ಸಾರಾಂಶ
ಚಾಮರಾಜನಗರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಗುರುವಾರ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದೆ ಪ್ರಯಾಣಿಕರು ವಿದ್ಯಾರ್ಥಿಗಳು ಪರದಾಡಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಹಾಸನದ ಕಾಂಗ್ರೆಸ್ ಜನ ಕಲ್ಯಾಣ ಸಮಾವೇಶಕ್ಕೆ ಚಾಮರಾಜನಗರ ಸಾರಿಗೆ ವಿಭಾಗವು 275 ಬಸ್‌ಗಳನ್ನು ನಿಯೋಜಿಸಿದ್ದು ಸಂಚಾರದಲ್ಲಿ ಭಾರೀ ವ್ಯತ್ಯಯ ಕಂಡುಬಂದಿತು.ಇನ್ನು, ಅರ್ಧಕ್ಕೂ ಅಧಿಕ ಸಂಖ್ಯೆಯಲ್ಲಿ ಬಸ್ ನಿಯೋಜಿಸಿರುವುದರಿಂದ ಬಸ್‌ಗಳಿಂದ ತುಂಬಿರುತ್ತಿದ್ದ ಚಾಮರಾಜನಗರ ಬಸ್ ನಿಲ್ದಾಣದಲ್ಲಿ ಬೆರಳಿಕೆ ಬಸ್ ಇದ್ದದ್ದು ಕಂಡುಬಂದಿತು. ಶಾಲೆಗೆ ತೆರಳುವ ವಿದ್ಯಾರ್ಥಿಗಳು, ನೌಕರಿಗೆ ತೆರಳುವವರಿಗೆ ತೀವ್ರ ಅಡಚಣೆ ಉಂಟಾಯಿತು. ಹಾಸನದಲ್ಲಿ ನಡೆಯಲಿರುವ ಜನ ಕಲ್ಯಾಣ ಸಮಾವೇಶಕ್ಕೆ ಜಿಲ್ಲೆಯಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಸಿದ್ದರಾಮಯ್ಯ ಅಭಿಮಾನಿಗಳು ಗುರುವಾರ ಬೆಳಗ್ಗೆ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ, ಯಳಂದೂರು ಮತ್ತು ಹನೂರು ತಾಲೂಕಿನ ವಿವಿಧ ಗ್ರಾಮಗಳಿಂದ ಸಾವಿರಾರು ಮಂದಿ ಕಾರ್ಯಕರ್ತರು ತೆರಳಿದ್ದರು. ಗುಂಡ್ಲುಪೇಟೆ ಡಿಪೋದ ಸಾರಿಗೆ ಬಸ್‌ಗಳು ಒಪ್ಪಂದದ ಮೇರೆಗೆ ಹಾಸನದಲ್ಲಿ ಗುರುವಾರದ ಕಾಂಗ್ರೆಸ್ ಸಮಾವೇಶಕ್ಕೆ ಹೋದ ಕಾರಣ ಸಾರಿಗೆ ಬಸ್‌ಗಳ ಕೊರತೆಯಿಂದ ಪ್ರಯಾಣಿಕರು ಪರದಾಟ ನಡೆಸಿದರು.
ಸಮಾವೇಶಕ್ಕೆ ೯೦ ಸಾರಿಗೆ ಬಸ್‌ಗಳು ಹೋಗಿರುವ ಕಾರಣ ಡಿಪೋದಲ್ಲಿ ಇದ್ದ ಸಾರಿಗೆ ಬಸ್‌ಗಳನ್ನೇ ಉಪಯೋಗಿಸಿದ ಕಾರಣ ಸಮರ್ಪಕ ಸೇವೆ ಪ್ರಯಾಣಿಕರಿಗೆ ಸಿಗಲಿಲ್ಲ. ಹಾಸನಕ್ಕೆ ಸಾರಿಗೆ ಬಸ್‌ಗಳು ಹೋಗುತ್ತವೆ ಎಂಬ ಮಾಹಿತಿ ಅರಿತಿದ್ದ ಸರ್ಕಾರಿ, ಖಾಸಗಿ ನೌಕರರು ಕಾರು, ಬಸ್‌ಗಳಲ್ಲಿ ಕಚೇರಿಗಳಿಗೆ ಬರುವಂತಾಯಿತು ಎಂದು ಸರ್ಕಾರಿ ನೌಕರೊಬ್ಬರು ಹೇಳಿದರು. ಸಾರಿಗೆ ಬಸ್‌ಗಳ ಅಭಾವದಿಂದ ಪ್ರಯಾಣಿಕರು ಸಾರಿಗೆ ಬಸ್ ಬರುವ ತನಕ ಕಾದು ನಿಂತು ಹೋಗಿದ್ದಾರೆ ಎಂದು ಬೇಗೂರು ನಂದಿನ ಪಾರ್ಲರ್ ವಿತರಕ ನಾಗೇಶ್ ಹೇಳಿದ್ದಾರೆ.