ಸಾರಾಂಶ
ಕಾರಟಗಿ: ಪಟ್ಟಣದಲ್ಲಿ ಗುರುವಾರ ರಾತ್ರಿ ಬೀಸಿದ ಭಾರಿ ಬಿರುಗಾಳಿ ಸಹಿತ ಮಳೆಗೆ ಪಟ್ಟಣದ ವಿವಿಧೆಡೆ ಬೃಹತ್ ಮರಗಳು ನೆಲಕ್ಕುರುಳಿದ್ದು, ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.
ಕಳೆದ ೨೪ ಗಂಟೆಗಳಲ್ಲಿ ಕಾರಟಗಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಭಾರಿ ಪ್ರಮಾಣದ ಮಳೆ ಸುರಿದಿದ್ದು, ಹಳ್ಳಕೊಳ್ಳಗಳು ತುಂಬಿ ಹರಿದಿವೆ. ಶುಕ್ರವಾರ ಬೆಳಗ್ಗಿನ ವರೆಗೆ ಒಟ್ಟು ೨೩.೪ ಮಿಮೀ ಮಳೆ ದಾಖಲಾಗಿದ್ದರೆ, ಸಿದ್ದಾಪುರದಲ್ಲಿ ೧೪ ಮಿಮೀ ಬಿದ್ದಿದೆ. ಇನ್ನೂ ಕಾರಟಗಿ ಪಶ್ಚಿಮ ಮೇಲ್ಭಾಗದ ನವಲಿಯಲ್ಲಿ ದಾಖಲೆ ೮೯.೪ ಮಿಮೀ ಮಳೆಯಾಗಿದ್ದರ ಪರಿಣಾಮ ತಾಲೂಕಿನ ಬಹುತೇಕ ಹಳ್ಳಗಳು ಶುಕ್ರವಾರ ಸಂಜೆಯ ವರೆಗೂ ತುಂಬಿ ಹರಿದಿವೆ.ಪಟ್ಟಣದ ೧೪ನೇ ವಾರ್ಡ್ ರಾಮನಗರದಲ್ಲಿ ೧೪ ಶೆಡ್‌ಗಳು ನೆಲಸಮಗೊಂಡಿವೆ. ಇನ್ನು ಹಲವು ವಿದ್ಯುತ್ ಕಂಬಗಳು ಮತ್ತು ಬೃಹತ್ ಮರಗಳು ನೆಲಕ್ಕುರುಳಿವೆ. ಬಿರುಗಾಳಿ ಪರಿಣಾಮ ವಿದ್ಯುತ್ ಕಂಬಗಳು ನೆಲ ಕಚ್ಚಿವೆ. ಇದು ಅಲ್ಲದೇ ಪಟ್ಟಣದ ೬ ಮತ್ತು ೭ ವಾರ್ಡ್‌ನಲ್ಲಿಯೂ ವಿದ್ಯುತ್ ಕಂಬಕ್ಕೆ ಧಕ್ಕೆಯಾಗಿದೆ. ಒಟ್ಟು ೧೩ ಗಂಟೆಗಳ ಕಾಲ ಪಟ್ಟಣ ವಿದ್ಯುತ್ ಇಲ್ಲದೇ ಕತ್ತಲ್ಲಿಯೇ ಕಳೆದಿದೆ.
ಗುರುವಾರ ರಾತ್ರಿ ರಾಮನಗರಕ್ಕೆ ಧಾವಿಸಿದ ಕಂದಾಯ ಹಾಗೂ ಪುರಸಭೆ ಅಧಿಕಾರಿಗಳು ಶೆಡ್ ಕಳೆದುಕೊಂಡವರಿಗೆ ಸರ್ಕಾರಿ ಶಾಲೆಯಲ್ಲಿ ಉಳಿದುಕೊಳ್ಳಲು ಮತ್ತು ಊಟದ ವ್ಯವಸ್ಥೆ ಕಲ್ಪಿಸಿದರು.ಶುಕ್ರವಾರ ಬೆಳಗ್ಗೆ ತಹಸೀಲ್ದಾರ್ ಎಂ. ಕುಮಾರಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ಸುರೇಶ ಶೆಟ್ಟರ್, ಜೆಸ್ಕಾಂ ಎಇ ಶರಣಪ್ಪ, ಕಂದಾಯ ನಿರೀಕ್ಷಕಿ ಸಂಗಮ್ಮ ಹಿರೇಮಠ, ಗ್ರಾಮಲೆಕ್ಕಾಧಿಕಾರಿ ದೊಡ್ಡನಗೌಡ ಇತರರು ಇದ್ದ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದ ಬಳಿಕ ಜೆಸಿಬಿಯಿಂದ ಯುದ್ಧೋಪಾದಿಯಲ್ಲಿ ಬಿದ್ದ ಮರಗಳನ್ನು ಮತ್ತು ಕಂಬಗಳನ್ನು ತೆರವುಗೊಳಿಸಿದರು. ಗಾಳಿಗೆ ಶೆಡ್ ಕಳೆದುಕೊಂಡವರ ಮಾಹಿತಿ ಪಡೆದು, ಪರಿಹಾರ ಒದಗಿಸುವ ಭರವಸೆ ನೀಡಿದರು. ಪರಿಹಾರಕ್ಕೆ ಒತ್ತಾಯ: ಗಾಳಿ ಮಳೆಗೆ ಶೆಡ್ ಕಳೆದುಕೊಂಡು ನಿರಾಶ್ರಿತ ಕುಟುಂಬಗಳಿಗೆ ₹50 ಸಾವಿರ ಪರಿಹಾರಧನ ನೀಡಬೇಕು ಎಂದು ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಮೌನೇಶ ದಢೇಸುಗೂರು ಒತ್ತಾಯಿಸಿದ್ದಾರೆ.
ರಾಮನಗರದ ಹಾನಿ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಮಾತನಾಡಿದರು.ಶೆಡ್ ಕಳೆದುಕೊಂಡವರು ಕಡುಬಡವರು. ಜಿಲ್ಲಾಧಿಕಾರಿಗೆ ವಾಸ್ತವ ಸ್ಥಿತಿಯ ವರದಿ ಸಲ್ಲಿಸಿ, ₹50 ಸಾವಿರ ಪರಿಹಾರಧನ ನೀಡಬೇಕು. ತಾತ್ಕಾಲಿಕವಾಗಿ ಅವರ ವಸತಿ ಹಾಗೂ ಊಟೋಪಚಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಪುರಸಭೆ ಸದಸ್ಯರಾದ ಬಸವರಾಜ ಕೊಪ್ಪದ್, ಆನಂದ, ಮಂಡಲ ಅಧ್ಯಕ್ಷ ಮಂಜುನಾಥ ಮಸ್ಕಿ, ವೀರಭದ್ರ ಮಡಿವಾಳ, ಅಯ್ಯನಗೌಡ, ಸಿದ್ದು ಯರಡೋಣಾ, ಶರಣಪ್ಪ ಬಳೂಟಗಿ ಇತರರಿದ್ದರು.ಮಳೆ ದಾಖಲು: ಗಂಗಾವತಿ-೧೨.೫ ಮಿಮೀ, ವೆಂಕಟಗಿರಿ-೪೧.೨ ಮಿಮೀ, ಮರಳಿ-೬೬.೧ ಮಿಮೀ, ವಡ್ಡರಹಟ್ಟಿ-೩೪.೨ ಮಿಮೀ, ಕಾರಟಗಿ-೨೩.೪ ಮಿಮೀ, ಹುಲಿಹೈದರ್ ೩೯.೨ ಮಿಮೀ, ನವಲಿ-೮೯.೪ ಮಿಮೀ ಮಳೆ ದಾಖಲಾಗಿದೆ.