ಹಬ್ಬದ ಖುಷಿ ಕಸಿದ ಅತಿವೃಷ್ಟಿ!

| Published : Oct 21 2025, 01:00 AM IST

ಸಾರಾಂಶ

ವಿವಿಧ ಬೆಳೆ ಹಾನಿಯಾಗಿದ್ದರಿಂದ ಈರುಳ್ಳಿ ಬೆಲೆಯಾದರೂ ನಮ್ಮನ್ನು ಆರ್ಥಿಕ ನಷ್ಟದಿಂದ ಪಾರು ಮಾಡುತ್ತದೆ ಎಂದು ಕನಸು ಕಂಡಿದ್ದ ರೈತರ ಕಣ್ಣನಲ್ಲಿ ನೀರು ತರಿಸಿದೆ. ಉತ್ತಮ ಇಳುವರಿ ಬಂದಿದ್ದರೂ ಭರ್ಜರಿ ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ದರ ಕುಸಿತ ಆಘಾತ ನೀಡಿದೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ:

ರೈತರ ಹಣೆಬರಹನಾ ಸರಿ ಇಲ್ರಿ!. ಒಮ್ಮೊಮ್ಮೆ ಮಳಿಯಾಗ್ದ ಬೆಳೆಯಲ್ಲ ಒಣಗಿ ಹೊಕ್ಕಾವು, ಮತ್ತೊಮ್ಮೆ ಹೆಚ್ಚು ಮಳೆಯಾಗಿ ಬಿತ್ತಿದ ಬೆಳೆಯಲ್ಲಾ ಹಾಳಾಗಿ ಹೊಕ್ಕಾವು. ಮಳಿ ಹೆಚ್ಚಾದ್ರೂ ರೈತಂಗ ಕಷ್ಟ, ಮಳಿಯಾಗದಿದ್ರೂ ಕಷ್ಟಾರಿ... ಹ್ವಾದ್‌ ತಿಂಗಳ ಸುರಿದ ಮಳಿಯಿಂದ ಬೆಳೆದಿದ್ದ ಬೆಳೆ ಹಾಳಾಗಿ ಕೈಸುಟ್ಟುಕೊಂಡೀವಿ. ಇಂಥದ್ರಾಗ ದೀಪಾವಳಿ ಹಬ್ಬಾ ಬಂದೈತಿ... ಹ್ಯಾಂಗ್ ಮಾಡಬೇಕು ಎನ್ನೋದಾ ತಿಳಿವಲ್ದು...!

ಉತ್ತರ ಕರ್ನಾಟಕದಾದ್ಯಂತ ಸೆಪ್ಟಂಬರ್‌, ಅಕ್ಟೋಬರ್‌ ಮೊದಲ ವಾರದಲ್ಲಿ ಉಂಟಾದ ಅತಿವೃಷ್ಟಿಯಿಂದಾಗಿ ಬಿತ್ತಿದ ಬೆಳೆ ಹಾಳಾಗಿ ರೈತರು ತಲೆ ಮೇಲೆ ಕೈಹೊತ್ತು ಕುಳಿತ್ತಿದ್ದಾರೆ. ಇದೀಗ ದೀಪಾವಳಿ ಬಂದಿದ್ದು ಕೈಯಲ್ಲಿ ಕಾಸು ಇಲ್ಲದೆ ಚಿಂತಿತರಾಗಿದ್ದಾರೆ.

6 ಲಕ್ಷ ಹೆಕ್ಟೇರ್‌ ಹಾನಿ:

ಧಾರವಾಡ, ಗದಗ, ಹಾವೇರಿ ಸೇರಿದಂತೆ 10ಕ್ಕೂ ಅಧಿಕ ಜಿಲ್ಲೆಗಳಲ್ಲಿ ಹೆಸರು, ಉದ್ದು, ಸೂರ್ಯಕಾಂತಿ, ಹತ್ತಿ, ತೊಗರಿ ಸೇರಿದಂತೆ ಮತ್ತಿತರ ಬೆಳೆ ಹೊಂದಿದ್ದ 6 ಲಕ್ಷ ಹೆಕ್ಟೇರ್‌ಗೂ ಅಧಿಕ ಬೆಳೆ ಹಾನಿಯಾಗಿದೆ. ಧಾರವಾಡ ತಾಲೂಕಿನಲ್ಲಿ 14,302.51 ಹೆಕ್ಟೇರ್, ನವಲಗುಂದ 23,627.13 ಹೆಕ್ಟೇರ್‌, ಹುಬ್ಬಳ್ಳಿ ಗ್ರಾಮೀಣ 15,858 ಹೆಕ್ಟೇರ್‌, ಹುಬ್ಬಳ್ಳಿ ನಗರ 881.91 ಹೆಕ್ಟೇರ್‌, ಕುಂದಗೋಳ 12,847.34 ಹೆಕ್ಟೇರ್‌, ಅಣ್ಣಿಗೇರಿ 14,931.99 ಹೆಕ್ಟೇರ್‌ ಸೇರಿದಂತೆ ಒಟ್ಟು 82,448.88 ಹೆಕ್ಟೇರ್‌ ಬೆಳೆಹಾನಿಯಾಗಿದೆ.

ಕಣ್ಣೀರು ತರಿಸಿದ ಈರುಳ್ಳಿ:

ವಿವಿಧ ಬೆಳೆ ಹಾನಿಯಾಗಿದ್ದರಿಂದ ಈರುಳ್ಳಿ ಬೆಲೆಯಾದರೂ ನಮ್ಮನ್ನು ಆರ್ಥಿಕ ನಷ್ಟದಿಂದ ಪಾರು ಮಾಡುತ್ತದೆ ಎಂದು ಕನಸು ಕಂಡಿದ್ದ ರೈತರ ಕಣ್ಣನಲ್ಲಿ ನೀರು ತರಿಸಿದೆ. ಉತ್ತಮ ಇಳುವರಿ ಬಂದಿದ್ದರೂ ಭರ್ಜರಿ ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ದರ ಕುಸಿತ ಆಘಾತ ನೀಡಿದೆ. ಮಾಡಿದ ಖರ್ಚು ಸಹ ಬರುವುದಿಲ್ಲವೆಂದು ಹಲವು ರೈತರು ಬೆಳೆಯನ್ನೆ ಹರಗಿದ್ದಾರೆ.

ದೀಪಾವಳಿ ಹಬ್ಬ ಬರುವ ವೇಳೆಗೆ ಬಹುತೇಕ ರೈತರು ತಾವು ಬೆಳೆದ ಬೆಳೆ ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸಿ ಮಾರಾಟ ಮಾಡುತ್ತಿದ್ದರು. ಬಳಿಕ ಬರುತ್ತಿದ್ದ ಹಬ್ಬವನ್ನು ಸಂಭ್ರಮದಿಂದಲೇ ಆಚರಿಸುತ್ತಿದ್ದರು. ಆದರೆ, ಈ ವರ್ಷ ಅತಿವೃಷ್ಟಿಯಿಂದಾಗಿ ಬಿತ್ತಿದ್ದ ಬೆಳೆ ಹಾಳಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ. ಇಂತಹ ವೇಳೆ ಬಂದ ದೀಪಾವಳಿಯನ್ನು ರೈತರು ಒಲ್ಲದ ಮನಸ್ಸಿನಿಂದ ಆಚರಿಸುತ್ತಿದ್ದಾರೆ.ಸಾಲಾ-ಸೋಲಾ ಮಾಡಿ ಬೀಜ, ಗೊಬ್ಬರ ಹಾಕಿ ಬಿತ್ತಿದ್ವಿ. ಹೆಚ್ಚು ಮಳಿಯಾಗಿ ಬಿತ್ತಿದ ಬೆಳೆಯಲ್ಲಾ ಹಾಳಾಗಿ ಹೋಗ್ಯಾವು. ಹಬ್ಬ ಆಚರಿಸೋದು ಒತ್ತಟ್ಟಿಗಿರಲಿ, ಎರಡು ಹೊತ್ತು ತಿನ್ನಾಕೂ ರೊಕ್ಕ ಇಲ್ಲದಂತಾ ಪರಿಸ್ಥಿತಿ ನಮಗಾಗೈತಿ. ಹಬ್ಬ ಹ್ಯಾಂಗ ಆಚರಿಸ್ಬೇಕು ಅನ್ನೋದ ತಿಳಿವಲ್ದು.

ರಾಮಣ್ಣ ಬಿರೂರ, ಗದಗ ಜಿಲ್ಲೆಯ ರೈತಅತಿವೃಷ್ಟಿಯಿಂದಾಗಿ ಬಿತ್ತಿದ ಬೆಳೆ ಹಾಳಾಗಿವೆ. ಸಂಕಷ್ಟದಲ್ಲಿರುವ ಅನ್ನದಾತರಿಗೆ ಸರ್ಕಾರ ದೀಪಾವಳಿಯೊಳಗೆ ಬೆಳೆಹಾನಿ ಪರಿಹಾರ ನೀಡುತ್ತದೆ ಎಂಬ ಭರವಸೆ ಇತ್ತು. ಇದೀಗ ಅದು ಹುಸಿಯಾಗಿದೆ.

ಶಂಕರ ಅಂಬಲಿ, ಕರ್ನಾಟಕ ರೈತಸೇನೆ ರಾಜ್ಯಾಧ್ಯಕ್ಷ