ಸಾರಾಂಶ
ಕುಷ್ಟಗಿ: ಮತದಾನ ಎಂಬುದು ನಾಗರಿಕರ ಗುರುತರ ಜವಾಬ್ದಾರಿಯಾಗಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಸತೀಶ್ ಬಿ. ಕುಷ್ಟಗಿ ಹೇಳಿದರು.ಪಟ್ಟಣದ ಪ್ರಥಮ ದರ್ಜೆ ಕಾಲೇಜಿನ ಆಡಿಟೋರಿಯಂ ಹಾಲ್ ನಲ್ಲಿ ತಾಲೂಕು ಸ್ವೀಪ್ ಸಮಿತಿ, ತಾಲೂಕು ಆಡಳಿತದಿಂದ ಹಮ್ಮಿಕೊಂಡ ರಾಷ್ಟ್ರೀಯ ಮತದಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಎಲ್ಲರೂ ಮತ ಚಲಾಯಿಸಿದರೆ ದೇಶಕ್ಕೆ ಒಳ್ಳೆಯ ನಾಯಕ ಸಿಗುವುದರ ಜೊತೆಗೆ ಒಳ್ಳೆಯ ರಾಷ್ಟ್ರವು ನಿರ್ಮಾಣ ಆಗುತ್ತದೆ. ರಾಜಕೀಯದ ದೊಡ್ಡ ಪಿಡುಗು ಎಂದರೆ ಚುನಾವಣೆ ಸಮಯದಲ್ಲಿ ಮತದಾರರು ಆಸೆ, ಆಮಿಷಗಳಿಗೆ ಬಲಿಯಾಗುವುದು. ಯಾರೂ ಆಮಿಷಕ್ಕೆ ಬಲಿಯಾಗದೇ ಉತ್ತಮ ಅಭ್ಯರ್ಥಿಗಳಿಗೆ ತಮ್ಮ ಹಕ್ಕು ಚಲಾಯಿಸುವಂತೆ ಸಲಹೆ ನೀಡಿದರು.ತಹಸೀಲ್ದಾರ ಶ್ರುತಿ ಮಳ್ಳಪ್ಪಗೌಡ್ರ ಮಾತನಾಡಿ, ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣಾ ಭಾಗವಹಿಸುವಿಕೆ ಭಾರತ ಚುನಾವಣಾ ಆಯೋಗದ ಮುಖ್ಯ ಉದ್ದೇಶವಾಗಿದೆ. ಎಲ್ಲ ಅರ್ಹ ಮತದಾರರು ಮತಾದರರ ಪಟ್ಟಿಗೆ ಸೇರ್ಪಡೆಯಾಗತಕ್ಕದ್ದು. ಹೆಚ್ಚಾಗಿ ಅರ್ಹ ಯುವ ಮತದಾರರು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಹೊಂದಲು ಮುಂದಾಗಬೇಕು ಎಂದು ಹೇಳಿದರು ನಂತರ ಸಾಂಕೇತಿಕವಾಗಿ ಹೊಸ ಮತದಾರರಿಗೆ ಗುರುತಿನ ಚೀಟಿ ವಿತರಣೆ ಮಾಡಲಾಯಿತು.ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ವಿ. ಡಾಣಿ ಮಾತನಾಡಿ, ಮತದಾನ ಅನ್ನುವುದು ಪ್ರತಿಯೊಬ್ಬರ ಹಕ್ಕು. ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ಗೆಲ್ಲಿಸಬೇಕು. ಕಳೆದ ಚುನಾವಣೆಗಿಂತ ಈ ಚುನಾವಣೆಯಲ್ಲಿ ಹೆಚ್ಚು ಹೆಚ್ಚು ಮತಗಳನ್ನು ಮಾಡುವ ಮೂಲಕ ಪ್ರಜಾಪ್ರಭುತ್ವವನ್ನು ಗೆಲ್ಲಿಸಬೇಕು ಎಂದು ತಿಳಿಸಿದರು.ತಾಪಂ ಸಿಬ್ಬಂದಿ ಸಂಗಪ್ಪ ನಂದಾಪುರ ಇವಿಎಂ ಮಿಷನ್ ಹಾಗೂ ಟಿವಿ ಪ್ಯಾಟ್ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಿದರು. ಈ ಸಂದರ್ಭದಲ್ಲಿ ತಾಪಂ ಇಒ ನಿಂಗಪ್ಪ ಎಸ್ ಮಸಳಿ, ಬಿಆರ್‌ಪಿ ಡಾ.ಜೀವನಸಾಬ್ ವಾಲಿಕಾರ್, ಕಂದಾಯ ಇಲಾಖೆ ಸಿಬ್ಬಂದಿ ಶರಣಪ್ಪ ಹುಡೆದ, ವಿದ್ಯಾರ್ಥಿಗಳು ಭಾಗವಹಿಸಿದ್ದರು.