುಗಳಿಗೆ ಮಣ್ಣು ಕೊಟ್ಟು ಸಿದ್ಧಪಡಿಸಿಟ್ಟುಕೊಂಡಿದ್ದಾರೆ. ನಾಟಿ ಕಾರ್ಯದ ಹಿಂದಿನ ದಿನ ಸಸಿ ಕೀಳುವ ಮೂಲಕ ನಿಯಮಿತವಾಗಿ ಕಟ್ಟುಗಳನ್ನು ಕಟ್ಟಿ ಮೆದೆಗಳ ಲೆಕ್ಕದಲ್ಲಿ ಎತ್ತಿಟ್ಟುಕೊಳ್ಳುತ್ತಾರೆ.ನಾಟಿ ಕಾರ್ಯಕ್ಕೆ ಗದ್ದೆ ಸಿದ್ಧಪಡಿಸಲು ಈ ಹಿಂದೆ ಎತ್ತು– ಕೋಣಗಳನ್ನು ಬಳಸುತ್ತಿದ್ದರು. ಈಗ ಟ್ರ್ಯಾಕ್ಟರ್, ಟಿಲ್ಲರ್‌ಗಳು ಗದ್ದೆಯನ್ನು ಹದಗೊಳಿಸುತ್ತವೆ. ನಂತರ ಎತ್ತುಗಳ (ನಳ್ಳಿ) ಸಹಾಯದಿಂದ ಗದ್ದೆಯ ಮಣ್ಣನ್ನು ಸಮತಟ್ಟು ಮಾಡಿ ಗೊಬ್ಬರ, ಕಳೆನಾಶಕ ಹಾಕಿ ಸಸಿ ನೆಡಲಾಗುತ್ತದೆ.

ಕೃಷಿ ಕಾರ್ಮಿಕರ ಸಮಸ್ಯೆ:ಮಹಿಳೆಯರು ತಂಡ ಮಾಡಿಕೊಂಡು ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗಿ ನಾಟಿ ಮಾಡುವುದು ವಾಡಿಕೆ. ಈ ತಂಡಗಳಲ್ಲಿ ಅನುಭವಿ ಮಹಿಳೆಯರನ್ನು ಹೊರತುಪಡಿಸಿದರೆ ಹೊಸ ತಲೆಮಾರಿನವರು ಹುಡುಕಿದರೂ ಸಿಗುವುದಿಲ್ಲ. ಕೃಷಿ ಕಾರ್ಮಿಕರ ಅಲಭ್ಯತೆಯ ಈ ಹೊತ್ತಿನಲ್ಲಿ ಎಲ್ಲರೂ ಒಂದೇ ಬಾರಿಗೆ ಭತ್ತ ನಾಟಿ ಮಾಡುತ್ತಿರುವುದರಿಂದಾಗಿ ಕಾರ್ಮಿಕರ ಸಮಸ್ಯೆ ಎದುರಾಗಿದೆ.

ನ್ಯಾನೋ ಯೂರಿಯಾ ಬಳಕೆ ಮಾಡಿ

ಶಿವಮೊಗ್ಗ: ಶಿವಮೊಗ್ಗ ತಾಲ್ಲೂಕಿನಾದ್ಯಂತ ಜುಲೈ ತಿಂಗಳಿನಲ್ಲಿ ಸತತವಾಗಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ರೈತರು ಯೂರಿಯಾ ರಸಗೊಬ್ಬರಕ್ಕೆ ಪರ್ಯಾಯವಾಗಿ ನ್ಯಾನೋ ಯೂರಿಯಾ ಬಳಕೆ ಮಾಡಲು ಕೃಷಿ ಇಲಾಖೆ ಸಲಹೆ ನೀಡಿದೆ.

ಈ ಬಾರಿ ವಾಡಿಕೆಗಿಂತ ಮಳೆ ಪ್ರಮಾಣ ಕಡಿಮೆ ಆಗಿದ್ದರೂ ಸತತವಾಗಿ ಪ್ರತಿದಿನ ಮಳೆ ಆಗುತ್ತಿರುವುದರಿಂದ ಯೂರಿಯಾ ಮೇಲುಗೊಬ್ಬರ ನೀಡುವುದು, ಎಡೆ ಕುಂಟೆ ಹೊಡೆಯುವುದು, ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಲು ತುಂಬಾ ತೊಂದರೆ ಉಂಟಾಗಿದೆ.

ಈ ನಿಟ್ಟಿನಲ್ಲಿ ರೈತರು ಶಿಫಾರಸ್ಸಿಗಿಂತ ಅತಿ ಹೆಚ್ಚು ಯೂರಿಯಾ ರಸಗೊಬ್ಬರವನ್ನು ಮಳೆಯಲ್ಲಿಯೇ ಅಥವಾ ಕೊಂಚ ಮಳೆ ಕಡಿಮೆಯಾದಾಗ ಕೊಡುತ್ತಿರುವುದು ಗಮನಕ್ಕೆ ಬಂದಿರುತ್ತದೆ. ಈ ಹಂತದಲ್ಲಿ ಸಾರಜನಕ ಕೊರತೆ ಕಂಡುಬಂದರೂ ಯೂರಿಯಾ ರಸಗೊಬ್ಬರವನ್ನು ಸರಿಯಾಗಿ ಮಣ್ಣಿನಲ್ಲಿ ಸೇರಿಸಲು ಸಾಧ್ಯವಿರದ ಕಾರಣ ಬೆಳೆಗಳು ಶೀತದಿಂದ ಬೇರುಗಳ ಬೆಳವಣಿಗೆ ಕುಂಠಿತವಾಗಿ ಗಿಡಗಳ ಬೆಳವಣಿಗೆಯೂ ಕುಂಠಿತವಾಗಿ ಇಳುವರಿ ಮೇಲೆ ಹೆಚ್ಚಿನ ಪ್ರಭಾವ ಬೀರಲಿದೆ.

ಆದ್ದರಿಂದ ರೈತರು 4 ರಿಂದ 5 ತಾಸು ಮಳೆ ಕಡಿಮೆ ಅದಾಗ ಯೂರಿಯಾ ರಸಗೊಬ್ಬರವನ್ನು ಕೊಡುವ ಬದಲಾಗಿ ನ್ಯಾನೋ ಯೂರಿಯಾ (ಶೇ.20 ಸಾರಜನಕ )-500ಮಿಲಿ ಬಾಟಲಿನಲ್ಲಿ ಲಭ್ಯವಿದ್ದು, (225 ದರ ರು.) ಅಥವಾ ನ್ಯಾನೋ ಡಿಎಪಿ (ಶೇ.8 ಸಾರಜನಕ ಮತ್ತು ಶೇ.16 ರಂಜಕ)-500 ಮಿಲಿ ಬಾಟಲಿನಲ್ಲಿ ಲಭ್ಯವಿರುವ (600 ರು.) ದ್ರವ ರೂಪದ ಸಾರಜನಕವನ್ನು ಪ್ರತಿ ಲೀಟರ್ ನೀರಿಗೆ 3 ರಿಂದ 5 ಮಿಲಿ ಬೆರೆಸಿ ಸಿಂಪಡಿಸಲು ಕೋರಿದೆ.

ಈ ದ್ರವ ಗೊಬ್ಬರವನ್ನು 30 ರಿಂದ 35 ದಿನಗಳು ಮೊದಲನೇ ಹಂತ ಮತ್ತು 50 ರಿಂದ 60 ದಿನಗಳಲ್ಲಿ ಸಿಂಪಡಿಸುವುದರಿಂದ ಪೋಷಕಾಂಶಗಳ ಸದ್ಬಳಕೆಯಾಗಿ ಉತ್ತಮ ಬೆಳೆ ಬೆಳವಣಿಗೆ ಮತ್ತು ಉತ್ತಮ ಇಳುವರಿ ಸಾಧ್ಯವಾಗುತ್ತದೆ. ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿಎಪಿ ಅಧಿಕ ಹರಡುವಿಕೆ ಸಾಮರ್ಥ್ಯ ಹೊಂದಿರುವುದರಿಂದ ಇವುಗಳನ್ನು ಇತರೆ ಕೀಟನಾಶಕ, ಶಿಲೀಂಧ್ರನಾಶಕ ಮತ್ತು ನೀರಿನಲ್ಲಿ ಕರಗುವ ರಸಗೊಬ್ಬರಗಳೊಂದಿಗೆ ಸೇರಿಸಿ ಸಿಂಪರಣೆ ಮಾಡಬಹುದಾಗಿದೆ. ಮೇಲು ಗೊಬ್ಬರವಾಗಿ ಬಳಸುವ ಯೂರಿಯಾ ಚೀಲವನ್ನು ಶೇ.50 ರಷ್ಟು ಕಡಿಮೆ ಮಾಡಬಹುದಾಗಿದೆ ಎಂದು ಶಿವಮೊಗ್ಗ ತಾಲೂಕು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.