ಮತ ಎಣಿಕೆಗೆ ಭಾರೀ ಬಿಗಿ ಭದ್ರತೆ: ಪೊಲೀಸ್‌ ಆಯುಕ್ತೆ ರೇಣುಕಾ ಸುಕುಮಾರ

| Published : Jun 03 2024, 01:17 AM IST / Updated: Jun 03 2024, 08:04 AM IST

ಸಾರಾಂಶ

ಭದ್ರತೆಗೆ ಸಿಆರ್‌ಪಿಎಫ್, ಕೆಎಸ್‌ಆರ್‌ಪಿ, ಸಿಎಆರ್, ಹೋಮ್ ಗಾರ್ಡ್‌ ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿ, ಸಿಬ್ಬಂದಿಯನ್ನು ನಿಯೋಜಿಸಿದ್ದು, ಮತ ಎಣಿಕೆ ಕೇಂದ್ರದ ಸುತ್ತಲೂ ಭದ್ರತೆಗಾಗಿ 650 ಪೊಲೀಸ್ ಭದ್ರತಾ ಸಿಬ್ಬಂದಿ ನಿಯೋಜಿಸಿಲಾಗಿದೆ ಎಂದು ಪೊಲೀಸ್‌ ಆಯುಕ್ತೆ ರೇಣುಕಾ ಸುಕುಮಾರ ತಿಳಿಸಿದರು.

 ಧಾರವಾಡ :   ಕೃಷಿ ವಿವಿಯಲ್ಲಿ ಜೂ. 4ರಂದು ಮತ ಎಣಿಕೆ ನಡೆಯಲಿದ್ದು, ಭದ್ರತೆಗೆ ಬೇಕಾದ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜತೆಗೆ ಪಾರ್ಕಿಂಗ್‌ಗೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಆಯುಕ್ತೆ ರೇಣುಕಾ ಸುಕುಮಾರ ತಿಳಿಸಿದ್ದಾರೆ.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಆರ್‌ಪಿಎಫ್, ಕೆಎಸ್‌ಆರ್‌ಪಿ, ಸಿಎಆರ್, ಹೋಮ್ ಗಾರ್ಡ್‌ ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿ, ಸಿಬ್ಬಂದಿಯನ್ನು ನಿಯೋಜಿಸಿದ್ದು, ಮತ ಎಣಿಕೆ ಕೇಂದ್ರದ ಸುತ್ತಲೂ ಭದ್ರತೆಗಾಗಿ 650 ಪೊಲೀಸ್ ಭದ್ರತಾ ಸಿಬ್ಬಂದಿ ನಿಯೋಜಿಸಿಲಾಗಿದೆ ಎಂದು ತಿಳಿಸಿದರು.

3 ಹಂತದಲ್ಲಿ ತಪಾಸಣೆ:

ಮತ ಎಣಿಕಾ ಕೇಂದ್ರಕ್ಕೆ ಆಗಮಿಸುವವರನ್ನು 3 ಹಂತದಲ್ಲಿ ತಪಾಸಣೆ ಮಾಡಲಾಗುವುದು. ರಾಜಕೀಯ ಪಕ್ಷಗಳ ಏಜೆಂಟರಿಗೆ, ಅಧಿಕಾರಿಗಳಿಗೆ ಮತ್ತು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತ್ಯೇಕವಾದ ಸಂಚಾರ ಮಾರ್ಗ ಮಾಡಲಾಗಿದೆ. ಜಿಲ್ಲೆಯಲ್ಲಿ 144 ಕಲಂ ಜಾರಿಯಲ್ಲಿ ಇರುವದರಿಂದ ವಿಜಯೋತ್ಸವ ಆಚರಣೆ, ಪಟಾಕಿ ಹಚ್ಚುವುದನ್ನು ನಿರ್ಭಂಧಿಸಲಾಗಿದೆ ಎಂದು ಅವರು ತಿಳಿಸಿದರು.ಮಹಾನಗರ ಸೇರಿದಂತೆ ಜಿಲ್ಲೆಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಲು ಸುಮಾರು 2500 ಪೊಲೀಸ್‌ ಅಧಿಕಾರಿ, ಸಿಬ್ಬಂದಿ ಮತ್ತು 6 ಕೆಎಸ್.ಆರ್.ಪಿ ತುಕಡಿಗಳನ್ನು ಹಾಗೂ 500 ಹೋಮ್ ಗಾರ್ಡ್‌ಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.

ಪಾರ್ಕಿಂಗ್‌ ವ್ಯವಸ್ಥೆ

ಪೆಪ್ಸಿ ಕಂಪನಿ ಕ್ರಾಸ್‌ನಿಂದ ಡೈರಿ, ಕೃಷಿ ವಿವಿ, ಕೆಇಬಿ ಗ್ರೀಡ್ ಗೇಟ್ ಮೂಲಕ ಕಾರಂಜಿ ಹತ್ತಿರ ಖಾಲಿ ಜಾಗದಲ್ಲಿ ಚುನಾವಣಾ ಅಭ್ಯರ್ಥಿಗಳು ಮತ್ತು ಏಜೆಂಟರ್‌ ವಾಹನಗಳ ಪಾರ್ಕಿಂಗ್ ಮಾಡಲು ತಿಳಿಸಲಾಗಿದೆ.

ಸಾರ್ವಜನಿಕರ ವಾಹನಗಳ ಪಾರ್ಕಿಂಗ್‌

ಹುಬ್ಬಳ್ಳಿ, ಸವದತ್ತಿ, ನವಲಗುಂದ, ಕಲಘಟಗಿ ಕಡೆಯಿಂದ ಮತ ಎಣಿಕೆ ಕೇಂದ್ರಕ್ಕೆ ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ಪೆಪ್ಸಿ ಕಂಪನಿಯಿಂದ ಮಾರ್ಗ ಬದಲಾವಣೆ ಮಾಡಿಕೊಂಡು ಅರ್ಜಂಟ್‌ನಗರ, ಶಿರಡಿನಗರದ ಮಾರ್ಗವಾಗಿ ಬಸವನಗರ ಹತ್ತಿರ ಎಡಭಾಗದಲ್ಲಿ ಖಾಲಿ ಜಾಗದಲ್ಲಿ ಪಾರ್ಕಿಂಗ್ ಮಾಡಬೇಕು. ಬೆಳಗಾವಿ ಕಡೆಯಿಂದ ಬರುವ ವಾಹನಗಳು ಬಸವನಗರ ಹತ್ತಿರ ಎಡಭಾಗದಲ್ಲಿ ಖಾಲಿ ಜಾಗದಲ್ಲಿ ಪಾರ್ಕಿಂಗ್ ಮಾಡಬೇಕು.

ಅಧಿಕಾರಿ, ಸಿಬ್ಬಂದಿ ವಾಹನಗಳ ಪಾರ್ಕಿಂಗ್

ಪೆಪ್ಸಿ ಕಂಪನಿ ಕ್ರಾಸ್ ಮಾರ್ಗವಾಗಿ ಎತ್ತಿನಗುಡ್ಡ ಗ್ರಾಮದ ಕ್ರಾಸ್ ಮುಖಾಂತರ ಲೇಡಿಸ್ ಹಾಸ್ಟೆಲ್ ಕ್ರಾಸ್, ಮೆಣಸಿನಕಾಯಿ ಸರ್ಕಲ್ ಕಡೆಗೆ ಅಧಿಕಾರಿ ಮತ್ತು ಸಿಬ್ಬಂದಿ ಅವರನ್ನು ಇಳಿಸಿ ಮರಳಿ ಅದೇ ಮಾರ್ಗವಾಗಿ ಹೊಸ ಆಡಳಿತ ಭವನದ ಹಿಂದುಗಡೆ ಖಾಲಿ ಜಾಗದಲ್ಲಿ ಮತ್ತು ಎತ್ತಿನಗುಡ್ಡ ಸರ್ಕಾರಿ ಪ್ರಾಥಮಿಕ ಶಾಲೆ ಮೈದಾನದಲ್ಲಿ ಪಾರ್ಕಿಂಗ್ ಮಾಡಬೇಕು.

ಮಾರ್ಗಬದಲಾವಣೆ

ಹುಬ್ಬಳ್ಳಿ, ಸವದತ್ತಿ ಕಡೆಯಿಂದ ಬೆಳಗಾವಿ ಕಡೆಗೆ ಹೋಗುವ ಭಾರೀ ವಾಹನಗಳು ಉಪನಗರ ಠಾಣೆಯಿಂದ ಮಾರ್ಗ ಬದಲಾವಣೆ ಮಾಡಿಕೊಂಡು ಜರ್ಮನ್ ಸರ್ಕಲ್ ಮಾರ್ಗವಾಗಿ ಕೆಲಗೇರಿ ಬೈಪಾಸ್ ಮುಖಾಂತರ ಬೆಳಗಾವಿ ಕಡೆಗೆ ಹೋಗಲು ಸೂಚಿಸಲಾಗಿದೆ.

ಬೆಳಗಾವಿ ಕಡೆಯಿಂದ ಧಾರವಾಡ ನಗರಕ್ಕೆ ಆಗಮಿಸುವ ಭಾರಿ ವಾಹನಗಳು ನರೇಂದ್ರ ಟೋಲ್‌ ಪ್ಲಾಜಾ ಮುಖಾಂತರ ಕೆಲಗೇರಿ ಬ್ರಿಡ್ಜ್‌ನಿಂದ ಕೆಳಗೆ ಇಳಿದು ಜರ್ಮನ್ ಸರ್ಕಲ್, ಉಪನಗರ ಪೊಲೀಸ್ ಠಾಣೆ ಮಾರ್ಗವಾಗಿ ಹುಬ್ಬಳ್ಳಿ, ಸವದತ್ತಿ, ನವಲಗುಂದ ಕಡೆಗೆ ಹೋಗಬೇಕು.

ಹುಬ್ಬಳ್ಳಿ, ಸವದತ್ತಿ ಕಡೆಯಿಂದ ಬೆಳಗಾವಿ ಕಡೆಗೆ ಹೋಗುವಂತ ಲಘು ವಾಹನಗಳು ಪೆಪ್ಸಿ ಕಂಪನಿಯಿಂದ ಮಾರ್ಗ ಬದಲಾವಣೆ ಮಾಡಿಕೊಂಡು ಅರ್ಜಂಟ್‌ನಗರ ಶಿರಡಿನಗರ, ಬಸವನಗರ ಮಾರ್ಗವಾಗಿ ನರೇಂದ್ರ ಬೈಪಾಸ್ ಮುಖಾಂತರ ಬೆಳಗಾವಿ ಕಡೆಗೆ ಸಂಚರಿಸಬೇಕು.

ಬೆಳಗಾವಿ ಕಡೆಯಿಂದ ಧಾರವಾಡ ನಗರಕ್ಕೆ ಆಗಮಿಸುವ ಲಘು ವಾಹನಗಳು ಕೆಇಬಿ ಗ್ರಿಡ್ ಮಾರ್ಗವಾಗಿ ಬಸವನಗರ ಶಿರಡಿನಗರ, ಅರ್ಜಂಟ್‌ನಗರ ಪೆಪ್ಸಿ ಕಂಪನಿ ಮಾರ್ಗವಾಗಿ ಹಳೇ ಪಿಬಿ ರಸ್ತೆ ಮುಖಾಂತರ ಧಾರವಾಡ ನಗರದ ಕಡೆಗೆ ಹೋಗಬೇಕು ಎಂದು ವಿವರಿಸಿದರು.