ಶೃಂಗೇರಿ ತಾಲೂಕಿನಾದ್ಯಂತ ಪುಷ್ಯ ಮಳೆ ಶುಕ್ರವಾರ ಹಗಲು ರಾತ್ರಿಯಿಡೀ ಅಬ್ಬರಿಸಿದ ಪರಿಣಾಮ ಶನಿವಾರ ತುಂಗಾನದಿಯಲ್ಲಿ ಪ್ರವಾಹ ಉಂಟಾಗಿ ಶೃಂಗೇರಿ ಸಂಪರ್ಕಿಸುವ ಹಲವು ರಸ್ತೆಗಳು ಪ್ರವಾಹಕ್ಕೆ ಸಿಲುಕಿವೆ.

-ಕಪ್ಪೆ ಶಂಕರ ದೇಗುಲ ಸಹಿತ ಶೃಂಗೇರಿ ಸಂಪರ್ಕ ಹಲವು ರಸ್ತೆಗಳು ಜಲಾವೃತ,ಸಂಪರ್ಕ ಕಡಿತ,ಜನಜೀವನ ಅಸ್ತವ್ಯಸ್ತ

ಕನ್ನಡಪ್ರಭ ವಾರ್ತೆ , ಶೃಂಗೇರಿ

ತಾಲೂಕಿನಾದ್ಯಂತ ಪುಷ್ಯ ಮಳೆ ಶುಕ್ರವಾರ ಹಗಲು ರಾತ್ರಿಯಿಡೀ ಅಬ್ಬರಿಸಿದ ಪರಿಣಾಮ ಶನಿವಾರ ತುಂಗಾನದಿಯಲ್ಲಿ ಪ್ರವಾಹ ಉಂಟಾಗಿ ಶೃಂಗೇರಿ ಸಂಪರ್ಕಿಸುವ ಹಲವು ರಸ್ತೆಗಳು ಪ್ರವಾಹಕ್ಕೆ ಸಿಲುಕಿವೆ.

ಶುಕ್ರವಾರ ರಾತ್ರಿಯಿಂದಲೇ ತಗ್ಗು ಪ್ರದೇಶಗಳು ಜಲಾವೃತಗೊಂಡು ಗ್ರಾಮೀಣ ಪ್ರದೇಶಗಳಲ್ಲಿ ಹಳ್ಳ,ನದಿಯ ನೀರು ಹೆಚ್ಚಳವಾಗಿ ರಸ್ತೆ ಸಂಪರ್ಕ ಕಡಿತಗೊಂಡಿದ್ದ ರಿಂದ ಜನಜೀವನ ಅಸ್ತವ್ಯಸ್ತ ಗೊಂಡಿತ್ತು.

ಶನಿವಾರ ಬೆಳಗಿನವರೆಗೂ ಭಾರೀ ಮಳೆ ಅಬ್ಬರಿಸಿ ಶೃಂಗೇರಿ ವಿದ್ಯಾರಣ್ಯಪುರ ಸಂಪರ್ಕ ರಸ್ತೆ,ಶೃಂಗೇರಿ ಭಾರತೀ ಬೀದಿ ಕೆವಿಆರ್ ಸಂಪರ್ಕ ರಸ್ತೆ,ನೆಮ್ಮಾರು ಹೊಳೆಹದ್ದು ತೂಗು ಸೇತುವೆ,ಕುರುಬಗೇರಿ ಮೆಣಸೆ ಸಂಪರ್ಕ ರಸ್ತೆ ಮೇಲೆ ನೀರು ಹರಿಯುತ್ತಿದ್ದರಿಂದ ರಸ್ತೆ ಸಂಪರ್ಕ ಕಡಿತಗೊಂಡಿತ್ತು.

ಶುಕ್ರವಾರ ಸಂಜೆಯಿಂದಲೇ ತುಂಗಾ ನದಿಯಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯಲಾರಂಭಿಸಿದ ಪರಿಣಾಮ ಶೃಂಗೇರಿ ಕೆವಿಆರ್ ವೃತ್ತ, ಮೆಣಸೆ ಜಯಪುರ ಸಂಪರ್ಕ ಪ್ಯಾರಲಾಲ್ ಬೈಪಾಸ್ ರಸ್ತೆ ಜಲಾವೃತಗೊಂಡು ರಾತ್ರಿಯಿಂದಲೇ ರಸ್ತೆ ಸಂಪರ್ಕ ಕಡಿತಗೊಂಡಿತು. ಶ್ರೀ ಮಠದ ತುಂಗಾ ನದಿ ತೀರದಲ್ಲಿರುವ ಕಪ್ಪೆಶಂಕರ ದೇಗುಲ ಸಂಪೂರ್ಣ ಮುಳುಗಡೆಯಾಯಿತು. ಶ್ರೀ ಮಠದ ನರಸಿಂಹವನದ ತುಂಗಾ ನದಿ ತೀರದ ಸಂದ್ಯಾವಂದನ ಮಂಟಪಕ್ಕೂ ಪ್ರವಾಹ ನುಗ್ಗಿತು.

ತಡರಾತ್ರಿವರೆಗೂ ಪ್ರವಾಹ ಹೆಚ್ಚಳವಾಗಿ ಶೃಂಗೇರಿ ವಿದ್ಯಾರಣ್ಯ ಸಂಪರ್ಕ ರಸ್ತೆ ಮೇಲೆ ಪ್ರವಾಹ ಹರಿದು ಸಂಪರ್ಕ ಕಡಿತಗೊಂಡಿತು. ಪಟ್ಟಣದ ಜನನಿಬಿಡ ಕುರುಬಗೇರಿಗೂ ನೀರು ನುಗ್ಗಿ ರಸ್ತೆ ಸಂಪರ್ಕ ಕಡಿತಗೊಂಡಿತು. ಕೆಲ ಮನೆ,ಅಂಗಡಿಗಳಿಗೂ ಪ್ರವಾಹದ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿತು.ತುಂಗಾನದಿ ಉಗಮ ಸ್ಥಾನವಾದ ಪಶ್ಚಿಮಘಟ್ಟಗಳ ತಪ್ಪಲು ಕೆರೆಕಟ್ಟೆ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಕೆರೆಕಟ್ಟೆ, ನೆಮ್ಮಾರು ಪ್ರದೇಶಗಳಲ್ಲಿ ತುಂಗಾನದಿ ದಡದ ತಗ್ಗು ಪ್ರದೇಶಗಳು, ನೆಮ್ಮಾರು ಹೊಳೆಹದ್ದು ಸಂಪರ್ಕ ತೂಗುಸೇತುವೆ ಅರ್ಧ ಮುಳುಗಡೆಯಾಗಿದೆ.

ಮಳೆಯ ಅಬ್ಬರಕ್ಕೆ ಗುಡ್ಡಕುಸಿತ ಹಾನಿ: ರಾತ್ರಿಯಿಡೀ ಎಡಬಿಡದೆ ಸುರಿದ ಸತತ ಮಳೆಗೆ ತಾಲೂಕಿನ ವಿವಿಧೆಡೆ ಗುಡ್ಡ, ಭೂಕುಸಿತ ಮುಂದುವರಿದಿದೆ. ಪಟ್ಟಣದ ಕುರುಬಗೇರಿಯಲ್ಲಿ ಪ್ರದೀಪ್ ಎಂಬುವವರ ಮನೆ ಸಮೀಪ ಗುಡ್ಡಕುಸಿದು ಮನೆಯ ಮೇಲೆ ಬಿದ್ದಿದ್ದು ಮನೆ ಸ್ವಲ್ಪ ಜಖಂಗೊಂಡಿದೆ. ಬಾವಿಯ ಮೇಲೆ ಬಿದ್ದು ಹಾನಿಯಾಗಿದೆ.ರಾಷ್ಟ್ರಿಯ ಹೆದ್ದಾರಿ 169 ರ ಆನೆಗುಂದ,ತ್ಯಾವಣ,ನೆಮ್ಮಾರು ಸಾಲ್ಮರ ಬಳಿ ರಸ್ತೆಯಂಚಿನಲ್ಲಿ ಗುಡ್ಡಕುಸಿಯಲಾರಂಬಿಸಿದೆ.

ಭಾರಿ ಮಳೆಯಾಗುತ್ತಿರುವುದರಿಂದ ಅಂಗನವಾಡಿ,ಪ್ರಾಥಮಿಕ ಶಾಲೆಗಳಿಗೆ ರಜೆ ನೀಡಲಾಗಿತ್ತು.ಆದರೆ ಪ್ರೌಡಶಾಲೆಗಳಿಗೆ , ಕಾಲೇಜುಗಳಿಗೆ ರಜೆ ಇರಲಿಲ್ಲ.

1 ಶ್ರೀ ಚಿತ್ರ 1-ಶೃಂಗೇರಿ ಪ್ರವಾಹ ತುಂಬಿ ಹರಿಯುತ್ತಿರುವ ತುಂಗಾ ನದಿ.

1 ಶ್ರೀ ಚಿತ್ರ 2-ಶೃಂಗೇರಿ ವಿದ್ಯಾರಣ್ಯಪುರ ಸಂಪರ್ಕ ರಸ್ತೆ ತುಂಗಾ ಪ್ರವಾಹದಿಂದ ಸಂಪರ್ಕ ಕಡಿತಗೊಂಡಿರುವುದು.

1 ಶ್ರೀ ಚಿತ್ರ 3 ಶೃಂಗೇರಿ ಭಾರತೀ ಬೀದಿ ಕುರುಬಗೇರಿ ಸಂಪರ್ಕ ಬೈಪಾಸ್ ರಸ್ತೆ ಜಲಾವೃತಗೊಂಡಿರುವುದು.

1 ಶ್ರೀ ಚಿತ್ರ 4-ಶೃಂಗೇರಿ ಕುರುಬಗೇರಿ ಮೆಣಸೆ ರಸ್ತೆ ಮೇಲೆ ತುಂಗಾನದಿ ಪ್ರವಾಹ ಹರಿಯುತ್ತಿರುವುದು.

1 ಶ್ರೀ ಚಿತ್ರ 5-ಶೃಂಗೇರಿ ಕುರುಬಗೇರಿ ಪ್ರದೇಶದಲ್ಲಿ ಅಂಗಡಿ,ಮನೆಗಳಿಗೆ ತುಂಗಾ ನದಿಯ ಪ್ರವಾಹ ನುಗ್ಗಿರುವುದು.