ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶಿವಮೊಗ್ಗ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಇದರಿಂದ ನದಿಗಳು ಉಕ್ಕಿ ಹರಿಯಲಾರಂಭಿಸಿವೆ. ಜಿಲ್ಲೆಯ ಪ್ರಮುಖ ಜಲಾಶಯಗಳಾದ ತುಂಗಾ, ಭದ್ರಾ ಹಾಗೂ ಲಿಂಗನಮಕ್ಕಿ ಒಳಹರಿವಿನಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಹವಾಮಾನ ಇಲಾಖೆ ರೆಡ್ ಅಲರ್ಟ್ ಎಚ್ಚರಿಕೆ ನೀಡಿದೆ.ಮಲೆನಾಡಿನಲ್ಲಿ ಭಾರಿ ಮಳೆ ಮುಂದುವರಿದಿದ್ದು, ಶಿವಮೊಗ್ಗ ತಾಲೂಕಿನ ಗಾಜನೂರಿನ ತುಂಗಾ ಜಲಾಶಯದ ಒಳಹರಿವು 73415 ಕ್ಯುಸೆಕ್ ಇದ್ದು, 76,656 ಕ್ಯುಸೆಕ್ ನೀರನ್ನು ಹೊರ ಬಿಡಲಾಗಿದೆ. ಡ್ಯಾಂನಿಂದ ನೀರಿನ ಹೊರ ಹರಿವಿನ ಪ್ರಮಾಣ ಹೆಚ್ಚಾಗಿರುವುದರಿಂದ, ಶಿವಮೊಗ್ಗ ನಗರದ ಮೂಲಕ ಹಾದು ಹೋಗಿರುವ ತುಂಗಾ ನದಿಯು ಮೈದುಂಬಿ ಹರಿಯುತ್ತಿದೆ. ಹೊರ ಹರಿವು ಮತ್ತಷ್ಟು ಹೆಚ್ಚಾದರೆ ನಗರದ ನದಿಪಾತ್ರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಆತಂಕವಿದೆ.
ಭದ್ರಾ ಡ್ಯಾಂ ಒಳಹರಿವು 34,430 ಕ್ಯುಸೆಕ್‌ಗೆ ಏರಿಕೆಯಾಗಿದೆ. ಡ್ಯಾಂನ ನೀರಿನ ಮಟ್ಟವನ್ನು 184.9 (ಗರಿಷ್ಠ ಮಟ್ಟ:186) ಅಡಿಗೆ ಕಾಯ್ದುಕೊಳ್ಳಲಾಗಿದ್ದು, 39,245 ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಭದ್ರಾ ಡ್ಯಾಂನಿಂದ ಹೊರಹರಿವಿನ ಪ್ರಮಾಣ ಏರಿಕೆಯಾಗಿರುವುದರಿಂದ, ಭದ್ರಾವತಿ ಮೂಲಕ ಹಾದು ಹೋಗಿರುವ ಭದ್ರಾ ನದಿಯು ಅಪಾಯದ ಮಟ್ಟದಲ್ಲಿ ಹರಿಯಲಾರಂಭಿಸಿದೆ. ಹೊಸ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಹಾಗೆಯೇ ನದಿ ಪಾತ್ರದ ಕವಲುಗುಂದಿ ಏರಿಯಾದಲ್ಲಿ ಆರೇಳು ಮನೆಗಳಿಗೆ ನೀರು ನುಗ್ಗಿದೆ. ಈ ಹಿನ್ನೆಲೆಯಲ್ಲಿ ನಗರಸಭೆ ಆಡಳಿತ ತಿರುವಳ್ಳುವರ್ ಸಮುದಾಯ ಭವನದಲ್ಲಿ ತಾತ್ಕಾಲಿಕ ಪುನರ್ವಸತಿ ಕೇಂದ್ರ ತೆರೆದು,ನಿವಾಸಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಿದೆ.ಭದ್ರಾ ಡ್ಯಾಂನಿಂದ ಹೊರ ಬಿಡುವ ನೀರಿನ ಪ್ರಮಾಣ ಹೆಚ್ಚಾದರೆ ಗುಂಡೂರಾವ್ ಶೆಡ್, ಅಂಬೇಡ್ಕರ್ ನಗರ, ಎಕಿನ್ಷಾ ಕಾಲೋನಿ ಮೊದಲಾದೆಡೆ ನೀರು ನುಗ್ಗುವ ಆತಂಕವಿದೆ. ಈಗಾಗಲೇ ನಗರಸಭೆ ಆಡಳಿತ ಮುನ್ನೆಚ್ಚರಿಕೆ ಕ್ರಮಕೈಗೊಂಡಿದೆ.
ಲಿಂಗನಮಕ್ಕಿ ಡ್ಯಾಂ ಭರ್ತಿಗೆ 4 ಅಡಿ ಬಾಕಿ:ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಜಲಾಶಯ ಪ್ರಸ್ತುತ ವರ್ಷವೂ ಗರಿಷ್ಠ ಮಟ್ಟ ತಲುಪುವ ನಿರೀಕ್ಷೆಗಳು ಗೋಚರವಾಗಿದ್ದು, ಜಲಾಶಯ ಭರ್ತಿಗೆ ಇನ್ನೂ ಕೇವಲ 4 ಅಡಿ ಮಾತ್ರ ಬಾಕಿಯಿದೆ. ಆ.18ರ ಬೆಳಿಗ್ಗೆಯ ಮಾಹಿತಿಯಂತೆ ಡ್ಯಾಂನ ನೀರಿನ ಮಟ್ಟ 1815.05 (ಗರಿಷ್ಠ ಮಟ್ಟ:1819) ಅಡಿಗೆ ತಲುಪಿದೆ. ಸದ್ಯ ಡ್ಯಾಂನ ಒಳಹರಿವು 59891 ಕ್ಯುಸೆಕ್ ಇದೆ.