ಕೊಡಗು ಜಿಲ್ಲಾದ್ಯಂತ ಭಾರಿ ಗಾಳಿ ಮಳೆ: ಜನ ಜೀವನ ತತ್ತರ

| Published : May 26 2025, 12:00 AM IST

ಸಾರಾಂಶ

ಜಿಲ್ಲಾದ್ಯಂತ ಭಾನುವಾರ ಕೂಡ ಗಾಳಿ ಸಹಿತ ಮಳೆಯಾಗಿದೆ. ಮುಂಗಾರು ಮಳೆಗೆ ಜನರು ತತ್ತರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಜಿಲ್ಲಾದ್ಯಂತ ಭಾನುವಾರ ಕೂಡ ಗಾಳಿ ಸಹಿತ ಭಾರಿ ಮಳೆಯಾಗಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮುಂಗಾರು ಮಳೆ ಆರಂಭದಲ್ಲೇ ಅಬ್ಬರಿಸುತ್ತಿರುವ ಪರಿಣಾಮ ಕೊಡಗಿನಲ್ಲಿ ಜನರು ತತ್ತರಿಸಿದ್ದಾರೆ.

ಭಾರಿ ಮಳೆಯಿಂದ ಮಡಿಕೇರಿ ತಾಲೂಕಿನ ಭಾಗಮಂಡಲದ ತ್ರಿವೇಣಿ ಸಂಗಮ ಸಂಪೂರ್ಣ ಭರ್ತಿಯಾಗಿದೆ. ಇಲ್ಲಿನ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದೆ. ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದು, ತ್ರಿವೇಣಿ ಸಂಗಮದ ಉದ್ಯಾನವನಕ್ಕೆ ನೀರು ನುಗ್ಗಿದೆ. ಭಾಗಮಂಡಲ ನಾಪೋಕ್ಲು ರಸ್ತೆ ಮೇಲೆ ನೀರು ಹರಿಯುವ ಸಾಧ್ಯತೆ ಎದುರಾಗಿದೆ. ಮಳೆ ಮುಂದುವರಿದಲ್ಲಿ ಭಾಗಮಂಡಲ-ನಾಪೋಕ್ಲು ರಸ್ತೆ ಸಂಚಾರ ಬಂದ್ ಆಗುವ ಸಾಧ್ಯತೆಯಿದೆ.ವಿರಾಜಪೇಟೆಯ ಹಲವು ಬಡಾವಣೆಗಳಿಗೆ ಚರಂಡಿ ನೀರು ಹರಿದಿದೆ. ವಿರಾಜಪೇಟೆ ಪಟ್ಟಣದ ವಿಜಯನಗರದಲ್ಲಿ ಘಟನೆ ನಡೆದಿದ್ದು, ಹಲವು ಮನೆಗಳಿಗೆ ನೀರು ನುಗ್ಗಿದೆ. ವಿಜಯನಗರ ತಗ್ಗು ಪ್ರದೇಶವಾಗಿರುವ ಹಿನ್ನೆಲೆ ಸಂಪೂರ್ಣ ಜಲಾವೃತವಾಗಿದೆ.

ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಕುಶಾಲನಗರ, ಭಾಗಮಮಂಡಲ, ಸೋಮವಾರಪೇಟೆ, ವಿರಾಜಪೇಟೆ ಸೇರಿದಂತೆ ಹಲವು ಭಾಗಗಳಲ್ಲೂ ಭಾರೀ ಮಳೆಯಾಗಿದೆ.ಸೋಮವಾರಪೇಟೆ-ಮಡಿಕೇರಿ ಮುಖ್ಯ ರಸ್ತೆಯಲ್ಲಿ ಮರ ಧರೆಗುರುಳಿದೆ. ಮರದ ಜೊತೆಗೆ ವಿದ್ಯುತ್ ಕಂಬಗಳು ಕೂಡ ಮುರಿದು ಬಿದ್ದಿದೆ. ಇದರಿಂದ ಕೆಲ ಕಾಲ ಸೋಮವಾರಪೇಟೆಯಿಂದ ಮಡಿಕೇರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಬಂದ್ ಆಗಿತ್ತು. ಭಾರಿ ಗಾತ್ರದ ಮರ, ವಿದ್ಯುತ್ ಕಂಬ ರಸ್ತೆಗೆ ಅಡ್ಡಲಾಗಿ ಬಿದ್ದ ಹಿನ್ನೆಲೆ ರಸ್ತೆ ಸಂಚಾರ ತಾತ್ಕಾಲಿಕ ಬಂದ್ ಆಗಿತ್ತು. ನಂತರ ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.ಮತ್ತೊಂದೆಡೆ ಕುಶಾಲನಗರ ವ್ಯಾಪ್ತಿಯಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಕಾವೇರಿ ನದಿ ಹರಿಯುವಿಕೆಯಲ್ಲಿ ಭಾರಿ ಹೆಚ್ಚಳವಾಗಿದೆ. ಒಂದೇ ದಿನ ಆರು ಅಡಿಯಷ್ಟು ನೀರು ಹೆಚ್ಚಳವಾಗಿದೆ. ಮಳೆಯಿಂದಾಗಿ ಕಾವೇರಿ ನೀರು ಮೈದುಂಬಿ ಹರಿಯುತ್ತಿದೆ.ಮಡಿಕೇರಿಯಲ್ಲಿ ಭಾರಿ ಗಾಳಿ ಮಳೆಯಾಗಿದೆ. ನಗರದ ಎಫ್ಎಂಸಿ ಕಾಲೇಜು ರಸ್ತೆ ಬಂದ್ ಆಗುವ ಆತಂಕ ಉಂಟಾಗಿದೆ. ನಾಲ್ಕು ದಿನಗಳಿಂದ ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕಾಮಗಾರಿ ನಡೆಯುತ್ತಿರುವ ಜಾಗದಲ್ಲಿ ಮಣ್ಣು ಕುಸಿಯುವ ಹಂತ ತಲುಪಿದೆ. ಕಳೆದ ಒಂದು ವರ್ಷದಿಂದ ತಡೆಗೋಡೆ ಕಾಮಗಾರಿ ನಡೆಯುತ್ತಿದೆ. ಆದರೆ ಕಾಮಗಾರಿ ಅಪೂರ್ಣಗೊಂಡಿರುವ ಹಿನ್ನೆಲೆ ಮಣ್ಣು ಜರಿಯುತ್ತಿದೆ. ತಡೆಗೋಡೆ ಎರಡು ಬದಿಯಲ್ಲಿ ಮತ್ತೆ ಕಾಲುವೆಗೆ ಮಣ್ಣು ಜಾರುತ್ತಿದ್ದು, ಇದರಿಂದ ರಸ್ತೆ ಕುಸಿಯುವ ಆತಂಕ ಉಂಟಾಗಿದೆ.

ಮಡಿಕೇರಿ ಗ್ರಾಮಾಂತರ ಠಾಣೆ, ಡಿವೈಎಸ್ಪಿ ಕಚೇರಿ, ಸಂಚಾರಿ ಠಾಣೆ, ಎಫ್ಎಂಸಿ ಕಾಲೇಜು, ಐಟಿಐ ಕಾಲೇಜು ಗಾಳಿಬೀಡುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಕಳೆದ ಮಳೆಗಾಲದಲ್ಲೂ ಈ ರಸ್ತೆ ಕುಸಿದಿತ್ತು. ಹೀಗಾಗಿ ಕಳೆದ ಮಳೆಗಾಲದಲ್ಲೂ ಸಂಚಾರ ಬಂದ್ ಮಾಡಲಾಗಿತ್ತು.ಭಾನುವಾರ ಮಧ್ಯಾಹ್ನದ ಬಳಿಕ ಮಳೆ ಅಬ್ಬರ ಹೆಚ್ಚಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿ, ಗಾಳೀಬೀಡು ಭಾಗಮಂಡಲ ತಲಕಾವೇರಿ, ವಿರಾಜಪೇಟೆ, ನಾಪೋಕ್ಲು, ಸಿದ್ದಾಪುರ ಭಾಗಗಳಲ್ಲಿ ಭಾರಿ ಮಳೆಯಾಗಿದ್ದು, ಜನರು ಹೊರಗೆ ಬರಲಾರದಷ್ಟು ಮಳೆ ಅಬ್ಬರಿಸಿದೆ. ಬೆಳಗ್ಗೆ 11 ಗಂಟೆ ಬಳಿಕ ಸ್ವಲ್ಪ ತಗ್ಗಿದ್ದ ಮಳೆ, ಮಧ್ಯಾಹ್ನ ಒಂದು ಗಂಟೆಯಿಂದ ಧಾರಾಕಾರವಾಗಿದೆ. ವಾಹನ ಚಲಾಯಿಸಲು ಸವಾರರು ಪರದಾಡುವಂತಾಯಿತು. ಗಂಟೆಗೆ 45 ರಿಂದ 50 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಿದೆ.

ಮಡಿಕೇರಿಯಲ್ಲಿ ಸುರಿಯುತ್ತಿರುವ ಮಳೆಗೆ ಬಹುತೇಕ ನಗರದ ಚರಂಡಿಗಳು ಭರ್ತಿಯಾಗಿ, ಕೆಲವು ಕಡೆ ರಸ್ತೆಯಲ್ಲಿ ನೀರು ಹರಿಯುತ್ತಿರುವ ದೃಶ್ಯ ಕಂಡುಬಂದಿದೆ. ಮಳೆಯ ರಭಸಕ್ಕೆ ಮಡಿಕೇರಿಯ ಕಾವೇರಿ ಹಾಲ್‌ನ ಸಭಾಂಗಣಕ್ಕೆ ನೀರು ನುಗ್ಗಿ, ಭಾನುವಾರ ಮದುವೆ ಸಮಾರಂಭಕ್ಕೆ ಆಗಮಿಸಿದವರು ಮದುವೆ ಮಂಟಪದ ಒಳಗಡೆ ನೀರಿನಲ್ಲಿ ನಡೆದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಭಾಗಮಂಡಲ ಮಾರ್ಗದ ಬೆಟ್ಟಗೇರಿಯಲ್ಲಿ ಗಾಳಿ ಮಳೆಗೆ ಬಿದ್ದಿದ್ದ ವಿದ್ಯುತ್ ಕಂಬ ಮತ್ತು ಮರವನ್ನು ತೆರವುಗೊಳಿಸುವ ಕಾರ್ಯ ನಡೆಯಿತು. ಮರ ಬಿದ್ದು ಗುಡ್ಡೆಹೊಸೂರು- ಸಿದ್ದಾಪುರ ರಸ್ತೆ ಕೆಲ ಕಾಲ ಬಂದ್ ಆಗಿತ್ತು. ಮಂಗಳೂರು ರಸ್ತೆಯ ಕಾಟಕೇರಿ ಬಳಿ ಲಾರಿಯ ಮೇಲೆ ಮರ ಬಿದ್ದು ಕೆಲ ಕಾಲ ರಸ್ತೆ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.

ಮಡಿಕೇರಿ- ಸುಂಟಿಕೊಪ್ಪ ಮಾರ್ಗ ಮಧ್ಯದ ಸಿಂಕೋನ ಬಳಿ ವಿದ್ಯುತ್ ಕಂಬ ಹಾಗೂ ಮರ ಬಿದ್ದು ವಾಹನಗಳ ಸಂಚಾರಕ್ಕೆ ತೊಡಕ್ಕಾಗಿತ್ತು. ವಿಷಯ ಅರಿತು ಸ್ಥಳಕ್ಕೆ ಧಾವಿಸಿ ಬಂದ ಬೋಯಿಕೇರಿಯ ವರ್ತಕ ಉಮ್ಮರ್ ಹಾಗೂ ಜುನೈದ್, ಪ್ರಕಾಶ್, ಶರೀಫ್ ಹಾಗೂ ಪವರ್ ಮ್ಯಾನ್ ಹಾಗೂ ಇತರರು ಸುರಿಯುವ ಮಳೆ ಗಾಳಿಯನ್ನು ಲೆಕ್ಕಿಸದೆ ಯಂತ್ರದ ಸಹಾಯದಿಂದ ಮರವನ್ನು ಕತ್ತರಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಮಡಿಕೇರಿ ನಗರದ ಅಶೋಕಪುರದಲ್ಲಿ ಸುರಿದ ಬಾರಿ ಮಳೆಗೆ ವಿದ್ಯುತ್ ಕಂಬದ ಮೇಲೆ ಭಾರಿ ಮರವೊಂದು ಮುರಿದು ಬಿದ್ದು ಸಂಚಾರಕ್ಕೆ ಅಡಚಣೆಯಾಗಿತ್ತಲ್ಲದೆ ಕಾರೊಂದು ಜಖಂಗೊಂಡಿತ್ತು.

ವಿರಾಜಪೇಟೆ ಮೀನು ಪೇಟೆಯಲ್ಲಿ ರಾಜಕಾಲುವೆಯ ನೀರು ಮುಖ್ಯರಸ್ತೆ ಮೇಲೆ ನಿಂತು ವಾಹನ ಸವಾರರರು ಪರದಾಡುವಂತಾಯಿತು. ಅಂಗಡಿ ಮುಗ್ಗಟ್ಟುಗಳಿಗೆ ಮಳೆ ನೀರು ನುಗ್ಗಿ ತೊಂದರೆಯಾಯಿತು.

ಕುಶಾಲನಗರ ತಾಲೂಕಿನ ವಾಲ್ನೂರು- ಚೆಟ್ಟಳ್ಳಿ ರಸ್ತೆ ಮಧ್ಯ ಭಾಗದಲ್ಲಿ ಭಾರಿ ಗಾತ್ರದ ಮರ ಬಿದ್ದಿದ್ದು ಕುಶಾಲನಗರ ತಾಲೂಕು ತಹಸೀಲ್ದಾರ್ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆದಿದೆ. ಭಾರಿ ಗಾಳಿ ಮಳೆಯಿಂದ ಆರ್ಜಿ ಗ್ರಾಮದ ಕಲ್ಲುಬಾಣೆಯಲ್ಲಿ ಕೆ.ಕೆ. ಮಜೀದರವರ ವಾಸದ ಮನೆಯ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ.ಧರೆಗುರುಳಿದ ವಿದ್ಯುತ್ ಕಂಬಗಳು

ಸೆಸ್ಕ್ ಮಡಿಕೇರಿ ವಿಭಾಗ ವ್ಯಾಪ್ತಿಯಲ್ಲಿ ಶನಿವಾರ ಹಾಗೂ ಭಾನುವಾರ ಸುರಿದ ವಿಪರೀತ ಗಾಳಿ ಮಳೆಗೆ ಈ ವರೆಗೆ ಸುಮಾರು 197 ಕಂಬಗಳು ಹಾನಿಯಾಗಿದೆ. ಅಲ್ಲಲ್ಲಿ ಮರಗಳು ಕಂಬಗಳು ಬಿದ್ದು ರಸ್ತೆ ಸಂಚಾರಕ್ಕೆ ತೊಂದರೆ ಆಗಿದೆ. ಸೆಸ್ಕ್ ವ್ಯಾಪ್ತಿಯ ಪವರ್ ಮೆನ್ ಗಳು ಹಾಗೂ ಗ್ಯಾಂಗ್ ಮೆನ್ ಜತೆಗೆ ಶಾಖಾಧಿಕಾರಿಗಳು ಸಾರ್ವಜನಿಕರ ಸಹಕಾರದಿಂದ ತೆರವು ಕೆಲಸ ಮಾಡುತ್ತಿದ್ದು. ಜತೆಗೆ 15 ಗುತ್ತಿಗೆ ದಾರರ ತಂಡ ಕೆಲಸ ಮಾಡುತ್ತಿದ್ದು ಗ್ರಾಹಕರಿಗೆ ವಿದ್ಯುತ್ ಮರು ಸಂಪರ್ಕ ಮಾಡಲು ಪ್ರಯತ್ನಿಸಿದ್ದಾರೆ.