ಸ್ವಂತ ಹಣದಲ್ಲಿ ಕಸ ಸಂಗ್ರಹಿಸಿದ ಕೆ.ವಿ. ಶ್ರೀಧರ್

| Published : Jul 13 2025, 01:18 AM IST

ಸ್ವಂತ ಹಣದಲ್ಲಿ ಕಸ ಸಂಗ್ರಹಿಸಿದ ಕೆ.ವಿ. ಶ್ರೀಧರ್
Share this Article
  • FB
  • TW
  • Linkdin
  • Email

ಸಾರಾಂಶ

ಪೌರಕಾರ್ಮಿಕರೂ ಕೂಡ ಈ ಹೋರಾಟಕ್ಕೆ ಜತೆ, ನಗರದಲ್ಲಿ ಎತ್ತ ನೋಡಿದರೂ ತ್ಯಾಜ್ಯ ರಾಶಿ

ಕನ್ನಡಪ್ರಭ ವಾರ್ತೆ ಮೈಸೂರುಸ್ವಂತ ಹಣದಲ್ಲಿ ನಾಲ್ಕು ಟ್ರ್ಯಾಕ್ಟರ್ ಗಳ ಮೂಲಕ ಮನೆ ಮನೆಯಿಂದ ಕಸ ಸಂಗ್ರಹಿಸಿ ವಿಲೇವಾರಿ ಮಾಡುವ ಮೂಲಕ ನಗರಪಾಲಿಕೆ ಮಾಜಿ ಸದಸ್ಯ ಕೆ.ವಿ. ಶ್ರೀಧರ್ ಸಾರ್ವಜನಿಕರ ಸಂಕಷ್ಟಕ್ಕೆ ಮಿಡಿದಿದ್ದಾರೆ.ನಗರಪಾಲಿಕೆ ಸಿಬ್ಬಂದಿ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಳೆದ ಮೂರು ದಿನಗಳಿಂದ ಮುಷ್ಕರ ಕೈಗೊಂಡಿದ್ದಾರೆ. ಪೌರಕಾರ್ಮಿಕರೂ ಕೂಡ ಈ ಹೋರಾಟಕ್ಕೆ ಜತೆಯಾಗಿರುವ ಹಿನ್ನೆಲೆ ನಗರದಲ್ಲಿ ಕಸ ಸಂಗ್ರಹ, ಸ್ವಚ್ಛತಾ ಕಾರ್ಯ ಸ್ಥಗಿತಗೊಂಡಿದೆ. ಇದರಿಂದ ನಗರದಲ್ಲಿ ಎತ್ತ ನೋಡಿದರೂ ತ್ಯಾಜ್ಯ ರಾಶಿ ಕಾಣುತ್ತಿದೆ. ಹಲವು ಮನೆಗಳಲ್ಲಿ ಕೂಡ ಕಸ ಸಂಗ್ರಹವಾಗಿ ದುರ್ನಾತ ಬೀರುತ್ತಿದೆ. ಈ ಹಿನ್ನೆಲೆ ಹೆಬ್ಬಾಳು ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಕೆ.ವಿ. ಶ್ರೀಧರ್ ಅವರೇ ತಮ್ಮ ಸ್ವಂತ ಹಣದಲ್ಲಿ ನಾಲ್ಕು ಟ್ರ್ಯಾಕ್ಟರ್ಗಳನ್ನು ಬಾಡಿಗೆಗೆ ಪಡೆದು ಕೂಲಿ ಆಳುಗಳ ಮೂಲಕ ಬಡಾವಣೆ ಸ್ವಚ್ಛತೆಗೆ ಆದ್ಯತೆ ನೀಡಿದ್ದಾರೆ. ಹೆಬ್ಬಾಳು ಬಡಾವಣೆಯ ಮನೆ ಮನೆಗಳಿಗೆ ತೆರಳಿ ತಾವೇ ಮುಂದೆ ನಿಂತು ಕಸ ಸಂಗ್ರಹಿಸಿ ವಿಲೇವಾರಿ ಮಾಡುವ ಮೂಲಕ ನಗರದ ಸ್ವಚ್ಛತೆಯೊಂದಿಗೆ ಸಾರ್ವಜನಿಕರ ಸೇವೆಗೆ ಮುಂದಾಗಿದ್ದಾರೆ.ಕೆ.ವಿ. ಶ್ರೀಧರ್‌ ಮಾತನಾಡಿ, ಕಳೆದ ಮೂರು ದಿನಗಳಿಂದ ಮೈಸೂರು ಮಹಾ ನಗರಪಾಲಿಕೆ ನೌಕರರು ಕೆಲಸ ಸ್ಥಗಿತಗೊಳಿಸಿದ್ದು, ಜಾತಿ ಪ್ರಮಾಣಪತ್ರ, ಜನನ, ಮರಣ ಪ್ರಮಾಣ ಪತ್ರಗಳನ್ನು ಪಡೆಯಲು ಸಾಧ್ಯವಾಗದೇ ಜನರು ಪರದಾಡುವಂತಾಗಿದೆ. ಸಂಪೂರ್ಣವಾಗಿ ಆಡಳಿತ ವ್ಯವಸ್ಥೆ ಕುಸಿದಿದೆ. ಇದರ ಜತೆಗೆ ಪೌರ ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿದ್ದು, ಕಸ ಸಂಗ್ರಹ ಕಾರ್ಯ ನಡೆಯದೇ ಎಲ್ಲೆಂದರಲ್ಲಿ ತ್ಯಾಜ್ಯದ ರಾಶಿ ಬಿದ್ದಿದೆ. ಯುಜಿಡಿ ಸೆಕ್ಟರ್ ಸಮಸ್ಯೆ ಹೆಚ್ಚುತ್ತಿದ್ದು, ಹಲವೆಡೆಗಳಲ್ಲಿ ರಸ್ತೆಯ ಮೇಲೆ ಕೊಳಚೆ ಹರಿಯುವಂತಾಗಿದೆ. ಇದರಿಂದ ಸೊಳ್ಳೆಗಳ ಕಾಟ ಹೆಚ್ಚಾಗುವಂತಾಗಿದೆ. ಆದ್ದರಿಂದ ನನ್ನ ಸ್ವಂತ ಖರ್ಚಿನಲ್ಲಿ ನಾಲ್ಕು ಟ್ರ್ಯಾಕ್ಟರ್ ಗಳನ್ನು ಬಾಡಿಗೆ ಪಡೆದು ಮನೆ ಮನೆಗಳನನ್ನು ಕಸ ಸಂಗ್ರಹಿಸಿ ನಮ್ಮ ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು. ಸರ್ಕಾರದ ನಿರ್ಲಕ್ಷ್ಯಸರಿಯಲ್ಲನಗರಸಭೆ ಸಿಬ್ಬಂದಿ ಮುಷ್ಕರ ಕೈಗೊಂಡಿದ್ದರೂ ಸರ್ಕಾರ ಈ ಬಗ್ಗೆ ನಿರ್ಲಕ್ಷ್ಯ ಭಾವ ತೋರಿರುವುದು ಸರಿಯಲ್ಲ. ನಗರದಲ್ಲಿ ಸ್ವಚ್ಛತೆಯ ಸಮಸ್ಯೆ ದಿನೇ ದಿನೆ ತಲೆ ದೋರುತ್ತಿದೆ. ಈಗಾಗಲೇ ಕಳೆದ ಎರಡು ವರ್ಷಗಳಿಂದ ನಗರ ಪಾಲಿಕೆಯಲ್ಲಿ ಜನಪ್ರನಿಧಿಗಳು ಇಲ್ಲದೇ ಸಾರ್ವಜನಿಕರ ಸಮಸ್ಯೆಗೆ ಸೂಕ್ತ ಸ್ಪಂದನೆ ಸಿಗದಂತಾಗಿದೆ. ಈ ನಡುವೆ ಪಾಲಿಕೆ ನೌಕರರ ಮುಷ್ಕರ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿಯುವಂತೆ ಮಾಡಿದೆ. ಇದು ಜನರನ್ನು ಇನ್ನಷ್ಟು ಹೈರಾಣಾಗುವಂತೆ ಮಾಡಿದೆ. ಇದರಿಂದ ಸಾರ್ವಜನಿಕರ ಕೆಲಸ ಕಾರ್ಯಗಳೂ ಕೂಡ ಆಗುತ್ತಿಲ್ಲ. ಇಷ್ಟಾದರೂ ಸರ್ಕಾರ ಯಾವುದಕ್ಕೂ ಸ್ಪಂದಿಸದೇ ಇರುವುದು ಆಡಳಿತದ ನಿಷ್ಕಿಯತೆ ತೋರುತ್ತದೆ. ಜನಸಾಮಾನ್ಯರ ಸೇವೆಗಿಂತ ತಮ್ಮ ಕುರ್ಚಿ ಉಳಿಸಿಕೊಳ್ಳಲು ಹೋರಾಡುವುದರಲ್ಲೇ ಇವರು ಮಗ್ನರಾಗಿರುವಂತೆ ತೋರುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತ ಈ ಬಗ್ಗೆ ತುರ್ತು ಗಮನಹರಿಸಬೇಕು. ನೌಕರರ ಸಮಸ್ಯೆಗೆ ಸ್ಪಂದಿಸಿ ಅವರ ಬೇಡಿಕೆಗಳನ್ನು ಈಡೇರಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.