ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿಕೊಡಗು ಜಿಲ್ಲೆಯಾದ್ಯಂತ ಭಾರಿ ಗಾಳಿ ಮಳೆಯಾಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯಿಂದಾಗಿ ಮನೆಯ ಗೋಡೆ ಬಿದ್ದ ಪರಿಣಾಮ ಸೋಮವಾರಪೇಟೆಯಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಕುಂಬೂರಿನಲ್ಲಿ ಚಲಿಸುತ್ತಿದ್ದ ಆಟೋ ಮೇಲೆ ಮರ ಬಿದ್ದ ಪರಿಣಾಮ ಚಾಲಕ ಹಾಗೂ ಪ್ರಯಾಣಿಕರು ಗಾಯಗೊಂಡಿದ್ದಾರೆ.ಸೋಮವಾರಪೇಟೆ ತಾಲೂಕಿನ ಹಾನಗಲ್ಲು ಗ್ರಾಮದಲ್ಲಿ ಶನಿವಾರ ಬೆಳಗ್ಗೆ 5.30ಕ್ಕೆ ಘಟನೆ ಸಂಭವಿಸಿದ್ದು, ಮನೆಯ ಗೋಡೆ ಬಿದ್ದು
ಕಲಬುರಗಿ ಜಿಲ್ಲೆ, ಅಫ್ಜಲ್ ಪುರದ ಸುಷ್ಮಾ(29) ಮೃತ ಮಹಿಳೆ. ಮನೆಯೊಳಗಿದ್ದ ಈರ್ವರು ಮಕ್ಕಳು ಹಾಗೂ ಸಹೋದರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಕಳೆದ ಎರಡು ವರ್ಷದ ಹಿಂದೆ ಕುಟುಂಬ ಸೋಮವಾರಪೇಟೆಯಲ್ಲಿ ನೆಲೆಸಿತ್ತು. ಮಣ್ಣಿನ ಗೋಡೆ ಕುಸಿದು ತಲೆ ಭಾಗಕ್ಕೆ ಬಿದ್ದ ಹಿನ್ನೆಲೆ ಸ್ಥಳದಲ್ಲೇ ಮಹಿಳೆ ಸಾವಿಗೀಡಾಗಿದ್ದಾರೆ.ಮೂರನೇ ಬಾರಿಗೆ ಮುಳುಗಡೆಅತಿ ಹೆಚ್ಚಿನ ಮಳೆಯಿಂದಾಗಿ ಮೂರನೇ ಬಾರಿಗೆ ತ್ರಿವೇಣಿ ಸಂಗಮ ಮುಳುಗಡೆಯಾಗಿದೆ. ಮಡಿಕೇರಿ ತಾಲೂಕಿನ ಭಾಗಮಂಡಲದ ತ್ರಿವೇಣಿ ಸಂಗಮ ತಲಕಾವೇರಿ, ಭಾಗಮಂಡಲ ಪುಷ್ಪಗಿರಿಬೆಟ್ಟ ಪ್ರದೇಶದಲ್ಲಿ ಎಡಬಿಡದೆ ಮಳೆಯಾಗುತ್ತಿದೆ.
ತ್ರಿವೇಣಿ ಸಂಗಮದ ಸ್ನಾನಘಟ್ಟ, ಉದ್ಯಾನವನ ಮುಳುಗಡೆಗೊಂಡಿದೆ. ಕಾವೇರಿ ಕನ್ನಿಕೆ ಮತ್ತು ಸುಜ್ಯೋತಿ ನದಿಗಳು ತುಂಬಿ ಹರಿಯುತ್ತಿದೆ.ಜಿಲ್ಲೆಯಾದ್ಯಂತ ಭಾರಿ ವೇಗದಲ್ಲಿ ಗಾಳಿ ಬೀಸುತ್ತಿರುವುದರಿಂದ ಬಹುತೇಕ ಕಡೆಗಳಲ್ಲಿ ಮರ ಬಿದ್ದು ವಾಹನ ಸಂಪರ್ಕ ಕಡಿತಗೊಂಡಿದೆ. ಅಲ್ಲದೆ ವಿದ್ಯುತ್ ಸಂಪರ್ಕದಲ್ಲಿ ಕೂಡ ವ್ಯತ್ಯಯ ಉಂಟಾಗಿದೆ.ದೇವಸ್ಥಾನಕ್ಕೆ ತೀವ್ರ ಹಾನಿ:ಭಾರಿ ಗಾಳಿ ಮಳೆ ಹಿನ್ನೆಲೆ ಮರಬಿದ್ದು ದೇವಸ್ಥಾನಕ್ಕೆ ತೀವ್ರ ಹಾನಿಯಾಗಿದೆ. ವಿರಾಜಪೇಟೆ ತಾಲೂಕಿನ ಚೂರಿಯಾಲದ ದೇವಸ್ಥಾನ ಹಾನಿಗೊಳಗಾಗಿದೆ. ಮಡಿಕೇರಿ -ಸೋಮವಾರಪೇಟೆ ಮಾರ್ಗದ ರಸ್ತೆ ಕಾಜೂರು ಬಳಿ ಮರ ರಸ್ತೆಗೆ ಅಡ್ಡ ಬಿದ್ದು ಸಂಚಾರಕ್ಕೆ ತೊಂದರೆಯಾಯಿತು.
ಅಮ್ಮತ್ತಿ ಹೋಬಳಿ ಬಿಳುಗುಂದ ಗ್ರಾಮದ ನಿವಾಸಿಯಾದ ಹೆಚ್. ಟಿ. ಗಣೇಶ್ ರವರ ವಾಸದ ಮನೆಯ ಹಿಂಬದಿಯ ಗೋಡೆಯು ಮತ್ತು ಮೇಲ್ಛಾವಣಿ ಮಳೆಯಿಂದ ಕುಸಿದು ಬಿದ್ದು ಮನೆಗೆ ತೀವ್ರ ಹಾನಿಯಾಗಿದೆ.ಕೆದಮಳ್ಳೂರು ಗ್ರಾಮದ ಚೂರಿ ಯಾಲದ ದೇವಸ್ಥಾನದ ಮೇಲೆ ಮರ ಬಿದ್ದು ದೇವಸ್ಥಾನವು ಅರ್ಧಕ್ಕಿಂತ ಹೆಚ್ಚು ಹಾನಿಯಾಗಿರುತ್ತದೆ. ಸ್ಥಳಕ್ಕೆ ವಿರಾಜಪೇಟೆ ತಹಸೀಲ್ದಾರರು ಭೇಟಿ ನೀಡಿ ಪರಿಶೀಲಿಸಿದ್ದಾರೆ.ಶನಿವಾರಸಂತೆ ಹೋಬಳಿ ಕೊರಲಳ್ಳಿ ಗ್ರಾಮ ನಿವಾಸಿಯಾದ ಸುಕನ್ಯಾ ಎಂಬುವವರ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದೆ. ಮಡಿಕೇರಿ ತಾಲೂಕು ಸಂಪಾಜೆ ಹೋಬಳಿ ಮೇಕೇರಿ ಗ್ರಾಮದ ಸುಭಾಸ್ ನಗರ ದಲ್ಲಿ ವಾಸವಿರುವ ನಸೀಮಾ ರವರ ಮನೆಯ ಮೇಲೆ ಮರ ಬಿದ್ದು ಭಾಗಶಃ ಹಾನಿ ಉಂಟಾಗಿದೆ. ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.ನಾಪೋಕ್ಲು ಹೋಬಳಿ ಎಮ್ಮೆಮಾಡು ಗ್ರಾಮದ ಅಬ್ದುಲ್ ರಹೆಮಾನ್ ರವರ ವಾಸದ ಮನೆಯ ಹಿಂಭಾಗದಲ್ಲಿ ಮರಬಿದ್ದು ಹಾನಿಯಾಗಿದೆ. ದೊಡ್ಡಕೂಡ್ಲಿ ಗ್ರಾಮದ ಕೃಷ್ಣಚಾರ್ಯ ಎಂಬುವರ ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಕುಶಾಲನಗರ ತಾಲೂಕಿನ ಕುಶಾಲನಗರ ಹೋಬಳಿ ಕೂಡಿಗೆ ಗ್ರಾಮ ಪಂಚಾಯಿತಿಯ ಬ್ಯಾಡಗೊಟ್ಟ ಗ್ರಾಮದ ನಿವಾಸಿಯಾದ ಪಾಂಡುರಂಗ ರವರ ಮನೆಗೆ ಮರ ಬಿದ್ದು ಮನೆಯ 2 ಶೀಟ್ ಹಾಗೂ ಮನೆಗೆ ಹೊಂದಿಕೊಂಡಂತೆ ಇರುವ ಕೊಟ್ಟಿಗೆ ಹಾನಿಯಾಗಿದ್ದು, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.ಭಾಗಮಂಡಲ ಹೋಬಳಿ ಕರಿಕೆ ಗ್ರಾಮದ ಸುಮತಿ ಅವರ ಮನೆಯ ಮೇಲೆ ಮರ ಬಿದ್ದು ಶೀಟ್ ಗಳು ಹಾನಿಯಾಗಿದೆ.
ಆಟೋ ಮೇಲೆ ಬಿದ್ದ ಮರ!ಚಲಿಸುತ್ತಿದ್ದ ಆಟೋ ಮೇಲೆ ಭಾರಿ ಗಾತ್ರದ ಮರ ಬಿದ್ದ ಪರಿಣಾಮ ಚಾಲಕ ಪ್ರಯಾಣಿಕರು ಗಂಬೀರ ಗಾಯಗೊಂಡಿದ್ದಾರೆ. ಸೋಮವಾರಪೇಟೆ ತಾಲೂಕಿನ ಮಾದಾಪುರ ಸಮೀಪದ ಕುಂಬೂರಿನಲ್ಲಿ ದುರ್ಘಟನೆ ಸಂಭವಿಸಿದೆ. ಮರಬಿದ್ದು ಆಟೋ ಚಾಲಕ ಪ್ರವೀಣ್, ಪ್ರಯಾಣಕಿ ಧನ್ಯ ಸ್ಥಿತಿ ಗಂಭೀರವಾಗಿದೆ.ಮರ ಬಿದ್ದಿದ್ದರಿಂದ ಆಟೋ ಸಂಪೂರ್ಣ ಜಖಂಗೊಂಡಿದೆ. ಕುಂಬೂರಿನ ಪ್ರವೀಣ್ ಗೆ ಸೇರಿದ ಆಟೋ ತಾಕೇರಿಗೆ ಬಾಡಿಗೆಗೆ ತೆರಳುತ್ತಿತ್ತು. ಈ ವೇಳೆ ಏಕಾಏಕಿ ಆಟೋ ರಿಕ್ಷಾದ ಮೇಲೆ ಮರ ಅಪ್ಪಳಿಸಿದೆ.