ಪೊಳಲಿ, ಉಳಾಯಿಬೆಟ್ಟು ಸೇತುವೆ ಘನ ವಾಹನ ಸಂಚಾರ ನಿಷೇಧ: ತುರ್ತು ಓಡಾಟ ಅನುಮತಿಗೆ ಆಗ್ರಹ

| Published : Aug 18 2024, 01:51 AM IST

ಪೊಳಲಿ, ಉಳಾಯಿಬೆಟ್ಟು ಸೇತುವೆ ಘನ ವಾಹನ ಸಂಚಾರ ನಿಷೇಧ: ತುರ್ತು ಓಡಾಟ ಅನುಮತಿಗೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಸಾರ್ವಜನಿಕರ ಹಿತಾಸಕ್ತಿ ದೃಷ್ಟಿಯಿಂದ ಹಳೆ ಅಥವಾ ಶಿಥಿಲ ಸೇತುವೆಗಳಲ್ಲಿ ಲಾರಿಗಳ ಸಹಿತ ಇತರ ಘನ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಆದರೆ ಪ್ರಯಾಣಿಕರ ಅನುಕೂಲಕ್ಕಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಪೊಳಲಿ ಸೇತುವೆ, ಉಳಾಯಿಬೆಟ್ಟು ಸೇತುವೆ ಸಹಿತ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು ಆರು ಹಳೆ ಸೇತುವೆಗಳ ದುರಸ್ತಿ ಅಥವಾ ಹೊಸ ಸೇತುವೆ ನಿರ್ಮಾಣ ಹಿನ್ನೆಲೆಯಲ್ಲಿ ಪೊಳಲಿ ಮತ್ತು ಉಳಾಯಿಬೆಟ್ಟು ಸೇತುವೆಯಲ್ಲಿ ಘನ ವಾಹನ ಸಂಚಾರ ನಿಷೇಧಗೊಳಿಸಿ ಆದೇಶ ಹೊರಡಿಸಿರುವ ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರೊಂದಿಗೆ ಶುಕ್ರವಾರ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ಡಾ. ಭರತ್ ಶೆಟ್ಟಿ, ರಾಜೇಶ್ ನಾಯ್ಕ್ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ತುರ್ತು ಸಭೆ ನಡೆಸಿ ಪರ್ಯಾಯ ವ್ಯವಸ್ಥೆ ಬಗ್ಗೆ ಚರ್ಚಿಸಿದರು.ಮುಖ್ಯವಾಗಿ ಪೊಳಲಿ ಸೇತುವೆ ಮತ್ತು ಉಳಾಯಿಬೆಟ್ಟು ಕಿರು ಸೇತುವೆಯಲ್ಲಿ ಘನ ವಾಹನ ಸಂಚಾರ ನಿಷೇಧಿಸಿ, ದೂರದ ರಸ್ತೆಗಳಲ್ಲಿ ಸುತ್ತುಬಳಸಿ ವಾಹನ ಸಂಚಾರಕ್ಕೆ ಅವಕಾಶ ನೀಡಿರುವುದರಿಂದ ಈ ಭಾಗದ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಕಾರ್ಮಿಕರು, ಭಕ್ತಾದಿಗಳಿಗೆ ಸಾಕಷ್ಟು ತೊಂದರೆಯಾಗಲಿದೆ. ಇದಕ್ಕೆ ಪರ್ಯಾಯವಾಗಿ ಸೇತುವೆಗಳಲ್ಲಿ ಶಾಲಾ-ಕಾಲೇಜುಗಳ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡುವ ಬಗ್ಗೆಯೂ ಸಲಹೆ ಸೂಚನೆ ನೀಡಿದರು.

ಪೊಳಲಿ ಸೇತುವೆಯ ಎರಡೂ ಕಡೆಯಲ್ಲಿ ಬಸ್ ಸೇವೆಗೆ ಅವಕಾಶ ಮಾಡಿಕೊಟ್ಟರೆ ಪ್ರಯಾಣಿಕರ ಸಮಸ್ಯೆಗೆ ಒಂದಷ್ಟು ಪರಿಹಾರ ನೀಡಿದಂತಾಗುತ್ತದೆ ಎಂದು ಸಂಸದ-ಶಾಸಕರ ನಿಯೋಗ ಜಿಲ್ಲಾಧಿಕಾರಿಗೆ ಮನವರಿಕೆ ಮಾಡಿದರು.

ಸಾರ್ವಜನಿಕರ ಹಿತಾಸಕ್ತಿ ದೃಷ್ಟಿಯಿಂದ ಹಳೆ ಅಥವಾ ಶಿಥಿಲ ಸೇತುವೆಗಳಲ್ಲಿ ಲಾರಿಗಳ ಸಹಿತ ಇತರ ಘನ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಆದರೆ ಪ್ರಯಾಣಿಕರ ಅನುಕೂಲಕ್ಕಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.