ವಿರಾಜಪೇಟೆ ಮಾಂಸ ಮಾರುಕಟ್ಟೆ ಜಂಕ್ಷನ್ ಜಲಾವೃತ

| Published : Jul 19 2024, 01:03 AM IST / Updated: Jul 19 2024, 01:04 AM IST

ವಿರಾಜಪೇಟೆ ಮಾಂಸ ಮಾರುಕಟ್ಟೆ ಜಂಕ್ಷನ್ ಜಲಾವೃತ
Share this Article
  • FB
  • TW
  • Linkdin
  • Email

ಸಾರಾಂಶ

ಪುನರ್ವಸು ಮಳೆ ಗುರುವಾರ ಮುಂಜಾನೆಯಿಂದ ಎಡೆಬಿಡದೆ ಸುರಿದು ವಿರಾಜಪೇಟೆ ನಗರದ ಮಾಂಸ ಮಾರುಕಟ್ಟೆ ಜಂಕ್ಷನ್ ರಸ್ತೆ ಜಲಾವೃತಗೊಂಡಿದ್ದು ಸಂಚಾರ ಅಸ್ತವ್ಯಸ್ತವಾಯಿತು.ವಿರಾಜಪೇಟೆ ನಗರದಿಂದ ಗೋಣಿಕೊಪ್ಪ ತೆರಳುವ ಮುಖ್ಯ ರಸ್ತೆ (ಮಾಂಸ ಮಾರುಕಟ್ಟೆ ಜಂಕ್ಷನ್) ಮಳೆಯಿಂದಾಗಿ ಸಂಪೂರ್ಣ ಜಲಾವೃತಗೊಂಡಿತ್ತು.

ಕನ್ನಡಪ್ರಭ ವಾರ್ತೆ ವಿರಾಜಪೇಟೆ

ಪುನರ್ವಸು ಮಳೆ ಗುರುವಾರ ಮುಂಜಾನೆಯಿಂದ ಎಡೆಬಿಡದೆ ಸುರಿದು ವಿರಾಜಪೇಟೆ ನಗರದ ಮಾಂಸ ಮಾರುಕಟ್ಟೆ ಜಂಕ್ಷನ್ ರಸ್ತೆ ಜಲಾವೃತಗೊಂಡಿದ್ದು ಸಂಚಾರ ಅಸ್ತವ್ಯಸ್ತವಾಯಿತು.ವಿರಾಜಪೇಟೆ ನಗರದಿಂದ ಗೋಣಿಕೊಪ್ಪ ತೆರಳುವ ಮುಖ್ಯ ರಸ್ತೆ (ಮಾಂಸ ಮಾರುಕಟ್ಟೆ ಜಂಕ್ಷನ್) ಮಳೆಯಿಂದಾಗಿ ಸಂಪೂರ್ಣ ಜಲಾವೃತಗೊಂಡಿತ್ತು. ಸಂಚಾರಕ್ಕೆ ತೊಡಕು ಉಂಟಾಗಿ ಅಲ್ಪ ಸಮಯದಲ್ಲಿ ವಾಹನಗಳು ನೀರಿನಲ್ಲಿ ಸಿಲುಕಿಕೊಂಡು ಹರಸಹಾಸ ಪಡುವಂತಾಯಿತು.

ರಸ್ತೆ ಬದಿಯಲ್ಲಿದ್ದ ವಾಹನಗಳು ಅರ್ಧ ಭಾಗ ಮುಳುಗಡೆ ಕಂಡವು. ಸಂಚಾರ ಅಸ್ತವ್ಯಸ್ತಗೊಂಡಿತ್ತು. ವಿರಾಜಪೇಟೆ ನಗರದ ವಿಜಯ ನಗರ, ಡಿಸಿಲ್ವ ನಗರ, ಸುಭಾಷ್ ನಗರ ಸೇರಿದಂತೆ ತಗ್ಗು ಪ್ರದೇಶಗಳಲ್ಲಿರುವ ನಿವಾಸದ ಮನೆಗಳಿಗೆ ಒಳ ನುಗ್ಗಿದ ಮಳೆ ನೀರಿನಿಂದ ಜನತೆಯು ಆತಂಕ ಎದುರಿಸುವಂತಾಯಿತು.

ಮಾಂಸ ಮಾರುಕಟ್ಟೆಯ ಸನಿಹದಲ್ಲೇ ರಾಜ ಕಾಲುವೆ ಹರಿಯುತ್ತಿದ್ದು, ಮಳೆಗಾಲದಲ್ಲಿ ತುಂಬಿ ಹರಿದು ರಸ್ತೆಗಳು ಜಲಾಮಯವಾಗುತ್ತಿವೆ.

ರಾಜಕಾಲುವೆಯ ಇಕ್ಕೆಲಗಳಲ್ಲಿ ಮನೆಗಳು ನಿರ್ಮಾಣವಾಗಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ. ರಾಜ ಕಾಲುವೆಯ ಇಕ್ಕೆಲಗಳಲ್ಲಿ ೩೦ ಅಡಿ ಅಂತರದಲ್ಲಿ ಮನೆ ನಿರ್ಮಾಣ ಮಾಡುವಂತೆ ಸರ್ಕಾರದ ಮತ್ತು ಇಲಾಖೆಯ ಆದೇಶವಿದ್ದರೂ ಮನೆ ನಿರ್ಮಾಣ ಮಾಡಿರುವುದರಿಂದ ರಾಜ ಕಾಲುವೆಯಲ್ಲಿ ನೀರು ಸರಾಗವಾಗಿ ಹರಿಯದೆ ರಸ್ತೆ ಮೇಲೆಯೇ ಹರಿದು ಸಂಚಾರಕ್ಕೆ ಸಮಸ್ಯೆ ಆಗುತ್ತಿದೆ.

ರಸ್ತೆ ನಿರ್ಮಾಣ ಮಾಡುವ ಹಂತದಲ್ಲಿ ಅವೈಜ್ಞಾನಿಕವಾಗಿ ಕಿರು ಸೇತುವೆ ನಿರ್ಮಾಣ ಮಾಡಲಾಗಿದೆ. ಆದುದರಿಂದ ಮಳೆಯ ನೀರು ರಸ್ತೆಯಲ್ಲಿ ನಿಂತು ಜಲಾವೃತವಾಗುತ್ತಿದೆ ಎಂದು ಇಲ್ಲಿನ ನಿವಾಸಿ ಮೊಹಮ್ಮದ್ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಬರೆಗೆ ಹಾನಿ: ಅಂಬಟ್ಟಿ ಗ್ರಾಮದ ನಿವಾಸಿ ಕೆ.ಅಲೀಮಾ ಅವರ ಮನೆ ಹಿಂಬದಿಯ ಬರೆ ಕುಸಿಯುವ ಹಂತದಲ್ಲಿದ್ದು ಭೂ ಮತ್ತು ಗಣಿ ವಿಜ್ಞಾನ ಅಧಿಕಾರಿಗಳು ಹಾಗೂ ವಿರಾಜಪೇಟೆ ಕಂದಾಯ ಇಲಾಖೆಯ ಆಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕುಸಿವ ಹಂತದಲ್ಲಿರುವುದರಿಂದ ಕೆ. ಅಲೀಮಾ ಅವರು ಮತ್ತು ಕುಟುಂಭವನ್ನು ಸ್ಥಳಾಂತರ ಮಾಡುವಂತೆ ಮನವಿ ಮಾಡಿದ್ದಾರೆ.ನಗರದ ವಿವಿಧ ಭಾಗಗಳಲ್ಲಿ ರಸ್ತೆಯ ಮೇಲೆ ಕಾಲು ದಾರಿಯ ಮೇಲೆ ಹರಿದ ನೀರು, ತೊರೆಗಳಂತೆ ಕಾಣತೊಡಗಿದ್ದರಿಂದ ಜನರು ಆತಂಕಕ್ಕೀಡಾದರು. ವಿರಾಜಪೇಟೆ ಸಮೀಪದ ಚಿಕ್ಕಪೇಟೆಯ ಜೆಸಿಎಸ್ ಪೆಟ್ರೋಲ್ ಬಂಕ್ ಬಳಿ ಭಾರಿ ಮಳೆಗೆ ಗದ್ದೆ ಹಾಗೂ ಮೋರಿಯಿಂದ ರಸ್ತೆಗೆ ನೀರು ನುಗ್ಗಿತ್ತು. ಇದರಿಂದ ರಸ್ತೆಯು ಸಂಪೂರ್ಣವಾಗಿ ಜಲಾವೃತಗೊಂಡು ವಾಹನಗಳಿಗೆ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿ ಕೆಲ ಘಂಟೆಗಳ ಕಾಲ ಪರದಾಡುವಂತಾಯಿತು.ಜನಸ್ಪಂದನದಲ್ಲಿ ಮನವಿ:

ವಿರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಹರಿಯುವ ರಾಜಕಾಲುವೆ (ತೋಡು) ಸಂಪೂರ್ಣ ಒತ್ತುವರಿಯಾಗಿದ್ದು ಮತ್ತು ಅಂಗಡಿ ಶೌಚಾಲಯ, ಆಸ್ಪತ್ರೆ, ಮೀನು- ಮಾಂಸ ಮಾರುಕಟ್ಟೆಗಳ ತ್ಯಾಜ್ಯ ನೇರವಾಗಿ ರಾಜಕಾಲುವೆಗೆ ಹೋಗುತ್ತಿದೆ. ಈ ರಾಜಕಾಲುವೆ ಮೂಲಕ ತ್ಯಾಜ್ಯ ಕಾವೇರಿ ನದಿಗೆ ಸೇರಿ ಕಾವೇರಿ ನದಿ ನೀರು ಮಲಿನಗೊಳ್ಳುತ್ತಿದೆ. ಈ ಬಗ್ಗೆ ವಿರಾಜಪೇಟೆ ಪಟ್ಟಣ ಪಂಚಾಯಿತಿ ತ್ಯಾಜ್ಯ ನೀರು ಬಿಡುವವರಿಗೆ ನೋಟಿಸು ನೀಡಿರುವುದು ಹೊರತುಪಡಿಸಿದರೆ ಬೇರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪವಿದೆ.

ಬಫರ್‌ ಝೋನ್ ವ್ಯಾಪ್ತಿಯಲ್ಲಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿವೆ ಮತ್ತು ಲೇಜೌಟ್‌ಗಳು ನಿರ್ಮಾಣವಾಗುತ್ತಿವೆ. ಸರ್ಕಾರದ ಆದೇಶ ಉಲ್ಲಂಘಿಸಿ ರಾಜಕಾಲುವೆಯ ಬದಿಯಲ್ಲಿ ಬಡಾವಣೆಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಅದುದರಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಕೊಡವ ಕೂಟಾಳಿಯಡ ಕೂಟ, ಹರಿಹರ ಗ್ರಾಮ ಪೊನ್ನಂಪೇಟೆ ಸಂಸ್ಥೆಯು ಜನ ಸ್ಪಂದನ ಸಭೆಯಲ್ಲಿ ಶಾಸಕರಿಗೆ ಮನವಿ ಪತ್ರ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.